ಜೇವರ್ಗಿ: ತಾಲ್ಲೂಕಿನ ಚನ್ನೂರ ಗ್ರಾಮದ ಹತ್ತಿರದ ಆದರ್ಶ ಕೇಂದ್ರೀಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಪದವಿ ಪೂರ್ವ ಕಾಲೇಜು ವಿಭಾಗ ಆರಂಭವಾಗುತ್ತಿದ್ದು, ಸಿದ್ಧತೆ ಭರದಿಂದ ಸಾಗಿದೆ.
ಗುಣಮಟ್ಟ ಶಿಕ್ಷಣ ನೀಡುವ ನಿಟ್ಟಿನಲ್ಲಿ ‘ಕ್ರೈಸ್’ ವತಿಯಿಂದ ಈ ವಸತಿ ರಹಿತ ಶಾಲೆ ಕಳೆದ 2005ರಲ್ಲಿ ಆರಂಭಿಸಲಾಗಿದೆ. ಜೇವರ್ಗಿ ಹಾಗೂ ಯಡ್ರಾಮಿ ಅವಳಿ ತಾಲ್ಲೂಕಿನ ಏಕೈಕ ಆದರ್ಶ ಶಾಲೆ ಇದಾಗಿದೆ. ಮೂರು ಮಹಡಿಯ ಈ ಕಟ್ಟಡದಲ್ಲಿ 35 ಕೋಣೆಗಳಿದ್ದು, ವಿಶಾಲವಾದ ಆಟದ ಮೈದಾನವಿದೆ. ಪ್ರಸಕ್ತ ವರ್ಷದಿಂದ ಈ ಶಾಲೆಯಲ್ಲಿ ಪಿಯುಸಿ ವಿಭಾಗ ಆರಂಭವಾಗುತ್ತಿದೆ. ಇಲ್ಲಿ 6ರಿಂದ 10ನೇ ತರಗತಿವರೆಗೆ ನಡೆಯುತ್ತಿದ್ದು, ಪ್ರತಿ ತರಗತಿಗೆ 80 ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಎಸ್.ಸಿ, ಎಸ್.ಟಿ ಹಾಗೂ ಪ್ರವರ್ಗ-1ರ ವಿದ್ಯಾರ್ಥಿಗಳಿಗೆ ₹ 255, ಒಬಿಸಿ ವಿದ್ಯಾರ್ಥಿಗಳಿಗೆ ₹ 946 ಹಾಗೂ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ₹ 1,952 ಶುಲ್ಕ ನಿಗದಿ ಮಾಡಲಾಗಿದೆ.
ಎಸ್‌ಎಸ್ಎಲ್‌ಸಿ ನಂತರ ವಿದ್ಯಾರ್ಥಿಗಳು ಸ್ಥಳೀಯವಾಗಿ ಪದವಿಪೂರ್ವ ಹಂತದ ಉತ್ತಮ ಶಿಕ್ಷಣದ ಕೊರತೆಯಿಂದಾಗಿ ಕಲಬುರಗಿ, ಬೀದರ್, ವಿಜಯಪುರ, ಬೆಂಗಳೂರು, ಮೈಸೂರು.. ಹೀಗೆ ವಿವಿಧ ಜಿಲ್ಲೆಗಳಿಗೆ ಹೋಗಬೇಕಿತ್ತು. ಈಗ ಆದರ್ಶ ಶಾಲೆಯಲ್ಲಿಯೇ ಸರ್ಕಾರಿ ಪಿಯುಸಿ ಕಾಲೇಜು ಆರಂಭವಾಗುವುದರಿಂದ ಹೆಚ್ಚು ಅನುಕೂಲವಾಗಲಿದೆ. ಆದರೆ ಉಪನ್ಯಾಸಕರು, ಸಿಬ್ಬಂದಿ ನೇಮಕ ಇನ್ನಷ್ಟೇ ಆರಂಭ ಆಗಬೇಕಿದೆ.
ಪ್ರಸಕ್ತ ವರ್ಷದಿಂದ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ ಮತ್ತು ಪಿಸಿಎಂಸಿ ವಿಷಯಗಳ ವಿಭಾಗ ಹಾಗೂ ವಾಣಿಜ್ಯದಲ್ಲಿ ‘ಇಬಿಎಸಿಎಸ್’ ವಿಭಾಗಗಳು ಕಾರ್ಯಾರಂಭವಾಗಲಿವೆ. ಪ್ರತಿ ವಿಭಾಗಕ್ಕೆ 80 ವಿದ್ಯಾರ್ಥಿಗಳಂತೆ ವಾರ್ಷಿಕ 240 ವಿದ್ಯಾರ್ಥಿಗಳಿಗೆ ಪ್ರವೇಶ ಸಿಗಲಿದೆ. ಪ್ರಸಕ್ತ ವರ್ಷ ಆದರ್ಶ ಶಾಲೆಯಲ್ಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ನೇರ ಪ್ರವೇಶ ಪಡೆಯಬಹುದಾಗಿದೆ. ಬಾಕಿ ಸೀಟುಗಳಿಗೆ ನೇರವಾದ ದಾಖಲಾತಿ ಕಲ್ಪಿಸಲಾಗುವುದು. ಪ್ರವೇಶ ಮಿತಿಯನ್ನು 80ಕ್ಕೆ ಬದಲು 120ಕ್ಕೆ ಹೆಚ್ಚಿಸುವ ಸಾಧ್ಯತೆಯೂ ಇದೆ.
