ADVERTISEMENT

ಒಳಮೀಸಲಾತಿಗಾಗಿ ಒತ್ತಾಯಿಸಿ ಆ 1ರಂದು ಪ್ರತಿಭಟನೆ: ಮಾಜಿ ಸಚಿವ ಎ. ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 6:57 IST
Last Updated 26 ಜುಲೈ 2025, 6:57 IST
ಕಲಬುರಗಿ ಜಿಲ್ಲಾ ಮಾದಿಗ ಮಹಾ ಒಕ್ಕೂಟ ಆಯೋಜಿಸಿದ್ದ ಒಳಮೀಸಲಾತಿ ಜಾರಿ ಕುರಿತ ಸಭೆಯಲ್ಲಿ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿದರು. ಬಸವರಾಜ ಮತ್ತಿಮಡು, ಉಮೇಶ ಕಾರಜೋಳ, ದಶರಥ ಗುಂಡಗುರ್ತಿ ಇತರರು ಭಾಗವಹಿಸಿದ್ದರು
ಕಲಬುರಗಿ ಜಿಲ್ಲಾ ಮಾದಿಗ ಮಹಾ ಒಕ್ಕೂಟ ಆಯೋಜಿಸಿದ್ದ ಒಳಮೀಸಲಾತಿ ಜಾರಿ ಕುರಿತ ಸಭೆಯಲ್ಲಿ ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿದರು. ಬಸವರಾಜ ಮತ್ತಿಮಡು, ಉಮೇಶ ಕಾರಜೋಳ, ದಶರಥ ಗುಂಡಗುರ್ತಿ ಇತರರು ಭಾಗವಹಿಸಿದ್ದರು   

ಕಲಬುರಗಿ: ಸುಪ್ರೀಂಕೋರ್ಟ್‌ ತೀರ್ಪಿನ ನಂತರವೂ ರಾಜ್ಯದ ಕಾಂಗ್ರೆಸ್ ಸರ್ಕಾರ ಒಳಮೀಸಲಾತಿ ಜಾರಿ ಮಾಡಲು ಹಿಂಜರಿಯುತ್ತಿದ್ದು, ಇದನ್ನು ಖಂಡಿಸಿ ಆಗಸ್ಟ್ 1ರಂದು ಮಾದಿಗ ಮಹಾ ಒಕ್ಕೂಟ ಸೇರಿದಂತೆ ಇತರ ಶೋಷಿತ ಸಮುದಾಯಗಳ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಗುವುದು ಎಂದು ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಜಿಲ್ಲಾ ಮಾದಿಗ ಮಹಾ ಒಕ್ಕೂಟ ಆಯೋಜಿಸಿದ್ದ ಒಳಮೀಸಲಾತಿ ಜಾರಿ ಕುರಿತ ಮುಖಂಡರ ಸಭೆಗೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಶೋಷಿತರ ನಾಯಕ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಯ ಬಗ್ಗೆ ಯಾವುದೇ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಸಚಿವ ಕೆ.ಎಚ್. ಮುನಿಯಪ್ಪ ಅವರೂ ಈ ಬೇಡಿಕೆಗೂ ತಮಗೂ ಸಂಬಂಧವಿಲ್ಲ ಎಂಬಂತೆ ಇದ್ದಾರೆ. ಒಳಮೀಸಲಾತಿ ಜಾರಿಗೊಳಿಸುವ ಮುನ್ನ ಕಾಂಗ್ರೆಸ್ ಸರ್ಕಾರಗಳು ತಮ್ಮೊಂದಿಗೆ ಚರ್ಚಿಸಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಿಗೆ ಸೂಚನೆ ನೀಡಿದ್ದಾರೆ. ಹೀಗಾಗಿ, ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಒಳಮೀಸಲಾತಿ ಜಾರಿಗೆ ಅಡ್ಡಿಯಾಗುತ್ತಿವೆ’ ಎಂದು ಹರಿಹಾಯ್ದರು.

ADVERTISEMENT

‘ಒಳಮೀಸಲಾತಿಗೆ ಒತ್ತಾಯಿಸಿ ಕಳೆದ ಮೂರು ದಶಕಗಳಿಂದ ಮಾದಿಗ ಸಮುದಾಯದವರು ದೇಶದಾದ್ಯಂತ ಹೋರಾಟ ನಡೆಸುತ್ತಿದ್ದಾರೆ. ಆದರೂ ಅವರ ಬೇಡಿಕೆಗಳಿಗೆ ಸರ್ಕಾರಗಳು ಕಿವುಡಾಗಿವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ಒಳಮೀಸಲಾತಿಯನ್ನು ಜಾರಿಗೊಳಿಸುವಂತೆ ಡಾ.ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರಕ್ಕೆ ನ್ಯಾಯಮೂರ್ತಿ ಉಷಾ ಮೆಹ್ರಾ ಅವರು ಶಿಫಾರಸು ಮಾಡಿದ್ದರು. ಆದರೆ, ಆ ವರದಿಯನ್ನು ಪಕ್ಕಕ್ಕೆ ಇಡಲಾಯಿತು. ಇದರಿಂದಾಗಿ ದೇಶದಾದ್ಯಂತ ಇರುವ ಮಾದಿಗ ಸಮುದಾಯಕ್ಕೆ ನಿರಂತರ ಅನ್ಯಾಯವಾಗುತ್ತಲೇ ಇದೆ’ ಎಂದರು.

‘ರಾಜ್ಯದ ಸಮಾಜ ಕಲ್ಯಾಣ ಸಚಿವನಾಗಿದ್ದ ವೇಳೆ ಕಾಂತರಾಜ ಆಯೋಗಕ್ಕೆ ಕುರ್ಚಿ, ಟೇಬಲ್, ಜೆರಾಕ್ಸ್ ಮಾಡಿಸಲು ಕಾಗದದ ಕೊರತೆಯೂ ಇತ್ತು. ಈ ಬಗ್ಗೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದಾಗ ತಕ್ಷಣವೇ ₹13 ಕೋಟಿ ಬಿಡುಗಡೆ ಮಾಡಿದರು’ ಎಂದು ಹೇಳಿದರು.

ಶಾಸಕ ಬಸವರಾಜ ಮತ್ತಿಮಡು, ಮಾದಿಗ ಸಮುದಾಯದ ಮುಖಂಡ ಉಮೇಶ ಕಾರಜೋಳ, ರಾಜು ವಾಡೇಕರ್ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

ಕಾಂತರಾಜ ಅವರ ವರದಿಯನ್ನು ಜಾರಿ ಮಾಡುವ ಜವಾಬ್ದಾರಿ ನನ್ನದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅವರ ಬಗ್ಗೆ ನಮಗೂ ವಿಶ್ವಾಸ ಇತ್ತು. ಹಾಗೆ ಹೇಳಿದ ಒಂದು ತಿಂಗಳಲ್ಲಿಯೇ ವರದಿಯನ್ನು ಕಸದಬುಟ್ಟಿಗೆ ಹಾಕಿದರು
ಎ. ನಾರಾಯಣಸ್ವಾಮಿ ಕೇಂದ್ರದ ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.