ADVERTISEMENT

ಪಿಎಸ್‌ಐ ಅಕ್ರಮ: ಪಾಟೀಲ ಹೆಸರಲ್ಲಿ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ!

ಬ್ಯಾಂಕ್‌ ಆಫ್ ಬರೋಡಾ ಶಾಖೆಯಲ್ಲಿ ಖಾತೆ ತೆರೆದು ಹಣ ವರ್ಗಾಯಿಸಿದ್ದ ಅಭ್ಯರ್ಥಿಗಳ ಸಂಬಂಧಿಕರು

ಮನೋಜ ಕುಮಾರ್ ಗುದ್ದಿ
Published 28 ಜುಲೈ 2022, 23:41 IST
Last Updated 28 ಜುಲೈ 2022, 23:41 IST
ಆರ್‌.ಡಿ. ಪಾಟೀಲ
ಆರ್‌.ಡಿ. ಪಾಟೀಲ   

ಕಲಬುರಗಿ: ಹಲವು ಅಭ್ಯರ್ಥಿಗಳ ಕಡೆಯಿಂದ ನೇರವಾಗಿ ನಗದು ಹಣ ಪಡೆದುಕೊಳ್ಳುವ ಬದಲು ಪಿಎಸ್‌ಐ ಅಕ್ರಮ ನೇಮಕಾತಿ ಹಗರಣದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ ತನ್ನ ಹೆಸರಲ್ಲಿ ಕೋಟ್ಯಂತರ ರೂಪಾಯಿ ಮ್ಯೂಚುವಲ್ ಫಂಡ್‌ ಹೂಡಿಕೆ ಮಾಡಿಸಿದ ಅಂಶ ಸಿಐಡಿ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಬಯಲಾಗಿದೆ.

ಅದಕ್ಕಾಗಿ ಅಭ್ಯರ್ಥಿಗಳ ಆಪ್ತ ಸಂಬಂಧಿಕರ ಹೆಸರಿನಲ್ಲಿ ಕಲಬುರಗಿಯ ಸೂಪರ್ ಮಾರ್ಕೆಟ್‌ನಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಖಾತೆ ತೆರೆಯಲಾಗುತ್ತಿತ್ತು. ಖಾತೆ ತೆರೆದ ದಿನವೇ ಆ ಖಾತೆಗೆ ₹ 10 ಲಕ್ಷದಿಂದ ₹ 20 ಲಕ್ಷದವರೆಗೂ ಹಣ ಜಮಾ ಆಗುತ್ತಿತ್ತು. ಅದೇ ದಿನವೇ ಆರ್‌.ಡಿ. ಪಾಟೀಲ ಹೆಸರಿನಲ್ಲಿ ಮ್ಯೂಚುವಲ್‌ ಫಂಡ್‌ಗೆ ಹಣ ಹೂಡಿಕೆಯಾಗುತ್ತಿತ್ತು ಎಂಬ ಸ್ಫೋಟಕ ಅಂಶ ಹೊರಬಿದ್ದಿದೆ.

ಬ್ಲೂಟೂತ್‌ ಮೂಲಕ ನಗರದ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆ, ಎಂ.ಎಸ್. ಇರಾನಿ ಕಾಲೇಜು ಹಾಗೂ ನೊಬೆಲ್ ಶಾಲೆಯಲ್ಲಿ ಆರಂಭಿಸಲಾಗಿದ್ದ ಪಿಎಸ್‌ಐ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ತನ್ನ ತಂಡದ ಮೂಲಕ ಆರ್.ಡಿ. ಪಾಟೀಲ ಉತ್ತರ ಹೇಳಿಸಿದ್ದ. ಅದಕ್ಕೆ ಪ್ರತಿಯಾಗಿ ಪ್ರತಿ ಅಭ್ಯರ್ಥಿಗಳಿಂದ ₹ 30ರಿಂದ ₹ 40 ಲಕ್ಷದವರೆಗೆ ಹಣ ಪಡೆದಿದ್ದ. ವ್ಯವಹಾರದ ಡೀಲ್ ಕುದುರಿದ ಬಳಿಕ ಹಾಗೂ ಪಿಎಸ್‌ಐ ಪರೀಕ್ಷೆಯ ಫಲಿತಾಂಶ ಪ್ರಕಟವಾದ ಬಳಿಕ ಹೀಗೆ ಎರಡು ಕಂತುಗಳಲ್ಲಿ ಅಭ್ಯರ್ಥಿಗಳಿಂದ ಹಣ ಪಡೆದಿದ್ದ.

ADVERTISEMENT

ನೇರವಾಗಿ ನಗದು ಹಣ ಪಡೆಯುವುದರ ಜೊತೆಗೆ ತನ್ನ ಖಾತೆ ಇರುವ ಬ್ಯಾಂಕ್‌ ಆಫ್ ಬರೋಡಾ ಶಾಖೆ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೆಸರಿನಲ್ಲಿ ಹೂಡಿಕೆ ಮಾಡುವಂತೆ ಅಭ್ಯರ್ಥಿಗಳಿಗೆ ಸೂಚನೆ ನೀಡಿದ್ದ. ಇದನ್ನು ಅನುಸರಿಸಿದ ಅಭ್ಯರ್ಥಿಗಳು ತಮ್ಮ ಆಪ್ತರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಖಾತೆ ತೆರೆಯುತ್ತಿದ್ದರು. ಕೆಲ ಹೊತ್ತಿನಲ್ಲೇ ಪಾಟೀಲ ಹೆಸರಿನಲ್ಲಿ ಮ್ಯೂಚುವಲ್ ಫಂಡ್‌ ರೂಪದಲ್ಲಿ ಹೂಡಿಕೆಯಾಗುತ್ತಿತ್ತು ಎಂದು ಪ್ರಕರಣದ ವಿಚಾರಣೆ ನಡೆಸಿದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ವ್ಯವಸ್ಥಾಪಕ ವಿಚಾರಣೆ: ಆರ್‌.ಡಿ. ಪಾಟೀಲ ಹೆಸರಲ್ಲಿ ಏಕಾಏಕಿ ₹ 2 ಕೋಟಿಗೂ ಅಧಿಕ ಹಣ ಮ್ಯೂಚುವಲ್ ಫಂಡ್ ಸೇರಿದಂತೆ ವಿವಿಧ ಬಗೆಯಲ್ಲಿ ಹೂಡಿಕೆಯಾದ ಬಗ್ಗೆ ಮಾಹಿತಿ ಪಡೆಯಲು ಬ್ಯಾಂಕ್‌ ಆಫ್ ಬರೋಡ ಸೂಪರ್ ಮಾರ್ಕೆಟ್ ಶಾಖೆಯ ವ್ಯವಸ್ಥಾಪಕರನ್ನು ಸಿಐಡಿ ಅಧಿಕಾರಿಗಳು ತನಿಖೆಗೆ ಒಳಪಡಿಸಿದ್ದಾರೆ.

ಬಹುತೇಕ ಹೂಡಿಕೆಗಳು ಕಳೆದ ಅಕ್ಟೋಬರ್ ಹಾಗೂ ಜನವರಿ ತಿಂಗಳಲ್ಲೇ ಆಗಿವೆ ಎಂಬ ಮಾಹಿತಿಯನ್ನು ಬ್ಯಾಂಕ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅಕ್ಟೋಬರ್‌ 3ರಂದು ಪಿಎಸ್‌ಐ ಪರೀಕ್ಷೆ ನಡೆದಿತ್ತು. ಜನವರಿಯಲ್ಲಿ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.