
ಕಲಬುರಗಿ: ಕೇಂದ್ರ ಸರ್ಕಾರವು ವಿಬಿ ಜಿ–ರಾಮ್–ಜಿ ಕಾಯ್ದೆಯನ್ನು ವಾಪಸ್ ಪಡೆಯಬೇಕು. ನರೇಗಾ ಯೋಜನೆಯನ್ನು ಮರುಜಾರಿಗೊಳಿಸಬೇಕು ಎಂದು ಆಗ್ರಹಿಸಿ ಶನಿವಾರ ಸಿಪಿಐ(ಎಂ) ಜಿಲ್ಲಾ ಸಮಿತಿ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಕೆ.ನೀಲಾ ಮಾತನಾಡಿ, ‘ಕಾರ್ಪೋರೇಟ್ ಕುಳಗಳ ಪರವಾಗಿರುವ ಕೇಂದ್ರ ಸರ್ಕಾರವು, ನರೇಗಾ ಯೋಜನೆಯನ್ನು ಮುಗಿಸಿ ಹಾಕಲು ಯತ್ನಿಸಿದೆ. ಈ ಮೂಲಕ ಜನಸಾಮಾನ್ಯರ ಕೆಲಸದ ಹಕ್ಕನ್ನು ಕಿತ್ತುಕೊಂಡಿದೆ. ಕಾಂಗ್ರೆಸ್ ಪಕ್ಷವೂ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿಲ್ಲ, ಕೇವಲ ಮಹಾತ್ಮ ಗಾಂಧಿ ಹೆಸರನ್ನು ಕಿತ್ತು ಹಾಕಿದ್ದಕ್ಕೆ ವಿರೋಧ ವ್ಯಕ್ತಪಡಿಸುತ್ತಿದೆಯೇ ಹೊರತು, ಜನರ ಕಾಳಜಿಯಿಲ್ಲ. ರಾಜ್ಯ ಕಾಂಗ್ರೆಸ್ ಸರ್ಕಾರವೂ ಕೂಡ ತನ್ನ ಪಾಲಿನ ತೆರಿಗೆ ಹಣ ಕಡಿತಗೊಳ್ಳುತ್ತಿದೆ ಎಂಬ ಕಾರಣಕ್ಕೆ ವಿಬಿ ಜಿ–ರಾಮ್–ಜಿ ಯೋಜನೆಯನ್ನು ವಿರೋಧಿಸುತ್ತಿದೆಯೇ ಹೊರತು, ಜನರು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕಾಗಿ ಅಲ್ಲ. ಒಂದು ವೇಳೆ ಜನರ ಮೇಲೆ ಕಾಳಜಿಯೇ ಇದ್ದರೆ, ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಬೇಕು’ ಎಂದು ಒತ್ತಾಯಿಸಿದರು.
‘ವಿಬಿ ಜಿ–ರಾಮ್–ಜಿಯನ್ನು ರದ್ದುಗೊಳಿಸಿ, ನರೇಗಾ ಯೋಜನೆಯನ್ನು ಇನ್ನಷ್ಟು ಬಲಗೊಳಿಸಬೇಕು. ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಿ, ಕೂಲಿಯನ್ನು ₹600ಕ್ಕೆ ಏರಿಸಬೇಕು. ಆದರೆ ಕೇಂದ್ರ ಸರ್ಕಾರವು ಯೋಜನೆಯನ್ನು ದುರ್ಬಲಗೊಳಿಸಿ, 125 ದಿನ ಕೆಲಸ ಹಾಗೂ ವೇತನ ಹೆಚ್ಚಳ ಮಾಡಲಾಗಿದೆ ಎಂಬ ಹಸಿಸುಳ್ಳನ್ನು ಹೇಳುತ್ತಿದೆ. ಹೊಸ ಕಾಯ್ದೆಯ ಉದ್ದೇಶ ಜನರನ್ನು ಕೆಲಸದಿಂದ ವಂಚಿಸುವುದಾಗಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕಿತ್ತಾಟದಲ್ಲಿ ಜನರು ನಿರುದ್ಯೋಗಿ ಆಗಲಿದ್ದಾರೆ. ಹೀಗಾಗಿ ಕಾಯ್ದೆಯನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.
‘ಜನವಿರೋಧಿ ಕೇಂದ್ರ ಸರ್ಕಾರವೇ ಪ್ರತಿ ರಾಜ್ಯಕ್ಕೆ ಬಜೆಟ್ ನಿಗದಿ ಪಡಿಸುತ್ತದೆ. ಬಜೆಟ್ ಮೀರಿದರೆ ಅದರ ಹಣವನ್ನು ರಾಜ್ಯ ಸರ್ಕಾರವೇ ಪಾವತಿಸಬೇಕು ಎಂದು ಕಾಯ್ದೆ ಹೇಳುತ್ತದೆ. ಈ ಮೂಲಕ ಕೇಂದ್ರ ಸರ್ಕಾರ ಅಧಿಕಾರ ಕೇಂದ್ರೀಕರಣಕ್ಕೆ ಕೈಹಾಕಿದೆ. ಆದರೆ ನರೇಗಾ ಯೋಜನೆಯು ಅಧಿಕಾರ ವಿಕೇಂದ್ರೀಕರಣವನ್ನು ಪ್ರೋತ್ಸಾಹಿಸುತ್ತದೆ’ ಎಂದು ಹೇಳಿದರು.
‘ಹೊಸ ಕಾಯ್ದೆಯು ಗ್ರಾಮ ಪಂಚಾಯಿತಿಗಳ ಹಕ್ಕನ್ನು ಕಿತ್ತುಕೊಳ್ಳಲು ರೂಪಿಸಿರುವ ಸಂಚಾಗಿದೆ. ಅಲ್ಲದೆ ರಾಜ್ಯಗಳ ಕೃಷಿ ಋತುಗಳಲ್ಲಿ 60 ದಿನಗಳ ಅವಧಿಯವರೆಗೆ ಕೆಲಸ ನೀಡುವುದಿಲ್ಲ ಎಂಬುದು ಹೊಸ ಕಾಯ್ದೆಯಲ್ಲಿದೆ. ಇದು ಜನರನ್ನು ಕಾನೂನು ಬದ್ಧವಾಗಿ ಕೆಲಸವನ್ನು ವಂಚಿಸುವುದಾಗಿದೆ’ ಎಂದು ಆರೋಪಿಸಿದರು.
ಮುಖಂಡರಾದ ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಶ್ರೀಮಂತ ಬಿರಾದಾರ, ಪ್ರಭು ಪ್ಯಾರಬಂದಿ, ಶಿವಲಿಂಗಪ್ಪ ಕುಸನೂರ, ಮಲ್ಲಪ್ಪ, ಬೀರಪ್ಪ, ಸಿದ್ಧಾರ್ಥ ಚಿಂಚೋಳಿ, ಕಾಶಿನಾಥ ಬಂಡಿ, ವಿವಿಧ ತಾಲ್ಲೂಕುಗಳಿಂದ ಬಂದಿದ್ದ ನರೇಗಾ ಮಹಿಳಾ ಕೂಲಿಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.