
ಕಲಬುರಗಿ: ‘ಸಂವಿಧಾನ ವಿರೋಧಿ ಆರ್‌ಎಸ್‌ಎಸ್ ಕಾನೂನು ಬಾಹಿರ ನಡೆ ಖಂಡಿಸಿ, ರಾಷ್ಟ್ರಗೀತೆಯನ್ನು ಬ್ರಿಟಿಷ್ ಅಧಿಕಾರಿ ಸ್ವಾಗತಿಸಲು ಬರೆಯಲಾಗಿತ್ತು ಎಂಬ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ವಿರೋಧಿಸಿ ಹಾಗೂ ಸಂವಿಧಾನದ ಅನುಷ್ಠಾನಕಾರ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಬೆಂಬಲಿಸಿ ನ.25ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ.ಸಾಗರ್ ಹೇಳಿದರು.
‘ಅಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿಗಳ ಎದುರು ಪ್ರತಿಭಟನೆ ನಡೆಯಲಿದೆ. ಬಳಿಕ ಈ ಸಂಬಂಧ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು’ ಎಂದು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಕಲಬುರಗಿಯಲ್ಲಿ ಅಂದು ಮಧ್ಯಾಹ್ನ 12 ಗಂಟೆಗೆ ಜಗತ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ಸಾವಿರಾರು ಜನರು ಕೈಯಲ್ಲಿ ಸಂವಿಧಾನ ಪ್ರತಿ, ಸಂವಿಧಾನದ ಪೀಠಿಕೆ ಮತ್ತು ಬುದ್ಧ, ಬಸವ, ಡಾ.ಅಂಬೇಡ್ಕರ್ ಚಿತ್ರ, ನೀಲಿ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಲಿದ್ದಾರೆ’ ಎಂದರು.
‘ಅಧಿಕೃತವಾಗಿ ನೋಂದಣಿಯಾಗ ಆರ್‌ಎಸ್‌ಎಸ್ ಶತಮಾನೋತ್ಸವ ಆಚರಿಸುತ್ತಿದೆ. ಈ ಮನುವಾದಿ, ಬಿಜೆಪಿಯ ಮುಖವಾಣಿಯಾಗಿರುವ ಆರ್‌ಎಸ್‌ಎಸ್ ಕೆಲಸ ಮಾಡುತ್ತಿದೆ. ಆರ್‌ಎಸ್‌ಎಸ್ ಬಗ್ಗೆ ಧೈರ್ಯವಾಗಿ ಪ್ರಶ್ನಿಸಿದ ಸಚಿವ ಪ್ರಿಯಾಂಕ್ ಅವರನ್ನು ಗುರಿಯಾಗಿಸಿಕೊಂಡು ಅವರನ್ನು ಮತ್ತು ಅವರ ಕುಟುಂಬವನ್ನು ಅವಮಾನಿಸಲಾಗುತ್ತಿದೆ. ಖರ್ಗೆ ಕುಟುಂಬಕ್ಕೆ ನಮ್ಮ ಸಂಘಟನೆಯು ಬೆಂಬಲವಾಗಿ ನಿಲ್ಲಲಿದೆ’ ಎಂದರು.
‘ದೇಶದ ಗಂಡಾಂತರ ವೇಳೆ ಧ್ವನಿ ಎತ್ತದ, ದೇಶದ ಸಂವಿಧಾನ ಗೌರವಿಸದ, 55 ವರ್ಷ ತನ್ನ ಕಚೇರಿಯ ಮೇಲೆ ತ್ರಿವರ್ಣ ಬಾವುಟ ಹಾರಿಸಲು ನಿರಾಕರಿಸಿದ, ಇದುವರೆಗೂ ಸಂವಿಧಾನದ ಅಡಿಯಲ್ಲಿ ನೋಂದಣಿ ಮಾಡಿಸಿಕೊಳ್ಳದ, ಅನಧಿಕೃತ ಆದಾಯದ ಮೂಲ ಹೊಂದಿರುವ, ಇದುವರೆಗೂ ಯಾವುದೇ ತೆರಿಗೆ ಪಾವತಿಸದ ಆರ್‌ಎಸ್‌ಎಸ್ ದೇಶದಲ್ಲಿ ಯಾವ ಪುರುಷಾರ್ಥಕ್ಕಾಗಿ?’ ಎಂದು ಡಿ.ಜಿ.ಸಾಗರ್ ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಸುರೇಶ ಹಾದಿಮನಿ, ಬಿ.ಸಿ.ವಾಲಿ, ಎಚ್.ಶಂಕರ, ಕೃಷ್ಣಪ್ಪ ಕರಣಿಕ, ರೇವಣಸಿದ್ದಪ್ಪ ವಾಲಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.