ADVERTISEMENT

ಅಂಬೇಡ್ಕರ್ ಭಾವಚಿತ್ರ ಅವಮಾನ: ಸಿಪಿಐಎಂ, ದಲಿತ ಸಂಘಟನೆ, ವಕೀಲರಿಂದ ಪ್ರತಿಭಟನೆ

ಅಂಬೇಡ್ಕರ್ ಭಾವಚಿತ್ರಕ್ಕೆ ನ್ಯಾಯಾಧೀಶರಿಂದ ಅವಮಾನ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 14:31 IST
Last Updated 27 ಜನವರಿ 2022, 14:31 IST
ಕಲಬುರಗಿಯಲ್ಲಿ ಎಸ್ಸಿ, ಎಸ್ಟಿ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು
ಕಲಬುರಗಿಯಲ್ಲಿ ಎಸ್ಸಿ, ಎಸ್ಟಿ ವಕೀಲರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದರು   

ಕಲಬುರಗಿ: ‘ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸಂವಿಧಾನ ಶಿಲ್ಪಿ ಡಾ .ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ತೆರವುಗೊಳಿಸುವಂತೆ ಸೂಚಿಸುವ ಮೂಲಕ ರಾಯಚೂರು ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ’ ಎಂದು ಆರೋಪಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಎಸ್ಸಿ, ಎಸ್ಟಿ ವಕೀಲರ ಸಂಘದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಗತ್ ವೃತ್ತದಲ್ಲಿಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ–ಸಿಪಿಐಎಂ)ದ ವತಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಕಾರ್ಯದರ್ಶಿ ಕೆ. ನೀಲಾ, ‘ಗಣರಾಜ್ಯೋತ್ಸವದ ದಿನವೇ ಸಂವಿಧಾನ ಶಿಲ್ಪಿಗೆ, ಅದು ಕೂಡಾ ನ್ಯಾಯಾಧೀಶರೊಬ್ಬರಿಂದ ಆಗಿರುವ ಅಪಮಾನ ಅಕ್ಷಮ್ಯವಾಗಿದ್ದು, ಈ ಕುರಿತು ನ್ಯಾಯಾಧೀಶರ ವಿರುದ್ಧ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಗಳು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸಂವಿಧಾನವನ್ನು ಮತ್ತು ನೈಜ ದೇಶಪ್ರೇಮಿಗಳನ್ನು ಅಪ್ರಸ್ತುಗೊಳಿಸುವ ಹುನ್ನಾರದ ಭಾಗವಾಗಿಯೇ ರಾಯಚೂರು ನ್ಯಾಯಾಲಯದ ಪ್ರಕರಣ ನಡೆದಿದೆ. ಅಂತೆಯೇ ರಾಜ್ಯದ ಕೆಲವು ಕಡೆ ಇಂತಹ ಬೇರೆ ಆಯಾಮದ ಪ್ರಕರಣಗಳು ಘಟಿಸಿವೆ. ಇದು ಭಾರತದ ಒಕ್ಕೂಟ ವ್ಯವಸ್ಥೆಗೆ ಒಡ್ಡುವ ಸವಾಲುಗಳೇ ಆಗಿವೆ’ ಎಂದರು.

ADVERTISEMENT

‘ರಾಯಚೂರು ವಕೀಲರು ಬಾಬಾಸಾಹೇಬರ ಭಾವಚಿತ್ರ ಇಡಲು ಪರವಾನಗಿ ಕೋರಿ ಕೊಟ್ಟ ಮನವಿಯನ್ನು ಮಾನ್ಯ ಮಾಡಬೇಕು’ ಎಂದೂ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಿಪಿಐಎಂ ಹಾಗೂ ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಎಂ.ಬಿ. ಸಜ್ಜನ್, ಅಲ್ತಾಫ್ ಇನಾಮದಾರ, ಭೀಮಶೆಟ್ಟಿ ಯಂಪಳ್ಳಿ, ವಿರೂಪಾಕ್ಷಪ್ಪ ತಡಕಲ್, ನಾಗಯ್ಯ ಸ್ವಾಮಿ, ರೇವಣಸಿದ್ದಪ್ಪ ಕಲಬುರಗಿ, ಶಹನಾಜ್ ಅಖ್ತರ್, ಜಗದೇವಿ ನೂಲಕರ್, ಪ್ರಿಯಾಂಕಾ ಮಾವಿನಕರ್, ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ್ ಭಾಗವಹಿಸಿದ್ದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ: ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಹಾದಿಮನಿ, ಮುಖಂಡ ಮಲ್ಲಿಕಾರ್ಜುನ ಕ್ರಾಂತಿ ಹಾಗೂ ಇತರರು ಭಾಗವಹಿಸಿದ್ದರು.

ಎಸ್ಸಿ, ಎಸ್ಟಿ ವಕೀಲರ ಕಾನೂನು ಜಾಗೃತ ಸಂಘ: ನಗರದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಕೀಲರ ಸಂಘದಿಂದ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಶಾಂತವೀರ ಎಂ. ಬಡಗೇರ, ಉಪಾಧ್ಯಕ್ಷ ರೇವಣಸಿದ್ದ ಎನ್. ನೂಲಾ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಎಸ್. ಖೇಲಗಿ, ಖಜಾಂಚಿ ಮಸ್ತಾನ್ ಸಿ. ದಂಡೆ, ಉಮಾದೇವಿ ಬಿ. ಗುರೋಡೆ, ಅಶ್ವಿನಿ ಮದನಕರ್ ಇದ್ದರು.

ದಲಿತ ಮಾದಿಗ ಸಮನ್ವಯ ಸಮಿತಿ: ‘ಅಂಬೇಡ್ಕರ್ ಭಾವಚಿತ್ರವನ್ನು ತೆರವುಗೊಳಿಸಿದ ನ್ಯಾಯಾಧೀಶರು ತಮ್ಮ ಸ್ಥಾನಕ್ಕೆ ತಾವೇ ಅಗೌರವ ತೋರಿಸಿದ್ದು, ಆ ಸ್ಥಾನದಿಂದ ವಜಾಗೊಳಿಸಬೇಕು’ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಬಸವರಾಜ ಜವಳಿ, ರಾಜ್ಯ ಸಹ ಕಾರ್ಯದರ್ಶಿ ದಿಗಂಬರ ತ್ರಿಮೂರ್ತಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.