ADVERTISEMENT

ಕನ್ಹಯ್ಯ ಲಾಲ್ ಹತ್ಯೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 1:40 IST
Last Updated 1 ಜುಲೈ 2022, 1:40 IST
ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ವೃತ್ತದದಲ್ಲಿ ಗುರುವಾರ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು  ಕನ್ಹಯ್ಯ ಲಾಲ್ ಹತ್ಯೆ ಆರೋಪಿಗಳ ಪ್ರಕೃತಿ ದಹಿಸಿ ಪ್ರತಿಭಟನೆ ನಡೆಸಿದರು
ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ವೃತ್ತದದಲ್ಲಿ ಗುರುವಾರ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು  ಕನ್ಹಯ್ಯ ಲಾಲ್ ಹತ್ಯೆ ಆರೋಪಿಗಳ ಪ್ರಕೃತಿ ದಹಿಸಿ ಪ್ರತಿಭಟನೆ ನಡೆಸಿದರು   

ಕಲಬುರಗಿ: ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್‌ ಕನ್ಹಯ್ಯ ಲಾಲ್ ಅವರ ಹತ್ಯೆ ಖಂಡಿಸಿ ನಗರದಲ್ಲಿ ವಿಶ್ವ ಹಿಂದೂ ಪರಿಷತ್, ಹಿಂದೂ ರಕ್ಷಕ ಶಿವಾಜಿ ಬ್ರಿಗೇಡ್ ಮತ್ತು ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಸರ್ದಾರ್ ವಲ್ಲಭಭಾಯಿ ಪಟೇಲ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು. ಹತ್ಯೆ ಆರೋಪಿಗಳಾದ ಮಹಮ್ಮದ್ ರಿಯಾಜ್ ಮತ್ತು ಅನ್ಸಾರಿ ಪ್ರತಿಕೃತಿಗಳನ್ನು ಗಲ್ಲಿಗೇರಿಸಿದ ರೀತಿಯಲ್ಲಿ ನೇತುಹಾಕಿದರು. ಬಳಿಕ ಅವುಗಳಿಗೆ ಬೆಂಕಿ ಹಚ್ಚಿ ಘೋಷಣೆ ಕೂಗಿದರು.

ಈ ವೇಳೆ ಮಾತನಾಡಿದ ವಿಶ್ವ ಹಿಂದೂ ಪರಿಷತ್ ಜಿಲ್ಲಾಘಟಕದ ಅಧ್ಯಕ್ಷ ಶ್ರೀಮಂತ ನವಲದಿ,ಕಿಡಿಗೇಡಿಗಳು ಕೃತ್ಯವನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಖಂಡಿಸುತ್ತದೆ. ಜಿಹಾದಿ ಮನಸ್ಥಿತಿಯ ಮಹಮ್ಮದ್ ರಿಯಾಜ್ ಮತ್ತು ಅನ್ಸಾರಿ ಅವರು ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಹತ್ಯೆಯ ಬಳಿಕ ಹಿಂದೂಗಳಿಗೆ ಬೆದರಿಕೆ ಹಾಕುವ ವಿಡಿಯೊ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇವರ ಕೃತ್ಯ ದೇಶದ ಸಾರ್ವಭೌಮತೆಗೆ ಸವಾಲಾಗಿದೆ. ಇಂತಹ ಅನಾಗರಿಕ ವರ್ತನೆ ತೋರಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.

ಇಂತಹ ಘಟನೆಗಳು ದೇಶದಲ್ಲಿ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸಬೇಕು. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಹಿಂದೂಗಳಿಗೆ ಭದ್ರತೆ ಒದಗಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಸಂಘಟನೆಯ ಪ್ರಶಾಂತ ಗುಡ್ಡಾ, ಅಶ್ವಿನ ಕುಮಾರ ಇದ್ದರು.

ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ

ಕನ್ಹಯ್ಯ ಲಾಲ್ ಅವರನ್ನು ಹತ್ಯೆ ಮಾಡಿದ ಇಬ್ಬರೂ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಹಿಂದೂ ರಕ್ಷಕ ಶಿವಾಜಿ ಬ್ರಿಗೇಡ್‌ ಕಾರ್ಯಕರ್ತರು ಒತ್ತಾಯಿಸಿದರು.

ಪ್ರತಿಭಟನೆ ನಡೆಸಿ ಮಾತನಾಡಿದ ಸಂಸ್ಥಾಪಕ ಅಧ್ಯಕ್ಷ ಗುರುಶಾಂತ ಪಿ.ಟೆಂಗಳಿ, ‘ಹತ್ಯೆ ಕೃತ್ಯ ಎಸಗಲು ಆರೋಪಿಗಳು ಪಾಕಿಸ್ತಾನಕ್ಕೆ ತೆರಳಿ ತರಬೇತಿ ಪಡೆದಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ದೇಶದಲ್ಲಿ ಕೋಮು ಗಲಭೆಗಳನ್ನು ಸೃಷ್ಟಿಸುವ ಹುನ್ನಾರ ಇದರ ಹಿಂದೆ ಅಡಗಿದೆ. ಹಿಂದೂಗಳಲ್ಲಿ ಭಯ ಉಂಟುಮಾಡುವ ತಂತ್ರ ಇದು’ ಎಂದು ದೂರಿದರು.

‘ಹತ್ಯೆಯಾದ ಕನ್ಯಯ್ಯ ಲಾಲ್ ಕುಟುಂಬಸ್ಥರಿಗೆ ರಾಜಸ್ಥಾನ ಸರ್ಕಾರ ₹1 ಕೋಟಿ ಪರಿಹಾರ ನೀಡಬೇಕು. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ನೇಣು ಹಾಕಬೇಕು. ದೇಶದಾದ್ಯಂತ ಒಂದು ಕುಟುಂಬಕ್ಕೆ ಎರಡು ಮಕ್ಕಳು ಕಾನೂನು ಜಾರಿಗೆ ತರಬೇಕು. ಹಿಂದುಪರ ಸಂಘಟನೆಗಳ ಮುಖಂಡರಿಗೆ ರಕ್ಷಣೆ ನೀಡಬೇಕು’ ಎಂದು ಕೋರಿದರು.

ಬ್ರಿಗೇಡ್‌ನ ಶಿವರಾಜ ಬಾಳಿ, ಸುರೇಶ ತಳವಾರ, ರೋಹಿತ್ ಅರಳಾ, ಮಲ್ಲು ಶಿವಣಗಿ, ಅರುಣ ವಾಲ್ಮೀಕಿ, ವೈಭವ ಪಾಟೀಲ, ನಾಗರಾಜ ಶಿಲುವಂತ, ಬಸವರಾಜ ಯಾದಗಿರಿ, ಪ್ರಭು ಯಲಗಾರ, ಧನರಾಜ ಡೊಂಗರೆ, ರೇವಣಸಿದ್ದ, ಲಕ್ಷ್ಮಿಪುತ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.