ADVERTISEMENT

ಜೇವರ್ಗಿ | ನಿರ್ಜನ ಪ್ರದೇಶದಲ್ಲಿ ಹೆಚ್ಚಿದ ಕುಡುಕರ ಹಾವಳಿ

ಸಂಜೆ ಓಡಾಡಲು ಮಹಿಳೆಯರು ಹಿಂಜರಿಕೆ, ಕುಡುಕರ ಅಡ್ಡೆಯಾದ ಖಾಲಿ‌ ನಿವೇಶನಗಳು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2025, 7:28 IST
Last Updated 3 ನವೆಂಬರ್ 2025, 7:28 IST
ಜೇವರ್ಗಿ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಲೇಔಟ್‌ನಲ್ಲಿ ಬಿದ್ದ ಮದ್ಯದ ಪ್ಯಾಕೇಟ್‌, ಬಾಟಲ್‌ಗಳು
ಜೇವರ್ಗಿ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಲೇಔಟ್‌ನಲ್ಲಿ ಬಿದ್ದ ಮದ್ಯದ ಪ್ಯಾಕೇಟ್‌, ಬಾಟಲ್‌ಗಳು   

ಜೇವರ್ಗಿ: ಪಟ್ಟಣ ಹೊರ ವಲಯದಲ್ಲಿರುವ ಖಾಲಿ ನಿವೇಶನಗಳು ಸಂಜೆಯಾಗುತ್ತಲೇ ಪುಂಡರು ಮದ್ಯಪಾನ ಮಾಡುತ್ತ ಹರಟೆ ಹೊಡೆಯುವ ಸ್ಥಳಗಳಾಗಿವೆ.

ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಲೇಔಟ್, ಬೈಪಾಸ್ ರಸ್ತೆ, ಫುಡ್‌ಪಾರ್ಕ್, ತಾಲ್ಲೂಕು ಕ್ರೀಡಾಂಗಣ, ಶಹಾಪುರ ರಸ್ತೆಯಲ್ಲಿ ಬರುವ ಲೇಔಟ್ ಸೇರಿದಂತೆ ಹಲವಾರು ಖಾಲಿ ನಿವೇಶನಗಳು ಕುಡುಕರು ಅಡ್ಡೆಗಳಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ.

ಪಟ್ಟಣದಲ್ಲಿ ಪರವಾನಿಗೆ ಹೊಂದಿರುವ ಐದು ಸಿಎಲ್-7, ಎರಡು ಸಿಎಲ್-9, ಎರಡು ಸಿಎಲ್-2, ಎರಡು ಎಂಎಸ್‌ಐಎಲ್ ಸೇರಿ ಒಟ್ಟು 11 ಬಾರುಗಳಿವೆ. ರಾತ್ರಿ 10 ಗಂಟೆ ಹೊತ್ತಿಗೆ ಎಲ್ಲೆಡೆ ಬಾರ್‌, ವೈನ್‌ಶಾಪ್‌ಗಳು ಬಂದ್‌ ಆದರೂ ರಾತ್ರಿ ಕುಡುಕರ ಹಾವಳಿ ರಾತ್ರಿಯಿಡಿ ಮುಂದುವರಿಯುತ್ತದೆ. ಪಟ್ಟಣದಲ್ಲಿರುವ, ಶಾಲಾ ಆವರಣ, ಕೆರೆ–ಕಟ್ಟೆ, ಹೊಂಡಗಳ ಆಸುಪಾಸಿನ ಖಾಲಿ ಜಾಗಗಳೇ ಕುಡುಕರ ಪಾಲಿಗೆ ಬಾರ್‌ ಆಗಿ ತಲೆ ಎತ್ತಿದ್ದು ಸಾರ್ವಜನಿಕರಿಗೆ ಕಿರಿಕಿರಿ ಎನಿಸಿದೆ.

ADVERTISEMENT

ಕುಡುಕರ ಹಾವಳಿ ತೀವ್ರಗೊಳ್ಳುತ್ತಿದ್ದು, ಸಾರ್ವಜನಿಕರು ರಸ್ತೆಗಳಲ್ಲಿ ನಿರಾತಂಕವಾಗಿ ಓಡಾಡುವುದು ಕಷ್ಟಸಾಧ್ಯವಾಗುತ್ತಿದೆ. ಎಲ್ಲೆಂದರಲ್ಲಿ ‘ಮುಕ್ತ ಬಾರ್‌’ಗಳು ತಲೆ ಎತ್ತುತ್ತಿದ್ದು ಕುಡುಕರ ನಿಯಂತ್ರಣವೇ ಇಲ್ಲದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಾನೂನಿನ ಭಯ ಇಲ್ಲದ ಕಾರಣ ಕಿಡಿಗೇಡಿಗಳ ಹಾವಳಿ ನಿರಾತಂಕವಾಗಿ ಮುಂದುವರಿದಿದೆ.

