ADVERTISEMENT

ಗೌರವಧನ ಕಾರ್ಯಕರ್ತರ ಕಾಯಂಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2022, 5:19 IST
Last Updated 24 ನವೆಂಬರ್ 2022, 5:19 IST
ಕಲಬುರಗಿಯಲ್ಲಿ ಬುಧವಾರ ನವ ಕರ್ನಾಟಕ ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯು, ಯುಆರ್‌ಡಬ್ಲ್ಯು ಅಂಗವಿಕಲರ ಗೌರವಧನ ಕಾರ್ಯಕರ್ತರು ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತರು
ಕಲಬುರಗಿಯಲ್ಲಿ ಬುಧವಾರ ನವ ಕರ್ನಾಟಕ ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯು, ಯುಆರ್‌ಡಬ್ಲ್ಯು ಅಂಗವಿಕಲರ ಗೌರವಧನ ಕಾರ್ಯಕರ್ತರು ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕುಳಿತರು   

ಕಲಬುರಗಿ: ‘ನವ ಕರ್ನಾಟಕ ಎಂಆರ್‌ಡಬ್ಲ್ಯು, ವಿಆರ್‌ಡಬ್ಲ್ಯು, ಯುಆರ್‌ಡಬ್ಲ್ಯು ಅಂಗವಿಕಲರ ಗೌರವಧನ ಕಾರ್ಯಕರ್ತರನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ. ಹೀಗಾಗಿ, ಬುಧವಾರದಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇವೆ‘ ಎಂದುಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಜಿ ಪಿ.ಮೇಟಿ ಹೇಳಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ವಿಶೇಷಚೇತನ ಗೌರವ ಧನ ಕಾರ್ಯಕರ್ತರ ಹುದ್ದೆ ಕಾಯಂಗೊಳಿಸಿ, ಕಡತ ಮಂಡಿಸಬೇಕು. ಜತೆಗೆ ಬಾಕಿ ಉಳಿಸಿಕೊಂಡ ಏರಿಕೆ ಗೌರವ ಧನ ಪಾವತಿಸಬೇಕು’ ಎಂದು ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಈಗಾಗಲೇ ಮೂರನೇ ದಿನ ಸತ್ಯಾಗ್ರಹ ಮುಂದುವರೆಸಿದ್ದೇವೆ. ನಮ್ಮ ಹೋರಾಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಹೀಗಾಗಿ, ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಲಾಗಿದೆ. ಹೋರಾಟದಲ್ಲಿ ಏನಾದರೂ ಅನಾಹುತವಾದರೆ ಅದಕ್ಕೆ ಸರ್ಕಾರವೇ ಹೊಣೆಯಾಗುತ್ತದೆ’ ಎಂದರು.

ADVERTISEMENT

‘ರಾಷ್ಟ್ರೀಯ ವಿಕಲಚೇತನರ ಪುನರ್ವಸತಿ ಯೋಜನೆಯಡಿ ಸುಮಾರು 6,500 ಅಂಗವಿಕಲರು ಗೌರವಧನ ಆಧಾರದ ಮೇಲೆ ನೇಮಕವಾಗಿ ಸೇವೆ ಸಲ್ಲಿಸುತ್ತಿದ್ದಾರೆ. 14 ವರ್ಷದ ಸೇವೆಯನ್ನು ಪರಿಗಣಿಸಿ ರಾಜ್ಯ ಸರ್ಕಾರ ಎಲ್ಲಾ ಕಾರ್ಯಕರ್ತರನ್ನು ಕಾಯಂ ಗೊಳಿಸಬೇಕು’ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಕುಡಕಿ ಒತ್ತಾಯಿಸಿದರು.

‘ನಕಲಿ ದಾಖಲಾತಿ ಸೃಷ್ಟಿಸಿ ಸರ್ಕಾರದ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಎನ್‌ಜಿಒ ಸಂಚು ಹೊರಗೆಳೆಯಲು ತನಿಖೆ ನಡೆಸಬೇಕು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ರಾಜ್ಯದ ಹೊಸ ತಾಲ್ಲೂಕುಗಳಿಗೆ ಎಂಆರ್‌ಡಬ್ಲ್ಯೂ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬೇಕು. ಮಹಾನಗರ ಪಾಲಿಕೆಗಳಲ್ಲಿ ವಾರ್ಡ್‌ಗೆ ಒಬ್ಬರಂತೆ ಹೊಸ ಯುಆರ್‌ಡಬ್ಲ್ಯಗಳನ್ನು ನೇಮಿಸಿಕೊಳ್ಳುವ ಆದೇಶ ಹೊರಡಿಸಬೇಕು’ ಎಂದು ಅವರು ಆಗ್ರಹಿಸಿದರು.

ಮುಖಂಡರಾದ ತುಳಸಿರಾಮ ಹಿರೋಳಿ, ಖಾಸಿಂಸಾಬ್ ಡೋಂಗರಗಾಂವ್, ವೆಂಕಟಪ್ಪ ಚವ್ಹಾಣ್, ಬಸವರಾಜ ಹಡಪದ, ಶಿವಲೀಲಾ ಕಾಂಬಳೆ, ವಿಜಯಲಕ್ಷ್ಮಿ ನಾಗರಾಜ, ರಾಜೇಂದ್ರ ಕಮಕನೂರ, ಶರಣು ಕೌಲಗಿ, ನಾಗರಾಜ ನಾಟೀಕಾರ, ಮಲ್ಲಿಕಾರ್ಜುನ ಕಟ್ಟಿಮನಿ, ಸಿದ್ದಾರೂಢ ಬಿರಾದಾರ, ಮಹ್ಮದ್ ಗೌಸ್, ಧರ್ಮಣ್ಣ ನವಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.