ಕಲಬುರಗಿ: ಎಲ್ ಅಂಡ್ ಟಿ ಕಂಪನಿಯ ವಾಲ್ವ್ ಮ್ಯಾನ್ ಶಿವಕುಮಾರ ಕಲ್ಲಕ ಅವರು ಹೃದಯಘಾತದಿಂದ ಮೃತಪಟ್ಟಿದ್ದು, ಆತನ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ಜೀವ ಜಲ ಭೀಮ ಬಲ ಕಾರ್ಮಿಕರ ಕಲ್ಯಾಣ ಅಭಿವೃದ್ಧಿ ಸಂಘದ ಮುಖಂಡರು ಮಹಾನಗರ ಪಾಲಿಕೆ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.
ಶಿವಕುಮಾರ ಅವರು 20 ವರ್ಷಗಳಿಂದ ಹೊರಗುತ್ತಿಗೆ ನೌಕರರಾಗಿ ದುಡಿಯುತ್ತಿದ್ದರು. ಮೇ 1ರಂದು ಕೆಲಸದಲ್ಲಿ ನಿರತವಾಗಿದ್ದಾಗಲೇ ಹೃದಯಘಾತದಿಂದ ಮೃತಪಟ್ಟಿದ್ದರು. ಆ ದಿನ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಕಂಪನಿಯ ಪ್ರಧಾನ ವ್ಯವಸ್ಥಾಪಕ, ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕಿ, ಅಕಾರಿಗಳು, ವಾರ್ಡ್ ಸದಸ್ಯರು ಕುಟುಂಬಸ್ಥರಿಗೆ ₹ 20 ಲಕ್ಷ ಪರಿಹಾರದ ಭರವಸೆ ನೀಡಿದ್ದರು. ಇದುವರೆಗೂ ಪರಿಹಾರ ಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ನಾಲ್ಕು ತಿಂಗಳಿಂದ ಪರಿಹಾರ ಕೊಡದೆ ಸತಾಯಿಸಲಾಗುತ್ತಿದೆ. ಸಹಜ ಸಾವಿಗೆ ಪರಿಹಾರ ನೀಡಲು ಬರುವುದಿಲ್ಲವೆಂದು ನೆಪ ಹೇಳುತ್ತಿದ್ದಾರೆ. ಈ ಮೊದಲು ಸಹಜವಾಗಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಶಿವಕುಮಾರ ಕುಟುಂಬಸ್ಥರಿಗೆ ಪರಿಹಾರ ನೀಡುತ್ತಿಲ್ಲ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಶೇಖ್ ಮಹಮ್ಮದ್ ರಫೀಕ್, ಸುಶೀಲಕುಮಾರ ಉಪಾಧ್ಯ, ಧರ್ಮಣ್ಣ ಎಸ್.ಮಾವನೂರ, ಸೈಯದ್ ನಾಸೀರ್ ಸೇರಿ ಕಾರ್ಮಿಕರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.