ADVERTISEMENT

ಪ್ರಗತಿಪರ ಸಂಘಟನೆಗಳಿಂದ ಮೊಂಬತ್ತಿ ಮೆರವಣಿಗೆ

ದೆಹಲಿಯ ಯುವತಿ ಮೇಲಿನ ಗುಂಪು ಅತ್ಯಾಚಾರಕ್ಕೆ ಖಂಡನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 16:24 IST
Last Updated 9 ಸೆಪ್ಟೆಂಬರ್ 2021, 16:24 IST
ದೆಹಲಿಯಲ್ಲಿ ಮಹಿಳಾ ಕಾನ್‌ಸ್ಟೆಬಲ್ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಕಲಬುರ್ಗಿಯ ಜಗತ್ ವೃತ್ತದಲ್ಲಿ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು
ದೆಹಲಿಯಲ್ಲಿ ಮಹಿಳಾ ಕಾನ್‌ಸ್ಟೆಬಲ್ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ಕಲಬುರ್ಗಿಯ ಜಗತ್ ವೃತ್ತದಲ್ಲಿ ಮೊಂಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ದೆಹಲಿಯಲ್ಲಿ ಇತ್ತೀಚೆಗೆ ನಡೆದ 21 ವರ್ಷದ ಮಹಿಳಾ ಪೊಲೀಸ್‌ ಮೇಲಿನ ಅತ್ಯಾಚಾರ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಸದಸ್ಯರು ನಗರದ ಜಗತ್ ವೃತ್ತದಲ್ಲಿ ಗುರುವಾರ ಸಂಜೆ ಮೊಂಬತ್ತಿ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ‘ಕೇಂದ್ರ ಸರ್ಕಾರವು ‘ಬೇಟಿ ಪಡಾವೊ ಬೇಟಿ ಬಚಾವೊ’ ಎಂಬ ಘೋಷಣೆಯೇನೋ ಕೊಟ್ಟಿದೆ. ಆದರೆ ಕಷ್ಟ ಪಟ್ಟು ಓದಿದ ಮಗಳನ್ನು ಬದುಕಲು ಬಿಡಲಾರದಂಥ ಹೀನಾಯ ಪರಿಸ್ಥಿತಿ ಭಾರತದಲ್ಲಿದೆ. ದೆಹೆಲಿಯಲ್ಲಿ ಓದಿ ನೌಕರಿಯಲ್ಲಿರುವ ಮಗಳನ್ನು ಕಳೆದುಕೊಂಡ ಹೆತ್ತವರ ಸಂಕಟಕ್ಕೆ ಕೇಳುವವರು ಗತಿಯಿಲ್ಲವಾಗಿದೆ. ದೆಹಲಿಯಲ್ಲಿ ಡಿಫೆನ್ಸ್‌ನಲ್ಲಿ ಕಾನ್‌ಸ್ಟೆಬಲ್‌ ಆಗಿದ್ದವಳನ್ನು ಅತ್ಯಂತ ಬಾರ್ಬರವಾಗಿ ಹಲ್ಲೆ ಮಾಡಿ ಅತ್ಯಾಚಾರಗೈದು ಕೊಲೆ ಮಾಡಲಾಗಿದೆ. ಅವಳ ಶರೀರದ ಎಲ್ಲಾ ಭಾಗಗಳಲ್ಲಿಯೂ ಇರಿಯಲಾಗಿದೆ’ ಎಂದರು.

‘ರಾಜಧಾನಿ ದೆಹಲಿಯಲ್ಲಿಯೇ ಇಂತಹ ಬಾರ್ಬರಿಕ ಘಟನೆ ನಡೆದರೂ ಈವರೆಗೆ ತಪ್ಪಿತಸ್ಥರನ್ನು ಬಂಧಿಸಲಿಲ್ಲ. ಇಡೀ ಪ್ರಕರಣದ ಬಗ್ಗೆ ಸರ್ಕಾರಕ್ಕೆ ಯಾವುದೇ ಕಾಳಜಿಯಿಲ್ಲವೆಂಬುದು ತೋರುತ್ತದೆ. ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನ ಮಾಡಲಾಗಿದೆಯೆ ವಿನಃ ಸತ್ತು ಹೋದ ಈ ದೇಶದ ಮಗಳಿಗೆ ನ್ಯಾಯ ಕೊಡಿಸುವತ್ತ ಗಂಭೀರ ಕ್ರಮಗಳು ನಡೆದಿಲ್ಲ. ಇದು ಅತ್ಯಂತ ಖಂಡನೀಯವಾದದ್ದು. ದೇಶದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ದೌರ್ಜನ್ಯ ಮತ್ತು ಕೊಲೆಗಳಿಗೆ ಮಹಿಳೆಯರು ಬಲಿಯಾಗುತ್ತಿದ್ದಾರೆ. ವಾಸ್ತವದಲ್ಲಿ ಬೇಟಿ (ಮಗಳು)ಯನ್ನು ಉಳಿಸಲು ಸರ್ಕಾರಕ್ಕೆ ಬಲವಾದ ಇಚ್ಛೆಯಿಲ್ಲ ಎನ್ನುವುದು ಈ ಪ್ರಕರಣದಿಂದ ಸಾಬೀತಾದಂತೆ. ಹಾಗೆ ನೋಡಿದರೆ ದೇಶದ ತುಂಬ ಅದರಲ್ಲಿಯೂ ಬಿಜೆಪಿಯು ಆಡಳಿತದಲ್ಲಿರುವ ರಾಜ್ಯಗಳಲ್ಲಿ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸುರಕ್ಷಿತವಾಗಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಸಾಫಿಯಾ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಬೇಕಿಕು. ಯುವತಿ ಕುಟುಂಬಕ್ಕೆ ರಕ್ಷಣೆ ಒದಗಿಸಲು ಸಾಧ್ಯವಾಗಬೇಕು.
ತಪ್ಪಿತಸ್ಥರನ್ನು ಕೂಡಲೇ ಪತ್ತೆ ಹಚ್ಚಿ ಶಿಕ್ಷೆಗೆ ಒಳಪಡಿಸಬೇಕು ತ್ವರಿತಗತಿಯ ನ್ಯಾಯಾಲಯದಲ್ಲಿ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಬೇಕು. ವರ್ಮಾ ಆಯೋಗದ ಶಿಫಾರಸುಗಳನ್ನು ಕೂಡಲೇ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆಕೆ. ನೀಲಾ, ವಿವಿಧ ಸಂಘಟನೆಗಳ ಮುಖಂಡರಾದ ರೀನಾ ಡಿಸೋಜಾ,ಶಹನಾಜ್ ಅಖ್ತರ್, ರೇಣುಕಾ ಸರಡಗಿ,ಪ್ರಭು ಖಾನಾಪುರೆ,ಪದ್ಮಿನಿ ಕಿರಣಗಿ,ಜಾವೇದ್ ಹುಸೇನ್, ಶಾಅಲಂ ಖುರೇಷಿ, ದತ್ತಾತ್ರೇಯ ಇಕ್ಕಳಕಿ,ಮೇಘರಾಜ ಕಠಾರೆ,ಲವಿತ್ರ ವಸ್ತ್ರದ್,ಮೌನೇಶ, ಸ್ನೇಹಾ ಸುಸೈಟಿ, ಸುನಿತಾ, ಸಂತೋಷ ಇದ್ದರು.

ನಂತರ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.