ADVERTISEMENT

PSI ನೇಮಕಾತಿ ಹಗರಣದ ಆರೋಪಿ–ಜೈಲು ವಾರ್ಡರ್‌ ನಡುವೆ ಜಟಾಪಟಿ: ದೂರು–ಪ್ರತಿದೂರು

ಆರ್‌.ಡಿ.ಪಾಟೀಲ ವಿರುದ್ಧ ಮತ್ತೊಂದು ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 15:50 IST
Last Updated 23 ನವೆಂಬರ್ 2025, 15:50 IST
   

ಕಲಬುರಗಿ: ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್‌.ಡಿ.ಪಾಟೀಲ ಹಾಗೂ ಕಲಬುರಗಿ ಕೇಂದ್ರ ಕಾರಾಗೃಹದ ವಾರ್ಡರ್‌ ನಡುವೆ ಇತ್ತೀಚೆಗೆ ‘ಜಟಾಪಟಿ’ ನಡೆದಿದೆ.

ಸುಪ್ರೀಂಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದಿರುವ ಆರ್‌.ಡಿ.ಪಾಟೀಲ ಜೈಲಿನಿಂದ ಬಿಡುಗಡೆಯಾಗುವ ಹೊತ್ತಲ್ಲಿ ಈ ಗಲಾಟೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ವಾಗ್ವಾದ,ನೂಕಾಟ–ತಳ್ಳಾಟದ ಬೆನ್ನಲ್ಲೆ ಪರಸ್ಪರು ನೀಡಿದ ದೂರುಗಳನ್ವಯ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ದೂರಿನಲ್ಲಿ ಏನಿದೆ?

ADVERTISEMENT

‘ನನಗೆ ಸುಪ್ರೀಂ ಕೋರ್ಟ್‌ನಿಂದ ಮೂರು ವಾರಗಳ ಮಧ್ಯಂತರ ಜಾಮೀನು ಸಿಕ್ಕಿತ್ತು. ಜೈಲಿನಿಂದ ಬಿಡುಗಡೆಯಾಗುವ ವೇಳೆ ವಾರ್ಡರ್‌ ಶಿವಕುಮಾರ, ನನ್ನ ಮೇಲೆ ಹಲ್ಲೆ ನಡೆಸಿದರು. ಜಾಮೀನು ಹೇಗೆ ಪಡೆದುಕೊಂಡೆ ಎಂದು ಪ್ರಶ್ನಿಸಿದರು. ಜೈಲಿನಿಂದ ಹೊರಗೆ ಹೋಗಲು ಬಿಡಲ್ಲ ಎಂದು ತಳ್ಳಿದರು. ನಾನು ಪ್ರಜ್ಞಾಹೀನನಾಗಿ ಬಿದ್ದೆ. ದಾಳಿಯಲ್ಲಿ ಎಡ ಕಿವಿಯಿಂದ ರಕ್ತಸ್ರಾವ, ಬೆನ್ನಿಗೆ ಗಾಯವಾಯಿತು. ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆದೆ. ಜೈಲು ಸಿಬ್ಬಂದಿ ಕ್ರಿಮಿನಲ್‌ ಬೆದರಿಕೆ ಒಡ್ಡಿದ್ದಾರೆ. ಅಕ್ರಮ ಬಂಧನ, ಸಾರ್ವಜನಿಕ ಸೇವೆ ದುರುಪಯೋಗ ಮಾಡಿದ್ದು, ಎಫ್‌ಐಆರ್‌ ದಾಖಲಿಸಿ ಕ್ರಮಕೈಗೊಳ್ಳಬೇಕು’ ಎಂದು ಆರ್‌.ಡಿ.ಪಾಟೀಲ ದೂರಿನಲ್ಲಿ ಒತ್ತಾಯಿಸಿದ್ದಾರೆ.

‘ಆರ್‌.ಡಿ.ಪಾಟೀಲ ಜೈಲಿನ ಮುಖ್ಯಅಧೀಕ್ಷಕರಿಗೆ ಪತ್ರ ಬರೆದಿದ್ದು, ಅದನ್ನು ತೋರಿಸಲು ಏರುಧ್ವನಿಯಲ್ಲಿ ಅವಕಾಶ ಕೇಳಿ ಅವಸರಿಸಿದ. ನೀವು ಬೇಗ ಪತ್ರ ತೆಗೆದುಕೊಂಡು ಹೋಗದಿದ್ದರೆ, ತಾನೇ ತೆಗೆದುಕೊಂಡು ಹೋಗುವುದಾಗಿ ಮುಖ್ಯ ಜೈಲು ಅಧೀಕ್ಷಕರ ಕಚೇರಿಯತ್ತ ನುಗ್ಗಿದ. ಆತನನ್ನು ನಾನು ತಡದೆ. ಆತ ಅವಾಚ್ಯವಾಗಿ ನಿಂದಿಸಿದ. 24 ಗಂಟೆಗಳಲ್ಲಿ ವರ್ಗಾವಣೆ ಮಾಡಿಸುವುದಾಗಿ ಬೆದರಿಕೆ ಒಡ್ಡಿದ. ಮೂರು ವಾರ ಜಾಮೀನು ಸಿಕ್ಕಿದ್ದು, ಆ ಅವಧಿಯಲ್ಲಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ’ ಎಂದು ಕಲಬುರಗಿ ಕೇಂದ್ರ ಕಾರಾಗೃಹದ ವಾರ್ಡರ್‌ ಶಿವಕುಮಾರ ದೂರಿನಲ್ಲಿ ಹೇಳಿದ್ದಾರೆ.

ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೂ ಪ್ರತ್ಯೇಕ ಎಫ್‌ಐಆ‌ರ್ ದಾಖಲಿಸಲಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.