ADVERTISEMENT

ಪಿಎಸ್‌ಐ ಹಗರಣ: ಅಮ್ರಿತ್ ಪೌಲ್‌ರನ್ನು ಮಂಪರು ಪರೀಕ್ಷೆಗೆ ಒಳಪಡಿಸಿ –ಸಿದ್ದರಾಮಯ್ಯ 

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 8:39 IST
Last Updated 14 ಜುಲೈ 2022, 8:39 IST
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಮಾತನಾಡಿದರು
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸಿದ್ದರಾಮಯ್ಯ ಮಾತನಾಡಿದರು   

ಕಲಬುರಗಿ: ‘ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಸಿಐಡಿ ಅಧಿಕಾರಿಗಳಿಂದ ಬಂಧಿತರಾಗಿರುವ ನೇಮಕಾತಿ ವಿಭಾಗದ ಎಡಿಜಿಪಿಯಾಗಿದ್ದ ಅಮ್ರಿತ್ ಪೌಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಿದರೆ ಯಾರೆಲ್ಲ ರಾಜಕಾರಣಿಗಳು ಇರದಲ್ಲಿ ಶಾಮೀಲಾಗಿದ್ದಾರೆ ಎಂಬುದು ಗೊತ್ತಾಗಲಿದೆ. ಹಾಗಾಗಿ ಮಂಪರು ‍ಪರೀಕ್ಷೆ ಮಾಡಬೇಕು’ ಎಂದು ವಿಧಾನಸಭೆ ವಿರೋಧ ‍ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

ನಗರದ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಕ್ರಮದಲ್ಲಿ ಅನೇಕ ಸಚಿವರು, ಅವರ ಆಪ್ತರು ಶಾಮೀಲಾಗಿರುವ ಸಂದೇಹಗಳಿವೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಬೇಕು ಎಂದರೆ ಪ್ರಮುಖ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಅಮ್ರಿತ್ ಪೌಲ್ ಬರೆದ ಡೈರಿಯ ಬಗ್ಗೆಯೂ ಸಮಗ್ರ ತನಿಖೆ ನಡೆಸಬೇಕು. ಯಾವುದೇ ಕಾರಣಕ್ಕೂ ಈ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಬಾರದು’ ಎಂದರು.

ಹಲವು ಅಕ್ರಮ ನೇಮಕಾತಿಗಳು ತಾವು ಮುಖ್ಯಮಂತ್ರಿಯಾಗಿದ್ದಾಗ ನಡೆದಿವೆ ಎಂಬ ಸಚಿವ ಅಶ್ವತ್ಥನಾರಾಯಣ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಆಗ ಬಿಜೆಪಿಯವರು ವಿರೋಧ ಪಕ್ಷದಲ್ಲಿದ್ದರು. ಆಗಲೇ ಪ್ರಶ್ನಿಸಬೇಕಿತ್ತಲ್ಲ. ಆಗ ಬಾಯಲ್ಲಿ ಕಡುಬು ತುರುಕಿಕೊಂಡಿದ್ದರೇ’ ಎಂದು ಪ್ರಶ್ನಿಸಿದರು.‌

ADVERTISEMENT

ನೆರೆ ನಿರ್ವಹಣೆಗೆ ಅಸಮಾಧಾನ: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ರಾಜ್ಯ ಸರ್ಕಾರ ಇದನ್ನು ಸರಿಯಾಗಿ ನಿಭಾಯಿಸುತ್ತಿಲ್ಲ. ಎಷ್ಟು ಜನ ಜಿಲ್ಲಾ ಉಸ್ತುವಾರಿ ಸಚಿವರು ನೆರೆ ಪೀಡಿತ ಪ್ರದೇಶಗಳಲ್ಲಿದ್ದು ಮೇಲ್ವಿಚಾರಣೆ ನಡೆಸುತ್ತಿದ್ದಾರೆ ಎಂದು ಪ್ರಶ್ನಿಸಿದರು.

2019ರಲ್ಲಿ ನೆರೆಯಿಂದಾಗಿ ಬಿದ್ದ ಮನೆಗಳನ್ನು ಸರ್ಕಾರ ಪುನರ್ ನಿರ್ಮಾಣ ಮಾಡಲು ಪರಿಹಾರ ನೀಡಿಲ್ಲ. 2020ರಲ್ಲಿನ ಮಳೆ ಹಾನಿಗೂ ಸೂಕ್ತ ಪರಿಹಾರ ನೀಡಿಲ್ಲ ಎಂದು ಟೀಕಿಸಿದರು.

