ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ರಚನಾತ್ಮಕ ಪ್ರಗತಿ, ಸಂವಿಧಾನದ 371 (ಜೆ) ಕಲಂ ತಿದ್ದುಪಡಿಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಮುಖಂಡರು ಟೌನ್‌ಹಾಲ್ ಸಮೀಪದ ಗಾಂಧಿ ಪ್ರತಿಮೆ ಬಳಿ ಮಂಗಳವಾರ ಮೌನ ಸತ್ಯಾಗ್ರಹ ನಡೆಸಿದರು.
ನಂಜುಂಡಪ್ಪ ವರದಿ ಶಿಫಾರಸಿನಂತೆ ರಾಯಚೂರಿಗೆ ಸಿಗಬೇಕಿದ್ದ ಐಐಟಿ ಮತ್ತು ಏಮ್ಸ್ ಧಾರವಾಡಕ್ಕೆ ಸ್ಥಳಾಂತರವಾಗಿವೆ. ಏಮ್ಸ್ ಸ್ಥಾಪನೆಗೆ ನಡೆಯುತ್ತಿರುವ ಹೋರಾಟಕ್ಕೆ ಬೆಲೆ ಕೊಟ್ಟು ರಾಯಚೂರಿನಲ್ಲಿ ಸ್ಥಾಪಿಸಬೇಕು. ಕಲಬುರಗಿಯಲ್ಲಿ ರೈಲ್ವೆ ವಿಭಾಗ ಕಚೇರಿ ಸ್ಥಾಪನೆ ಮಾಡಿ, ಈ ಭಾಗಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪ್ರಾದೇಶಿಕ ಅಸಮತೋಲನೆ ನಿವಾರಣೆಯ 371 (ಜೆ) ಅನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ನೇಮಕಾತಿ, ಮುಂಬಡ್ತಿಯನ್ನು ತ್ವರಿತವಾಗಿ ಮುಗಿಸಬೇಕು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ, ಅದಕ್ಕೆ ಸಂಬಂಧಿಸಿದ ಇಲಾಖೆಗಳು ಏಳು ಜಿಲ್ಲೆಗಳಲ್ಲಿ ಸೃಜಿಸಬೇಕು. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
371 (ಜೆ) ಅಡಿ ನಡೆಯುತ್ತಿರುವ ನೇಮಕಾತಿಗಳಲ್ಲಿ ಪದೇ ಪದೇ ನ್ಯಾಯಾಲಯಗಳಿಗೆ ಹೋಗಿ ತಡೆಯಾಜ್ಞೆ ತರಲಾಗುತ್ತಿದೆ. ಇದರಿಂದ ನಮ್ಮ ಭಾಗದ ಅಭ್ಯರ್ಥಿಗಳಿಗೆ ಕಾಲಮಿತಿಯಲ್ಲಿ ನೇಮಕಾತಿಗಳು ಮತ್ತು ಮುಂಬಡ್ತಿಗೆ ಅವಕಾಶಗಳು ಸಿಗುತ್ತಿಲ್ಲ. ಇದಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಸುಸೂತ್ರವಾಗಿ ನಡೆಸಲು ಕಠಿಣ ಕ್ರಮಗಳು ತೆಗೆದುಕೊಳ್ಳಬೇಕು ಎಂದರು.
371 (ಜೆ) ಅಡಿ ಬರುವ ಸಮಸ್ಯೆಗಳು ಮತ್ತು ಮನವಿಗಳ ನಿವಾರಣೆಗೆ ಪ್ರತ್ಯೇಕ ನ್ಯಾಯಾಧೀಕರಣ ವಿಭಾಗೀಯ ಕೇಂದ್ರವನ್ನು ಕಲಬುರಗಿಯಲ್ಲಿ ಸ್ಥಾಪಿಸಬೇಕು. ಸದರಿ ನ್ಯಾಯಾಧೀಕರಣ ಸ್ಥಾಪನೆಯ ಬಗ್ಗೆ 371 (ಜೆ) ಕಲಂ ಕಂಡಿಕೆ 12(ಎ)ನಲ್ಲಿ ಉಲ್ಲೇಖಿಸಲಾಗಿದೆ. ಕೆಕೆಆರ್‌ಡಿಬಿಯ ಅನುದಾನ ಬಳಕೆಗೆ ಐದು ವರ್ಷಗಳ ವೈಜ್ಞಾನಿಕ ದೃಷ್ಟಿಕೋನ ಇರಿಸಿಕೊಂಡು ಕ್ರಿಯಾಯೋಜನೆಗಳನ್ನು ರೂಪಿಸಬೇಕು ಎಂದು ಕೋರಿದರು.
ಕಲ್ಯಾಣ ಪಥ ರಸ್ತೆಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ಕಲಬುರಗಿ ಎರಡನೇ ವರ್ತುಲ ರಸ್ತೆ ನಿರ್ಮಾಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾಗಿ ತೆಗೆದುಕೊಂಡು ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಸತ್ಯಾಗ್ರಹದಲ್ಲಿ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ಪ್ರಮುಖರಾದ ಪ್ರೊ.ಆರ್.ಕೆ. ಹುಡಗಿ, ಬಸವರಾಜ ಕಪನೂರ, ಪ್ರತಾಪಸಿಂಗ್ ತಿವಾರಿ, ಕಲ್ಯಾಣರಾವ, ಲಿಂಗರಾಜ ಸಿರಗಾಪುರ, ಶಿವಾನಂದ ಕಾಂಡೆ, ಗುರುಬಸಪ್ಪ, ಶಿವಕುಮಾರ ಪಾಟೀಲ, ಬಸರಾಜ ಮಾಗಿ, ರಾಜು ಸಿ.ಜೈನ್, ಬಸವರಾಜ ಕಲ್ಯಾಣಿ, ಮಲ್ಲಿಕಾರ್ಜುನ ಬಿ. ಭೂಸನೂರ, ಸೂರ್ಯಕಾಂತ ಕೆ.ಎಸ್. ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.