ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: 6 ದಿನ ಸಿಐಡಿ ಕಸ್ಟಡಿಗೆ ಶಾಂತಿಬಾಯಿ, ಬಸ್ಯ ನಾಯ್ಕ

​ಪ್ರಜಾವಾಣಿ ವಾರ್ತೆ
Published 31 ಮೇ 2022, 17:11 IST
Last Updated 31 ಮೇ 2022, 17:11 IST
   

ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಬಂಧಿತರಾದ ಅಭ್ಯರ್ಥಿ, ಸೇಡಂ ತಾಲ್ಲೂಕು ಕೋನಾಪುರ ಎಸ್‌.ಎನ್. ತಾಂಡಾ ನಿವಾಸಿ ಶಾಂತಿಬಾಯಿ ಹಾಗೂ ಅವರ ಪತಿ ಬಸ್ಯ ನಾಯ್ಕಗೆ ಇಲ್ಲಿನ ಮೂರನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ 6 ದಿನಗಳ ಸಿಐಡಿ ಕಸ್ಟಡಿಗೆ ನೀಡಿ ಮಂಗಳವಾರ ಆದೇಶ ಹೊರಡಿಸಿದೆ.

ನಗರದ ಜ್ಞಾನಜ್ಯೋತಿ ಇಂಗ್ಲಿಷ್ ಮಾಧ್ಯಮ ಶಾಲೆಯ ಪಿಎಸ್‌ಐ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಶಾಂತಿಬಾಯಿ ಅಕ್ರಮವಾಗಿ ಒಎಂಆರ್ ಶೀಟ್‌ನಲ್ಲಿ ತಿದ್ದುಪಡಿ ಮಾಡಿಸಿ ಅಕ್ರಮ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಇವರ ಹೆಸರು ಬಂದಿತ್ತು.

ಏಪ್ರಿಲ್ 10ರಿಂದಲೇ ಪರಾರಿಯಾಗಿ ಹೈದರಾಬಾದ್‌ನಲ್ಲಿ ತಲೆಮರೆಸಿಕೊಂಡಿದ್ದ ಶಾಂತಿಬಾಯಿ ಹಾಗೂ ಪತಿ ಬಸ್ಯ ನಾಯ್ಕ ಅವರನ್ನು ಸೋಮವಾರ ಸಿಐಡಿ ಪೊಲೀಸರು ಬಂಧಿಸಿ ಕರೆತಂದಿದ್ದರು.

ADVERTISEMENT

ಮಂಗಳವಾರ ನ್ಯಾಯಾಲಯದ ಎದುರು ಹಾಜರುಪಡಿಸಿದ ಸಿಐಡಿ ಅಧಿಕಾರಿಗಳು ಆರೋಪಿಗಳನ್ನು 11 ದಿನ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡಿದರು.

ನ್ಯಾಯಾಧೀಶ ಶ್ರೀನಿವಾಸ್ ಕೆ.ಆರ್. ಅವರು ಆರು ದಿನಗಳವರೆಗೆ ಸಿಐಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದರು.

ದಂಪತಿಯೊಂದಿಗೆ ನಾಲ್ಕು ವರ್ಷದ ಪುತ್ರ, ಮೂರು ವರ್ಷದ ಪುತ್ರಿ ಇದ್ದಾರೆ. ಮಕ್ಕಳನ್ನು ನೋಡಿಕೊಳ್ಳಲು ಯಾರೂ ಮುಂದೆ ಬಾರದ್ದರಿಂದ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.