‘ಪ್ರಶ್ನಿಸಿದರೆ ಆರ್‌ಎಸ್‌ಎಸ್‌ನವರು ಕೇಸ್ ಹಾಕ್ತಾರೆ’
ದೇವನೂರು ಮಹಾದೇವ ಅವರು ಬರೆದ ’ಆರ್‌ಎಸ್‌ಎಸ್‌ ಆಳ ಆಗಲ‘ ಪುಸ್ತಕಕ್ಕೆ ಆರ್‌ಎಸ್‌ಎಸ್‌, ಬಿಜೆಪಿಯವರು ವಿರೋಧ ವ್ಯಕ್ತಪಡಿಸಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಆರ್‌ಎಸ್‌ಎಸ್‌ನವರು ಟೀಕೆಯನ್ನು ಸಹಿಸಿಕೊಳ್ಳುವುದಿಲ್ಲ. ಯಾರಾದರೂ ಪ್ರಶ್ನಿಸಿದರೆ ಅವರ ವಿರುದ್ಧವೇ ಕೇಸ್ ಹಾಕುತ್ತಾರೆ. ದೇಶದಲ್ಲಿ ಇಂದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದೊಡ್ಡ ಧಕ್ಕೆ ಎದುರಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಂವಿಧಾನ ನಮಗೆ ನೀಡಿದ ಮೂಲಭೂತ ಹಕ್ಕು. ಪ್ರಶ್ನಿಸಿದರೆ ಇವರಿಗೇನು ಕಷ್ಟ’ ಎಂದರು.

‘ಜನ್ಮದಿನ ಆಚರಣೆಯಿಂದ ಬಿಜೆಪಿಗೆ ನಡುಕ’
ಅಭಿಮಾನಿಗಳು ನನ್ನ ಜನ್ಮದಿನದ ಅಮೃತ ಮಹೋತ್ಸವ ಆಯೋಜಿಸುತ್ತಿರುವುದಕ್ಕೆ ಬಿಜೆಪಿಯವರಲ್ಲಿ ನಡುಕ ಹುಟ್ಟಿಸಿದೆ. ಹೀಗಾಗಿ, ಹತಾಶೆಯಿಂದ ಮಾತನಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಇದಕ್ಕೆ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಕಾರ್ಯಕ್ರಮದಲ್ಲಿ ಲಕ್ಷಾಂತರ ಜನ ಸೇರುತ್ತಾರೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಸೋಲಿನ ಭಯ ಅವರಿಗೆ ಕಾಡುತ್ತಿದೆ. ಈ ಹಿಂದೆ ಯಡಿಯೂರಪ್ಪ ಜನ್ಮದಿನ ಆಚರಿಸಿಕೊಂಡಿದ್ದರು. ಆಗ ನಾನು ಕೂಡಾ ಹೋಗಿದ್ದೆ. ನನ್ನ ಜನ್ಮದಿನ ಮಾಡಿಕೊಂಡರೆ ಅವರಿಗೇಕೆ ಭಯ ಎಂದರು.

‘ಈ ಸರ್ಕಾರ ಭ್ರಷ್ಟಾಚಾರದ ಸರ್ಕಾರವಾಗಿದೆ. ಹೋಟೆಲ್‌ನಲ್ಲಿ ತಿಂಡಿ ಬೆಲೆ ಹಾಕಿದಂತೆ ಅಧಿಕಾರಿಗಳ ವರ್ಗಾವಣೆಗೆ ರೇಟ್ ಬೋರ್ಡ್ ಹಾಕಿ ಬೆಲೆ ನಿಗದಿಪಡಿಸಿದ್ದಾರೆ. ಇದು 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಜರಿದರು.

ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ್ ಸಿಂಗ್‌, ಕೆಪಿಸಿಸಿ ಉಪಾಧ್ಯಕ್ಷ ಡಾ.ಶರಣಪ್ರಕಾಶ ಪಾಟೀಲ, ಪ್ರಧಾನ ಕಾರ್ಯದರ್ಶಿ ಶರಣಕುಮಾರ ಮೋದಿ‌, ವಿಧಾನಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.