ಕದ್ದುಮುಚ್ಚಿ ಮದ್ಯಪಾನ ಮಾಡುವವರು, ಕೆಲ ಪುಂಡರು ಅಕ್ಕಪಕ್ಕದ ಸಾರ್ವಜನಿಕ ಸ್ಥಳದ ಸಂದಿಗೊಂದಿಗಳನ್ನು ಹುಡುಕುತ್ತಾರೆ. ಜನಸಂಚಾರ ಕಡಿಮೆ ಇರುವ ಅಥವಾ ಸಂದಿಗೊಂದಿಗಳಲ್ಲಿ ಕುಳಿತು ಮದ್ಯಪಾನ ಮಾಡುತ್ತಾರೆ. ಕೆಲವೊಮ್ಮೆ ರಸ್ತೆ ಪಕ್ಕದಲ್ಲೇ ಮದ್ಯಪಾನ ಮಾಡುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.

‘ಸಂಜೆಯಾಗುವುದೇ ತಡ ಬೈಕ್‌ ಹಾಗೂ ಕಾರುಗಳಲ್ಲಿ ಮದ್ಯದ ಬಾಟಲ್‌ಗಳೊಂದಿಗೆ ತೆರಳಿ ಕುಡಿದು ರಸ್ತೆ ಮೇಲೆ ಬಾಟಲ್ ಒಡೆದು ಹಾಕಲಾಗುತ್ತಿದೆ. ಬೆಳಿಗ್ಗೆ ಹಾಗೂ ಸಂಜೆ ವಾಯು ವಿಹಾರಕ್ಕೆ ಹೋಗುವವರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದಾರೆ. ಮಹಿಳೆಯರು ಸಂಜೆ ಸಮಯದಲ್ಲಿ ಅಡ್ಡಾಡಲು ಹಿಂಜರಿಯುತ್ತಿದ್ದಾರೆ. ಪಟ್ಟಣದ ಕೆಲವು ಮಾಂಸಹಾರಿ, ಹೋಟೆಲ್, ಡಾಬಾಗಳಲ್ಲಿ ಕದ್ದು ಮುಚ್ಚಿ ಹೆಚ್ಚಿನ ಬೆಲೆಯಲ್ಲಿ ಮದ್ಯ ಮಾರಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ರಸ್ತೆ ಮೇಲೆ ಬಿದ್ದಿರುವ ಮದ್ಯದ ಪ್ಯಾಕೆಟ್‌ಗಳು
ಅಂಬರೀಶ್ ಪತಂಗೆ
ಬಿ.ಎಚ್. ಮಾಲಿಪಾಟೀಲ
ರಾಜೇಸಾಬ ನದಾಫ್
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವನೆಗೆ ಕಡಿವಾಣ ಹಾಕಬೇಕು. ಅಬಕಾರಿ-ಪೊಲೀಸ್ ಇಲಾಖೆ ಅಧಿಕಾರಿಗಳು ಗಸ್ತು ತಿರುಗಿ ನಿಗಾ ಇಡಬೇಕು
ಅಂಬರೀಶ್ ಪತಂಗೆ ವಕೀಲ ಜೇವರ್ಗಿ
ಮದ್ಯಪಾನ ಮಾಡಿ ಎಲ್ಲೆಂದರಲ್ಲಿ ಬಾಟಲ್‌ಗಳನ್ನು ಒಡೆದು ಹಾಕುತ್ತಿರುವುದರಿಂದ ತೀವ್ರ ತೊಂದರೆಯಾಗುತ್ತಿದೆ. ಬಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು
ಬಿ.ಎಚ್. ಮಾಲಿಪಾಟೀಲ ಹೋರಾಟಗಾರ
ಫುಡ್‌ಪಾರ್ಕ್ ಹಾಗೂ ಕೆಲ ಖಾಲಿ ನಿವೇಶನಗಳಲ್ಲಿ ಸಂಜೆ ಹೊತ್ತಲ್ಲಿ ಪುಂಡರ ಹಾವಳಿ ಹೆಚ್ಚಾಗಿರುವ ಬಗ್ಗೆ ಮಾಹಿತಿ ಬಂದಿದ್ದು ಸೂಕ್ತ ಕ್ರಮ ಕೈಗೊಳ್ಳಲಾಗುವುದು
ರಾಜೇಸಾಬ್‌ ನದಾಫ್ ಸಿಪಿಐ ಜೇವರ್ಗಿ