ADVERTISEMENT

ರೈತರ ಸಾವು; ಕಾಂಗ್ರೆಸ್‌ನಿಂದ ರಸ್ತೆ ತಡೆ- ಪ್ರಿಯಾಂಕಾ ವಾದ್ರಾ ಬಿಡುಗಡೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 6:30 IST
Last Updated 6 ಅಕ್ಟೋಬರ್ 2021, 6:30 IST
ಉತ್ತರಪ‍್ರದೇಶ ಸರ್ಕಾರದ ವಿರುದ್ಧ ಕಲಬುರ್ಗಿ ಅನ್ನಪೂರ್ಣ ಸರ್ಕಲ್‌ನಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಪ್ರತಭಟನೆ ನಡೆಸಿದರು. ಜಗದೇವ ಗುತ್ತೇದಾರ, ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಅಲೀಂಖಾನ್‌ ನೇತೃತ್ವ ವಹಿಸಿದ್ದರು
ಉತ್ತರಪ‍್ರದೇಶ ಸರ್ಕಾರದ ವಿರುದ್ಧ ಕಲಬುರ್ಗಿ ಅನ್ನಪೂರ್ಣ ಸರ್ಕಲ್‌ನಲ್ಲಿ ಮಂಗಳವಾರ ಜಿಲ್ಲಾ ಕಾಂಗ್ರೆಸ್‌ ಮುಖಂಡರು ಪ್ರತಭಟನೆ ನಡೆಸಿದರು. ಜಗದೇವ ಗುತ್ತೇದಾರ, ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಅಲೀಂಖಾನ್‌ ನೇತೃತ್ವ ವಹಿಸಿದ್ದರು   

ಕಲಬುರ್ಗಿ: ‘ಉತ್ತರ ಪ್ರದೇಶದಲ್ಲಿ ರೈತರ ಸಾವಿಗೆ ಕಾರಣವಾದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಬೇಕು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಅವರನ್ನು ತಕ್ಷಣವೇ ಗೃಹಬಂಧನದಿಂದ ಬಿಡುಗಡೆ ಮಾಡಬೇಕು’ ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಜಿಲ್ಲಾ ಕಾಂಗ್ರೆಸ್‌ನವರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ಕಾಂಗ್ರೆಸ್‌ ಕಚೇರಿಯಿಂದ ಪಾದಯಾತ್ರೆ ಆರಂಭಿಸಿ, ಅನ್ನಪೂರ್ಣ ಸರ್ಕಲ್‌ನಲ್ಲಿ ಸಮಾವೇಶಗೊಂಡರು. ಕೆಲ ಕಾಲ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ಉತ್ತರಪ್ರದೇಶ ರಾಜ್ಯ ಸರ್ಕಾರ, ಬಿಜೆಪಿ ವಿರುದ್ಧವೂ ಧಿಕ್ಕಾರ ಕೂಗಿದರು. ಮೋದಿ ಹಠಾವೋ ಭಾರತ್‌ ಬಚಾವೋ, ಬಿಜೆಪಿ ಹಠಾವೋ ದೇಶ ಬಚಾವೋ ಎಂದೂ ಘೋಷಣೆ ಮೊಳಗಿಸಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ ಮಾತನಾಡಿ, ‘ಉತ್ತರಪ್ರದೇಶದ ಅಖಿಂಪುರ ಮತ್ತು ಖೇರಿಯಲ್ಲಿ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರೂ ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ. ಇದಕ್ಕೆ ಯೋಗಿ ಆದಿತ್ಯನಾಥ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರೇ ಹೊಣೆ. ರೈತರನ್ನು ರಸ್ತೆಯಲ್ಲಿ ಕೊಲೆ ಮಾಡುವ ಹಂತಕ್ಕೆ ಬಿಜೆಪಿ ಸರ್ಕಾರಗಳು ಬಂದುಬಿಟ್ಟಿವೆ. ಘಟನೆಯ ಹೊಣೆ ಹೊತ್ತು ಉತ್ತರಪ್ರದೇಶ ಮುಖ್ಯಮಂತ್ರಿಯ ರಾಜೀನಾಮೆ ಪಡೆಯಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಕೇಂದ್ರ ಗೃಹಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಪುತ್ರ ಆಶಿಶ್‌ ಮಿಶ್ರಾ ರೈತರ ಮೇಲೆ ಕಾರು ಹರಿಸಿ ನಾಲ್ವರ ಸಾವಿಗೆ ಕಾರಣವಾಗಿದ್ದಾರೆ. ಇಂಥ ದುಷ್ಟರನ್ನೂ ಸರ್ಕಾರವೇ ರಕ್ಷಿಸುತ್ತಿದೆ. ಶಾಂತಿಯುತ ಪ್ರತಿಭಟನೆಗೆ ನಿಂತಿದ್ದ ರೈತರನ್ನು ಇಷ್ಟೊಂದು ಅಮಾನುಷವಾಗಿ ಕಗ್ಗೊಲೆ ಮಾಡಲಾಗಿದೆ. ಇದರ ಬಗ್ಗೆ ಸೂಕ್ತ ತನಿಖೆಯಾಗಿಬೇಕು, ಅಪರಾಧಿ ಮುಖಂಡರಿಗೆ ಶಿಕ್ಷೆಯಾಗಬೇಕು’ ಎಂದರು.

‘ಉತ್ತರಪ್ರದೇಶದಲ್ಲಿ ಕೊಲೆಗಡುಕ ಸರ್ಕಾರವಿದೆ. ತಕ್ಷಣವೇ ಆ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು. ಘಟನೆಯ ಹೊಣೆ ಹೊತ್ತು ಪ್ರಧಾನಿ ಮೋದಿ, ಕೇಂದ್ರ ಗೃಹಸಚಿವ ಅಮಿತ್‌ ಶಾ ಕೂಡ ರಾಜೀನಾಮೆ ನೀಡಬೇಕು’ ಎಂದು ಮುಖಂಡ ತಿಪ್ಪಣ್ಣಪ್ಪ ಕಮಕನೂರ ಆಗ್ರಹಿಸಿದರು.

‘ರೈತರೂ ಸೇರಿದಂತೆ ಘಟನೆಯಲ್ಲಿ ಮೃತಪಟ್ಟ ಎಲ್ಲರ ಕುಟುಂಬಗಳಿಗೂ ತಲಾ ₹ 1 ಕೋಟಿ ಪರಿಹಾರ ಘೋಷಿಸಬೇಕು. ಸದ್ಯಕ್ಕೆ ತಲಾ ₹ 45 ಲಕ್ಷ ನೀಡಲು ಒಪ್ಪಿದ್ದರೂ ಅದು ಸಾಲದು. ಗಾಯಗೊಂಡ ಎಲ್ಲರಿಗೂ ಪರಿಹಾರ ಒದಗಿಸಬೇಕು. ಪ್ರಿಯಾಂಕಾ ವಾದ್ರಾ ಅವರನ್ನು ಬೇಷರತ್ತಾಗಿ ಬಿಡುಗಡೆ ಮಾಡಿ, ಅವರ ಕ್ಷಮೆ ಕೇಳಬೇಕು’ ಎಂದು ಮುಖಂಡ ಅಲ್ಲಮಪ್ರಭು ಪಾಟೀಲ ಒತ್ತಾಯಿಸಿದರು.

ಮುಖಂಡ ರಹೀಂಖಾನ್‌, ಮಹಿಳಾ ಘಟಕದ ಮುಖಂಡರೂ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.