ADVERTISEMENT

ಬಿಜೆಪಿ ಸರ್ಕಾರದಿಂದ ಕಲ್ಯಾಣ ಕರ್ನಾಟಕದವರಿಗೆ ಗದಾಪ್ರಹಾರ: ಈಶ್ವರ ಖಂಡ್ರೆ

ಎಫ್‌ಡಿಎ ನೇಮಕಾತಿಯಲ್ಲಿ ಆದ ಅನ್ಯಾಯ ಸರಿಪಡಿಸಲು ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಮೇ 2022, 15:55 IST
Last Updated 30 ಮೇ 2022, 15:55 IST
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿದರು. ತಿಪ್ಪಣ್ಣಪ್ಪ ಕಮಕನೂರ, ಸುಭಾಷ್ ಗುತ್ತೇದಾರ, ಡಾ. ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ಶರಣಕುಮಾರ ಮೋದಿ ಇತರರು ಇದ್ದರು
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಎದುರು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿದರು. ತಿಪ್ಪಣ್ಣಪ್ಪ ಕಮಕನೂರ, ಸುಭಾಷ್ ಗುತ್ತೇದಾರ, ಡಾ. ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ, ಶರಣಕುಮಾರ ಮೋದಿ ಇತರರು ಇದ್ದರು   

ಕಲಬುರಗಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರವು ಕಲ್ಯಾಣ ಕರ್ನಾಟಕ ಭಾಗದ ವಿರೋಧಿಯಾಗಿದ್ದು, ವಿವಿಧ ಇಲಾಖೆಗಳ ನೇಮಕಾತಿಯಲ್ಲೂ ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯ ಎಸಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಕ್ರೋಶ ವ್ಯಕ್ತಪಡಿಸಿದರು.

2019–20ನೇ ಸಾಲಿನ ಎಫ್‌ಡಿಎ ನೇಮಕಾತಿ ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕದ 105 ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, 2020ರ ಸುತ್ತೋಲೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಪರೀಕ್ಷೆ ಬರೆದ ಅಭ್ಯರ್ಥಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸೋಮವಾರ ನಡೆಸುತ್ತಿದ್ದ ಪ್ರತಿಭಟನೆಗೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

‘ರಾಜ್ಯದ ವಿವಿಧ ಇಲಾಖೆಗಳಲ್ಲಿ 2.52 ಲಕ್ಷ ಹುದ್ದೆಗಳು ಖಾಲಿ ಇದ್ದು, ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ 50 ಸಾವಿರ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಆದರೆ, ಇಲ್ಲ ಸಲ್ಲದ ನಿಯಮಾವಳಿಗಳನ್ನು ಜಾರಿಗೆ ತರುವ ಮೂಲಕ ಇಲ್ಲಿನ ಅಭ್ಯರ್ಥಿಗಳಿಗೆ ಸಲ್ಲಬೇಕಿರುವ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳಲಾಗುತ್ತಿದೆ’ ಎಂದು ಟೀಕಿಸಿದರು.

ADVERTISEMENT

‘2016ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ, ಆಯ್ಕೆಪಟ್ಟಿ ತಯಾರಿಸುವಾಗ ಸ್ಥಳೀಯ ವೃಂದದ ಅಭ್ಯರ್ಥಿಗಳನ್ನು ಮೊದಲು ಮಿಕ್ಕುಳಿದ ವೃಂದದಲ್ಲಿ ಆಯ್ಕೆ ಮಾಡಿ ತದನಂತರ ಮಿಕ್ಕುಳಿದ ವೃಂದದಲ್ಲಿ ಆಯ್ಕೆಯಾಗದೇ ಹೊರಗುಳಿದ ಅರ್ಹ ಅಭ್ಯರ್ಥಿಗಳನ್ನು ಸ್ಥಳೀಯ ವೃಂದದಲ್ಲಿ ಆಯ್ಕೆ ಮಾಡಬೇಕೆಂದು ತಿಳಿಸಲಾಗಿತ್ತು. ನಂತರ 2020ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ಪ್ರತ್ಯೇಕ ಆಯ್ಕೆ ಪಟ್ಟಿ ತಯಾರಿಸುವಾಗ ಎರಡೂ ವೃಂದದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಂದ ಯಾವುದೇ ಹಂತದಲ್ಲಿ ಆಯ್ಕೆ ಪಡೆಯದೇ ಅಂತಿಮಗೊಳಿಸಬೇಕು’ ಎಂದು ಹೊಸ ಅಂಶ ಸೇರಿಸಲಾಗಿದೆ. ಪ್ರಸ್ತುತ ಈ ನಿಯಮದಂತೆ ಆಯ್ಕೆ ಪಟ್ಟಿ ತಯಾರಿಸಿರುವುದರಿಂದ 105 ಅಭ್ಯರ್ಥಿಗಳನ್ನು ಎರಡೂ ವೃಂದದಲ್ಲಿ ಆಯ್ಕೆ ಮಾಡಿ 371 (ಜೆ) ಮೀಸಲಾತಿಯಡಿ ಆಯ್ಕೆಯಾಗಬೇಕಿದ್ದ ಇನ್ನುಳಿದ ಅರ್ಹ 105 ಅಭ್ಯರ್ಥಿಗಳಿಗೆ ಉದ್ಯೋಗದಿಂದ ವಂಚಿಸಿ ಅನ್ಯಾಯ ಮಾಡಲಾಗಿದೆ’ ಎಂದು ಹರಿಹಾಯ್ದರು.

ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಮಾತನಾಡಿ, ‘371 (ಜೆ) ಸಂಪುಟ ಉಪ ಸಮಿತಿಯ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಉದ್ಯೋಗದಲ್ಲಿ ನೀಡಬೇಕಿದ್ದ ಮೀಸಲಾತಿಯನ್ನು ಯಾವುದೇ ಕಾರಣಕ್ಕೂ ತಡೆ ಹಿಡಿಯುವಂತಿಲ್ಲ ಎಂದು ಆದೇಶ ಮಾಡಿದ್ದೆವು. ಅಲ್ಲದೇ, ಇಲ್ಲಿನ ಪ್ರತಿಭಾವಂತ ಅಭ್ಯರ್ಥಿಗಳು ಸಾಮಾನ್ಯ ವೃಂದದಲ್ಲಿ ಆಯ್ಕೆಯಾದ ಬಳಿಕವೇ 371 (ಜೆ) ವೃಂದಕ್ಕೆ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದೆವು. ಆದರೆ, ಈಗಿನ ಸರ್ಕಾರಕ್ಕೆ ಇದನ್ನು ಉಳಿಸಿಕೊಂಡು ಹೋಗುವ ಕನಿಷ್ಠ ಕಾಳಜಿಯೂ ಇಲ್ಲ‘ ಎಂದರು.

‘ಮಲ್ಲಿಕಾರ್ಜುನ ಖರ್ಗೆ ಅವರ ಪ್ರಯತ್ನದ ಫಲವಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಶಿಕ್ಷಣ, ನೇಮಕಾತಿ ಹಾಗೂ ಮುಂಬಡ್ತಿಯಲ್ಲಿ ಮೀಸಲಾತಿ ಇದೆ. ಆದರೆ, ಇಂದಿನ ಬಿಜೆಪಿ ಸರ್ಕಾರ ಆ ಅವಕಾಶಗಳು ಸಿಗದಂತೆ ನೋಡಿಕೊಳ್ಳುತ್ತಿದೆ’ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ, ವಿಧಾನಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ದಲಿತ–ಮಾದಿಗ ಸಮನ್ವಯ ಸಮಿತಿ ಅಧ್ಯಕ್ಷ ಲಿಂಗರಾಜ ತಾರಫೈಲ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ರೇಣುಕಾ ಸಿಂಗೆ, ಶಿವರಾಜ, ಶರಣು ಕಿರಣಗಿ, ಶಿವಾನಂದ ಹೊನಗುಂಟಿ, ಅಜಯ್ ರೆಡ್ಡಿ, ಸಿದ್ದಾರಾಮ ಪೂಜಾರಿ, ಶ್ವೇತಾ, ರೇಣುಕಾ, ರವಿ ಜನ್ನಾ, ಸಲ್ಮಾನ್ ಇತರರು ಭಾಗವಹಿಸಿದ್ದರು.

ಇದಕ್ಕೂ ಮುನ್ನ ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

***

ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಅನ್ಯಾಯವಾಗುತ್ತಿದ್ದರೂ ಇತ್ತ ಗಮನ ಹರಿಸಲು ಈ ಭಾಗದಿಂದ ಶಾಸಕರಾಗಿ ಆಯ್ಕೆಯಾಗಿ ಸಚಿವರಾಗಿರುವವರಿಗೆ ಪುರುಸೊತ್ತಿಲ್ಲ.
-ಡಾ. ಶರಣಪ್ರಕಾಶ ಪಾಟೀಲ,ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ

*

ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್ ಅವರು ಕಷ್ಟಪಟ್ಟು ಜಾರಿಗೆ ತಂದ 371 (ಜೆ) ಕಾಯ್ದೆಯ ಸಮರ್ಪಕ ಅನುಷ್ಠಾನ ಬಿಜೆಪಿಗೆ ಬೇಕಿಲ್ಲ. ಇಲ್ಲಿನವರಿಗೆ ಸಿಗಬೇಕಿದ್ದ ಹುದ್ದೆಗಳು ಬೆಂಗಳೂರು, ಮೈಸೂರು, ಧಾರವಾಡ ಭಾಗದವರ ಪಾಲಾಗುತ್ತಿವೆ
-ಪ್ರಿಯಾಂಕ್ ಖರ್ಗೆ,ಕೆಪಿಸಿಸಿ ವಕ್ತಾರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.