
ಚಿಂಚೋಳಿ: ‘ತಾಲ್ಲೂಕಿನಲ್ಲಿ ಡಿ.21ರಿಂದ 24ವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ನಡೆಯುತ್ತಿದ್ದು, 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು’ ಎಂದು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿ ಮನವಿ ಮಾಡಿದರು.
‘ತಾಲ್ಲೂಕಿನಲ್ಲಿ 5 ವರ್ಷದೊಳಗಿನ 31,488 ಮಕ್ಕಳಿದ್ದು ಇವರಿಗೆ ಪಲ್ಸ್ ಪೊಲಿಯೋ ಲಸಿಕೆ ನೀಡಲು ಒಟ್ಟು 182 ತಂಡಗಳನ್ನು ರಚಿಸಲಾಗಿದೆ. ಪ್ರತಿ ತಂಡದಲ್ಲಿ ಇಬ್ಬರು ಇರಲಿದ್ದು, ಒಟ್ಟು 364 ಜನ ಲಸಿಕೆ ನೀಡಲಿದ್ದಾರೆ. ಇದರ ಮೇಲ್ವಿಚಾರಣೆಗಾಗಿ 36 ಮಂದಿಯನ್ನು ನಿಯೋಜಿಸಲಾಗಿದೆ’ ಎಂದು ಟಿಎಚ್‌ಒ ಡಾ.ಮಹಮದ್ ಗಫಾರ್ ತಿಳಿಸಿದರು.
‘ಅಭಿಯಾನದ ಯಶಸ್ಸಿಗಾಗಿ ತಾಲ್ಲೂಕಿನಲ್ಲಿ 164 ಬೂತ್‌ಗಳು, ಜನನಿಬಿಡ ಸ್ಥಳಗಳಲ್ಲಿ 16 ಮತ್ತು ಸಂಚಾರಿ 2 ಬೂತ್‌ಗಳು ಕಾರ್ಯನಿರ್ವಹಿಸಲಿವೆ. ಸಾರ್ವಜನಿಕರು ತಮ್ಮ 5 ವರ್ಷದೊಳಗಿನ ಮಗುವಿಗೆ ತಾಲ್ಲೂಕು ಆಸ್ಪತ್ರೆ, ಪಿಎಚ್‌ಸಿ, ಸಿಎಚ್‌ಸಿ, ಅಂಗನವಾಡಿ ಕೇಂದ್ರಗಳಲ್ಲಿ ಪೋಲಿಯೊ ಲಸಿಕೆ ಹಾಕಲಾಗುತ್ತಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.
ಸಭೆಯಲ್ಲಿ ಡಾ.ಬಾಲಾಜಿ ಪಾಟೀಲ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಘಟಕದ ವ್ಯವಸ್ಥಾಪಕ ಸುರೇಶ ತೇಗಲತಿಪ್ಪಿ, ಪುರಸಭೆ ಮುಖ್ಯಾಧಿಕಾರಿ ನಿಂಗಮ್ಮ ಬಿರಾದಾರ, ಬಿಇಒ ವಿ.ಲಕ್ಷ್ಮಯ್ಯ, ಸಮನ್ವಯಾಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ, ಆರೋಗ್ಯ ಶಿಕ್ಷಣಾಧಿಕಾರಿ ಮಹೇಶ ಮೋರೆ, ಮಲ್ಲಿಕಾರ್ಜುನ, ಡಾ.ರೇವಣಸಿದ್ದ ಕೋಡ್ಲಿ, ಡಾ.ಶಿವಕುಮಾರ ನಿಡಗುಂದಾ, ಡಾ.ರಾಜೇಶ್ವರಿ ರಟಕಲ ಹಾಗೂ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.