ತಾಲ್ಲೂಕಿನಲ್ಲಿ ಪಿಯುಸಿ ಹಂತದಲ್ಲಿ ವಿಜ್ಞಾನ ವಿಷಯದ ಶಿಕ್ಷಣ ವ್ಯವಸ್ಥೆ ಇರಲಿಲ್ಲ. ಈಗ ಕೊರತೆ ನೀಗಿಸುವ ಪ್ರಯತ್ನ ಆಶಾದಾಯಕವಾಗಿದೆ. ಅಗತ್ಯ ಸೌಕರ್ಯ ನೀಡುವ ಮೂಲಕ ಸರ್ಕಾರ ನೆರವಿಗೆ ಬರಬೇಕು’ ಎಂದು ಪಾಲಕರು ಮನವಿ ಮಾಡಿದ್ದಾರೆ.
ನೂತನವಾಗಿ ಪಿಯು ವಿಭಾಗಕ್ಕೆ ವಿಜ್ಞಾನ ಪ್ರಯೋಗಾಲಯ ಸೌಲಭ್ಯ, ಅಧುನಿಕ ಗ್ರಂಥಾಲಯ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಇಡೀ ಶಾಲೆಗೆ ‘ಡಿ’ ಗ್ರೂಪ್ ನೌಕರರ ಹುದ್ದೆ ಸೃಷ್ಟಿಸಿಲ್ಲ. ಇದರಿಂದ ಅಧುನಿಕ ಪ್ರಯೋಗಾಲಯ ಶೌಚಾಲಯ ಕೊಠಡಿಗಳ ಸ್ವಚ್ಛತೆ ಕಷ್ಟಸಾಧ್ಯವಾಗಲಿದೆ. ಶಾಲೆ ಪಟ್ಟಣದಿಂದ 5 ಕಿ.ಮೀ. ದೂರದಲ್ಲಿದ್ದು, ಸರ್ಕಾರದಿಂದ ಬಸ್ ವ್ಯವಸ್ಥೆ ಆಗಬೇಕು ಎಂಬುದು ವಿದ್ಯಾರ್ಥಿ ವಲಯದ ಬೇಡಿಕೆಯಾಗಿದೆ.
ತಾಲ್ಲೂಕಿನ ಸರ್ಕಾರಿ ಪಿಯುಸಿ ಕಾಲೇಜುಗಳಲ್ಲಿರುವ ಉಪನ್ಯಾಸಕರನ್ನು ನಿಯೋಜಿಸಲಾಗುವುದು. ಜತೆಗೆ ಅತಿಥಿ ಉಪನ್ಯಾಸಕರನ್ನು ನೇಮಿಸಲಾಗುವುದು. ವಿಜ್ಞಾನ ಪ್ರಯೋಗಾಲಯ ಗ್ರಂಥಾಲಯ ಶೌಚಾಲಯ ವ್ಯವಸ್ಥೆ ಇರಲಿದೆಶಿವಶರಣಪ್ಪ ಜೆ. ಪ್ರಾಚಾರ್ಯ ಆದರ್ಶ ಪಿಯು ಕಾಲೇಜು ಚನ್ನೂರ
ಚನ್ನೂರ ಸುತ್ತಲಿನ ಹತ್ತಾರು ಹಳ್ಳಿಗಳ ಬಡ ಹಿಂದುಳಿದ ಮಕ್ಕಳಿಗೆ ಈ ಕಾಲೇಜಿನಿಂದ ಅನುಕೂಲವಾಗಲಿದೆ. ಅತ್ಯಂತ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುವುದುಮಲ್ಲಿಕಾರ್ಜುನ ಹೂಗಾರ ಉಪಪ್ರಾಚಾರ್ಯ ಆದರ್ಶ ಪಿಯು ಕಾಲೇಜು ಚನ್ನೂರ
ಮುಖ್ಯ ರಸ್ತೆಯಿಂದ ಶಾಲೆಯವರೆಗೆ ಸಿಸಿ ರಸ್ತೆ ಅಪೂರ್ಣಗೊಂಡ ಕಂಪೌಂಡ್ ಗೋಡೆ ನಿರ್ಮಾಣ ಮಾಡಬೇಕು. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಒದಗಿಸಬೇಕುಮಲ್ಲಣಗೌಡ ಪಾಟೀಲ ಅಧ್ಯಕ್ಷ ಎಸ್‌ಡಿಎಂಸಿ ಆದರ್ಶ ವಿದ್ಯಾಲಯ ಚನ್ನೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.