ADVERTISEMENT

ಮಂಜೂರಾದ ಸಾಲದ ಹಣ ಪಾವತಿಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 6:48 IST
Last Updated 28 ಮಾರ್ಚ್ 2023, 6:48 IST
ಕಲಬುರಗಿಯಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಕಲಬುರಗಿಯಲ್ಲಿ ಸೋಮವಾರ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ಕಲಬುರಗಿ: ಅತಿವೃಷ್ಟಿ ಮತ್ತು ನೆಟೆ ರೋಗದಿಂದ ತೊಗರಿ ಬೆಳೆ ಕಳೆದುಕೊಂಡ ಬೆಳೆಗಾರರಿಗೆ ಪರಿಹಾರಧನ, ಮಂಜೂರಾದ ಹೈನುಗಾರಿಕೆಯ ಸಾಲದ ಹಣ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಮಿತಿ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಹಾಗೂ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ(ಡಿಸಿಸಿ) ಬ್ಯಾಂಕಿನ ಪ್ರಧಾನ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ಅಲ್ಲಿನ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ತೊಗರಿ ಬೆಳೆ ಕಳೆದುಕೊಂಡ ರೈತರು ಬೆಳೆ ಪರಿಹಾರ ಸಿಗದೆ ಪರದಾಡುತ್ತಿದ್ದಾರೆ. ಮತ್ತೊಂದು ಕಡೆ ಮಂಜೂರಾದ ಸಾಲದ ಹಣವನ್ನು ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಪಾವತಿಸುತ್ತಿಲ್ಲ. ಸೇಡಂ ತಾಲ್ಲೂಕಿನಲ್ಲಿ ಮಾತ್ರ ಅತಿ ಹೆಚ್ಚಿನ ಪ್ರಮಾಣದಲ್ಲಿ ಸಾಲ ಕೊಡಲಾಗುತ್ತಿದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಈ ನಡೆ ಖಂಡನೀಯ ಎಂದರು.

ADVERTISEMENT

2017–18ರ ಸಾಲಿನ ಸಾಲ ಮನ್ನಾ ಪ್ರಯೋಜನೆಯು ರೈತರಿಗೆ ತಲುಪಿಸಬೇಕು. ಹೈನುಗಾರಿಕೆಗೆ ಮಂಜೂರಾದ ಸಾಲವನ್ನು ವಿಳಂಬ ಮಾಡದೆ ಅರ್ಹರಿಗೆ ಕೊಡಬೇಕು. ಜಿಎಸ್‌ಟಿ ಹೊರೆಯನ್ನು ರೈತರ ಮೇಲೆ ಹಾಕುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಲಬುರಗಿ ಮತ್ತು ಯಾದಗಿರಿ ಜಿಲ್ಲಾ ಸಹಕಾರಿ ಸಂಘಗಳಲ್ಲಿ ಸದಸ್ಯತ್ವ ಪಡೆದ ರೈತರಿಗೆ ಹೊಸದಾಗಿ ಸಾಲ ಕೊಡಬೇಕು. ಸಾಲ ಕೊಡುವುದರಲ್ಲಿ ತಾರತಮ್ಯ ಮಾಡುವುದನ್ನು ಕೈ ಬಿಟ್ಟು ನೇರವಾಗಿ ಬೆಳೆ ಸಾಲ ವಿತರಿಸಬೇಕು. ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ಆದರೂ ಜಿಲ್ಲೆಯಾದ್ಯಂತ ಬೇಕಾಬಿಟ್ಟಿಯಾಗಿ ತಮ್ಮ ಮನಸೋಇಚ್ಛೆಯಂತೆ ಸಾಲ ವಿತರಿಸಲಾಗಿದೆ. ಮಲತಾಯಿ ಧೋರಣೆ ಬದಿಗಿರಿಸಿ, ತಾರತಮ್ಯ ಮಾಡದೆ ಎಲ್ಲ ರೈತರಿಗೆ ಸಮಾನವಾಗಿ ಸಾಲ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಪದಾಧಿಕಾರಿಗಳಾದ ಶರಣಬಸಪ್ಪಾ ಮಮಶೆಟ್ಟಿ, ಸಾಯಬಣ್ಣ ಗುಡುಬಾ, ಸುಭಾಷ್ ಜೇವರ್ಗಿ, ದಿಲೀಪ್ ಕುಮಾರ್ ನಾಗೂರೆ, ರಾಯಪ್ಪ ಹುರಮುಂಜಿ, ಪಾಂಡುರಂಗ ಮಾವಿನಕರ, ಪ್ರಕಾಶ್ ಜಾನೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.