ಕಲಬುರಗಿ: ಇಲ್ಲಿನ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ನಡೆದ, ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇರೆಗೆ ಒಬ್ಬರು ಡಿವೈಎಸ್ಪಿ, ಒಬ್ಬರು ನಿವೃತ್ತ ಡಿವೈಎಸ್‌ಪಿ ಹಾಗೂ ಒಬ್ಬರು ಇನ್‌ಸ್ಪೆಕ್ಟರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂವರು ಅಧಿಕಾರಿಗಳ ಪೈಕಿ ಇಬ್ಬರು ಇನ್ನೂ ಕಲಬುರಗಿಯಲ್ಲೇ ಸೇವೆಯಲ್ಲಿದ್ದಾರೆ. ಪರೀಕ್ಷಾ ಅಕ್ರಮದಲ್ಲಿ ಮೂವರ ಪಾತ್ರವೂ ವಿಭಿನ್ನವಾಗಿದೆ ಎಂದು ಮೂಲಗಳು ಹೇಳುತ್ತವೆ. ಪರೀಕ್ಷೆ ನಡೆದ ದಿನ (2021 ಅಕ್ಟೋಬರ್ 3) ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಒಬ್ಬ ಡಿವೈಎಸ್ಪಿ ಕಸ್ಟೋಡಿಯನ್ ಜವಾಬ್ದಾರಿಗೆ ನಿಯೋಜನೆಗೊಂಡಿದ್ದರು. ಆದರೆ, ಪರೀಕ್ಷೆ ಆರಂಭವಾದ ಕೆಲವೇ ನಿಮಿಷಗಳಲ್ಲಿ, ಸಂಬಂಧಿಕರು ತೀರಿಕೊಂಡಿದ್ದಾರೆ ಎಂದು ಹೇಳಿ ಹೋದರು. ಅವರ ಬದಲಿಗೆ ಬೇರೊಬ್ಬ ಡಿವೈಎಸ್ಪಿ ಕಸ್ಟೋಡಿಯನ್ ಆಗಿ ಬಂದರು. ಇಬ್ಬರೂ ಅಕ್ರಮಕ್ಕೆ ಸಾಥ್ ನೀಡುವ ಉದ್ದೇಶದಿಂದಲೇ ಒಬ್ಬರಾದ ಮೇಲೆ ಒಬ್ಬರು ಜವಾಬ್ದಾರಿ ನಿರ್ವಹಿಸುವ ಉಪಾಯ ಮಾಡಿದ್ದಾರೆ. ಅಲ್ಲದೇ, ನಗರದ ಠಾಣೆಯೊಂದರ ಇನ್‌ಸ್ಪೆಕ್ಟರ್ ಕೂಡ ಇವರಿಬ್ಬರೊಂದಿಗೆ ಕೈ ಜೋಡಿಸಿದ್ದಾರೆಎಂಬ ಗುಮಾನಿ ತನಿಖಾಧಿಕಾರಿಗಳಿಗೆ ಬಂದಿದೆ ಎನ್ನುತ್ತವೆ ಮೂಲಗಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.