
ಕಲಬುರಗಿ: ‘ಸುರಪುರದಲ್ಲಿ ಎರಡು ಸಮುದಾಯಗಳ ಮಧ್ಯೆ ದ್ವೇಷ ಹರಡುವ ವಾತಾವರಣ ಸೃಷ್ಟಿ ಮಾಡಿದ ಸಿಪಿಐ ಉಮೇಶ ಅವರನ್ನು ಕರ್ತವ್ಯದಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿ ಡಿಸೆಂಬರ್ 8ರಂದು ಕಲಬುರಗಿಯ ಈಶಾನ್ಯ ವಲಯದ ಪೊಲೀಸ್ ಉಪ ಮಹಾನಿರೀಕ್ಷರ ಕಚೇರಿ ಎದುರು ಪ್ರತಿಭಟನೆ ಮಾಡಲಾಗುವುದು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ ಭದ್ರೆ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುರಪುರದಲ್ಲಿರುವ ಅಂಬೇಡ್ಕರ್ ವೃತ್ತದ ಬಳಿ ಕಳೆದ ತಿಂಗಳ ಹಿಂದೆ ನೀಲಿ ಧ್ವಜಗಳನ್ನು ನೆಡಲಾಗಿತ್ತು. ಅದನ್ನು ಸಿಪಿಐ ಕುಮ್ಮಕ್ಕಿನಿಂದ ವೇಣುಗೋಪಾಲ ಹಾಗೂ ಆತನ ಬೆಂಬಲಿಗರು ತೆರವು ಮಾಡಿ, ನೀಲಿ ಧ್ವಜ ಕಿತ್ತು ಹಾಕಿ, ವಾಲ್ಮೀಕಿ ಧ್ವಜವನ್ನು ನೆಟ್ಟರು’ ಎಂದು ಆಪಾದಿಸಿದರು.
‘ನವೆಂಬರ್ 10ರಂದು ಸಿಪಿಐ ಅವರು ರೌಡಿ ಶೀಟರ್‌ಗಳ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಇದೇ ಕಾರಣಕ್ಕೆ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ನಿಯೋಜನೆ ಮಾಡಲಾಗಿತ್ತು. ಈಗ ಮತ್ತೆ ಸುರಪುರ ಠಾಣೆಯಲ್ಲಿ ಮುಂದುವರಿದ್ದಾರೆ. ಇದೇ ಕಾರಣಕ್ಕೆ ಎಸ್ಸಿ ಜಾತಿಯ ರಾಜಶೇಖರ್ ರಾಠೋಡ್ ಎಂಬ ಪಿಎಸ್‌ಐ ಅವರನ್ನು ಅಮಾನತು ಮಾಡಿದ್ದರು. ಇಬ್ಬರಿಗೂ ಕಾನೂನು ಬೇರೆ ಇದೆಯೇ’ ಎಂದು ಪ್ರಶ್ನೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಖನ್ನಾ, ಯಾದಗಿರಿ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ತಳ್ಳಳ್ಳಿ, ಮಲ್ಲಿಕಾರ್ಜುನ ಶಖಾನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.