ADVERTISEMENT

ಲ್ಯಾಂಡ್‌ ಮಾಫಿಯಾ ವಿರುದ್ಧ ಹೋರಾಟ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 3:08 IST
Last Updated 16 ಫೆಬ್ರುವರಿ 2021, 3:08 IST
ಕಲಬುರ್ಗಿಯಲ್ಲಿ ನಡೆಯುತ್ತಿರುವ ಭೂ ಮಾಫಿಯಾ ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಎಸ್‌ಡಿಪಿಐ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿದರು
ಕಲಬುರ್ಗಿಯಲ್ಲಿ ನಡೆಯುತ್ತಿರುವ ಭೂ ಮಾಫಿಯಾ ದಂಧೆಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಎಸ್‌ಡಿಪಿಐ ಸದಸ್ಯರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಮಾಡಿದರು   

ಕಲಬುರ್ಗಿ: ಜಿಲ್ಲೆಯಲ್ಲಿ ಲ್ಯಾಂಡ್‌ ಮಾಫಿಯಾ ದಂಧೆಗಳು ಹೆಚ್ಚಾಗುತ್ತಿದ್ದು, ಇದನ್ನು ನಿರ್ವಹಿಸುತ್ತಿರುವ ತಂಡಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಎಸ್‌ಡಿಪಿಐ ಮುಖಂಡರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದಲ್ಲಿರುವ ಖಾಲಿ ನಿವೇಶನ ಕಬಳಿಕೆ, ಭೂ ದಾಖಲೆಗಳ ನಕಲು ಸೃಷ್ಟಿ ಮಾಡುವುದು, ಅಮಾಯಕರನ್ನು ಹೆದರಿಸಿ ಜಮೀನು ಕಬಳಿಸುವುದು, ಕಡಿಮೆ ಹಣ ನೀಡಿ ಹೆದರಿಸಿ ಭೂಮಿ ಬರೆಸಿಕೊಳ್ಳುವುದು ಮುಂತಾದ ದಂಧೆಗಳು ನಿರಂತರವಾಗಿ ನಡೆದಿವೆ. ಇದಕ್ಕಾಗಿಯೇ ಜಿಲ್ಲೆಯಲ್ಲಿ 8ರಿಂದ 10 ತಂಡಗಳು ಕ್ರಿಯಾಶೀಲವಾಗಿವೆ. ಇವುಗಳ ಬಗ್ಗೆ ಈ ಹಿಂದೆಯೇ ದೂರು ನೀಡಿದ್ದರೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಆದ್ದರಿಂದ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಭೂ ಕಬಳಕೆ ದಂಧೆಯನ್ನು ತುಂಬ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಒಂದು ತಂಡವು ನಿವೇಶನ ಅಥವಾ ಮನೆಯನ್ನು ಹುಡುಕಿ ಕೊಡುತ್ತದೆ, ಮತ್ತೊಂದು ತಂಡವು ಅದರ ಖೊಟ್ಟಿ ದಾಖಲೆಗಳನ್ನು ಸೃಸ್ಟಿ ಮಾಡುತ್ತದೆ, ಮೂರನೇ ತಂಡ ಅನಧಿಕೃತವಾಗಿ ಕಟ್ಟಡ ಕಟ್ಟಿಸುತ್ತದೆ, ನಾಲ್ಕನೇ ತಂಡ ಅದಕ್ಕೆ ಸರ್ಕಾರಿ ಅಧಿಕಾರಿಗಳಿಂದ ಬೇಕಾದ ದಾಖಲೆಗಳನ್ನು ಪಡೆದುಕೊಳ್ಳುತ್ತದೆ. ಐದನೇ ತಂಡವು ಇವೆಲ್ಲರಿಗೂ ಹಣ ಸಂದಾಯ ಮಾಡಿ ಸಾಕುತ್ತದೆ. ಇಷ್ಟೆಲ್ಲ ಕೆಲಸಗಳ ಬಗ್ಗೆ ದಾಖಲೆ ಸಮೇತ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ADVERTISEMENT

ಅಮಾಯಕರು, ಬಡವರು ದುಡಿದು ಗಳಿಸಿದ ನಿವೇಶನ, ಮನೆ, ಹೊಲಗಳನ್ನು ಹೆದರಿಸಿ ಕಬಳಿಸುತ್ತಿದ್ದಾರೆ. ಬಹಳಷ್ಟು ಜನ ಇವರ ವಿರುದ್ಧ ಧ್ವನಿ ಎತ್ತುವುದಕ್ಕೂ ಹೆದರುತ್ತಾರೆ. ಪೊಲೀಸ್‌ ಠಾಣೆಗೆ ದೂರು ನೀಡಿದರೆ ‘ಇದು ಸಿವಿಲ್‌ ಕೇಸ್‌ ಆದ್ದರಿಂದ ಕೋರ್ಟ್‌ಗೆ ಹೋಗಿ’ ಎನ್ನುತ್ತಾರೆ. ಹೀಗಾದರೆ ಅಮಾಯಕರಿಗೆ ನ್ಯಾಯ ಕೊಡಿಸುವುದು ಯಾರು ಎಂದೂ ಮುಖಂಡರು ಪ್ರಶ್ನಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಮೊಹಮದ್ ಮೊಹಿಸಿನ್‌, ಪ್ರಧಾನ ಕಾರ್ಯದರ್ಶಿ ಡಾ.ರಿಜ್ವಾನ್‌ ಅಹ್ಮದ್, ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್‌ ರಹೀಮ್ ಪಟೇಲ್, ಮುಖಂಡ ಮೊಹಮದ್‌ ಫಯೀಮ್‌ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.