ADVERTISEMENT

ಪಿಎಸ್‌ಐ ಹಗರಣ: ಬ್ಲೂಟೂತ್‌ ಮೂಲಕ ಉತ್ತರ ಹೇಳಿದ್ದ ಕಲಬುರಗಿಯ ಶಿಕ್ಷಕ ಬಂಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ನವೆಂಬರ್ 2022, 10:04 IST
Last Updated 14 ನವೆಂಬರ್ 2022, 10:04 IST
ಶಂಕ್ರಪ್ಪ ಬಸಪ್ಪ ಹನಮಗೊಂಡ
ಶಂಕ್ರಪ್ಪ ಬಸಪ್ಪ ಹನಮಗೊಂಡ   

ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗೆ ಉತ್ತರಗಳನ್ನು ಬ್ಲೂಟೂತ್‌ ಮೂಲಕ ಹೇಳಿದ ಆರೋಪದ ಮೇರೆಗೆ ಸಿಐಡಿ ಅಧಿಕಾರಿಗಳು ಚಿತ್ತಾಪುರ ತಾಲ್ಲೂಕಿನ ಕರದಾಳ ಗ್ರಾಮದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಂಕ್ರಪ್ಪ ಬಸಪ್ಪ ಹನಮಗೊಂಡ (32) ಎಂಬಾತನನ್ನು ಬಂಧಿಸಿ ತುಮಕೂರು ಸಿಐಡಿ ತಂಡಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಆರ್‌.ಡಿ. ಪಾಟೀಲ ನಿಕಟವರ್ತಿಯಾಗಿದ್ದ ಶಂಕ್ರಪ್ಪ ಅಭ್ಯರ್ಥಿಗಳನ್ನು ಹುಡುಕಿ ಹಣದ ವ್ಯವಹಾರವನ್ನು ಮಾಡುತ್ತಿದ್ದ. ಅಲ್ಲದೇ, ತುಮಕೂರಿನ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿ, ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಶ್ರೀಶೈಲ ಬಿರಾದಾರ ಎಂಬಾತನಿಗೆ ಉತ್ತರಗಳನ್ನು ಬ್ಲೂಟೂತ್ ಮೂಲಕ ಒದಗಿಸಿದ ಆರೋಪದ ಮೇರೆಗೆ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಐಡಿ ಡಿಟೆಕ್ಟಿವ್ ಸಬ್‌ ಇನ್‌ಸ್ಪೆಕ್ಟರ್ ಆನಂದ ಹಾಗೂ ಸಿಬ್ಬಂದಿ ಕುಮಾರವ್ಯಾಸ ಹಾಗೂ ಚಿತ್ತಾಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದರು.

ಮೂಲತಃ ಜೇವರ್ಗಿ ತಾಲ್ಲೂಕಿನ ಕುರನಳ್ಳಿ ಗ್ರಾಮದ ಶಂಕ್ರಪ್ಪ 2017ರಲ್ಲಿ ದೈಹಿಕ ಶಿಕ್ಷಣ ಶಿಕ್ಷಕನಾಗಿ ನೇಮಕವಾಗಿದ್ದ. ಇಂತಹ ಹಲವು ಅವ್ಯವಹಾರಗಳನ್ನು ಮಾಡಿರುವ ಶಂಕೆ ಇದ್ದು, ಅಭ್ಯರ್ಥಿಯಿಂದ ₹30 ಲಕ್ಷದ ಪೈಕಿ ₹20 ಲಕ್ಷ ಪಡೆದಿದ್ದ ಎಂದು ಮೂಲಗಳು ತಿಳಿಸಿವೆ.

ADVERTISEMENT

ಸಿಐಡಿ ಅಧಿಕಾರಿಗಳು ತನ್ನನ್ನು ಹುಡುಕುತ್ತಿರುವ ಸುಳಿವು ಪಡೆದಿದ್ದ ಶಂಕ್ರಪ್ಪ ಒಂದೂವರೆ ತಿಂಗಳಿಂದ ಶಾಲೆಗೆ ಗೈರು ಹಾಜರಾಗಿದ್ದ. ಕರದಾಳ ಗ್ರಾಮದಲ್ಲಿ ಇರುವ ಮಾಹಿತಿ ಪಡೆದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ನಂತರ ತುಮಕೂರಿನಿಂದ ಬಂದಿದ್ದ ಸಿಐಡಿ ಅಧಿಕಾರಿಗಳ ತಂಡ ಸೋಮವಾರ ಬೆಳಿಗ್ಗೆ ಹೆಚ್ಚಿನ ವಿಚಾರಣೆಗಾಗಿ ರಸ್ತೆ ಮೂಲಕ ತುಮಕೂರಿಗೆ ಕರೆದೊಯ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.