ADVERTISEMENT

ಕೂಲಿ ಪಾವತಿಗೆ ಲಂಚ: ಗ್ರಾ.ಪಂ. ಕಾರ್ಯದರ್ಶಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 11:22 IST
Last Updated 4 ಸೆಪ್ಟೆಂಬರ್ 2020, 11:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಮಾಡಿದ ಫಲಾನುಭವಿಗಳಿಗೆ ಕೂಲಿ ಹಣ ಪಾವತಿಸಲು ₹ 2500 ಲಂಚ ಪಡೆದ ಆರೋಪ ಸಾಬೀತಾಗಿದ್ದರಿಂದ ಗ್ರಾ.ಪಂ. ಕಾರ್ಯದರ್ಶಿ ಹಾಗೂ ಪ್ರಭಾರ ಪಿಡಿಒ ಜಗನ್ನಾಥ ಬಾಗೋಡಿ ಎಂಬುವವರಿಗೆ ನ್ಯಾಯಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.

ಸೇಡಂ ತಾಲ್ಲೂಕಿನ ಬಟಗೇರಾ (ಬಿ) ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಹಾಗೂ ರಿಬ್ಬನಪಲ್ಲಿ ಗ್ರಾಮ ಪಂಚಾಯಿತಿ ಪ್ರಭಾರ ಪಿಡಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಜಗನ್ನಾಥ 2013ರ ಮೇ ತಿಂಗಳಲ್ಲಿ ನಾಡೇಪಲ್ಲಿ ತಾಂಡಾದ ನರಸ್ಯಾನಾಯಕ ರಾಠೋಡ ಹಾಗೂ ಅವರ ಕುಟುಂಬದವರ ಉದ್ಯೋಗ ಖಾತ್ರಿ ಕೂಲಿ ಹಣದ ಬಿಲ್ ಪಾಸ್ ಮಾಡಿ ಖಾತೆಗೆ ಹಣ ಹಾಕಿದ್ದರು. ಆದರೆ, ಈ ಮಾಹಿತಿಯನ್ನು ಬಚ್ಚಿಟ್ಟು ಬಿಲ್ ಪಾಸ್ ಮಾಡಬೇಕಾದರೆ ₹ 3 ಸಾವಿರ ಲಂಚ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ನರಸ್ಯಾನಾಯಕ ನೀಡಿದ ದೂರಿನ ಮೇರೆಗೆ 2013ರ ಆಗಸ್ಟ್ 17ರಂದು ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಶಾಂತಿನಾಥ ಬಿ.ಪಿ. ಅದೇ ದಿನ ₹ 2500 ಲಂಚ ಪಡೆಯುವ ವೇಳೆ ದಾಳಿ ನಡೆಸಿ ಜಗನ್ನಾಥ ಅವರನ್ನು ಬಂಧಿಸಿದ್ದರು. ತದ ನಂತರ ಪೊಲೀಸ್ ಇನ್ಸ್‍ಪೆಕ್ಟರ್ ಎಚ್.ದೊಡ್ಡಣ್ಣ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿ ಜಿಲ್ಲಾ ಪ್ರಧಾನ ಹಾಗು ವಿಶೇಷ ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ಅವರು ಆರೋಪಿಗೆ ಕಲಂ. 7 ಪಿ.ಸಿ ಕಾಯ್ದೆಯಡಿ 3 ವರ್ಷ ಶಿಕ್ಷೆ ₹ 10 ಸಾವಿರ ದಂಡ, ಲಂಚ ಪ್ರತಿಬಂಧಕ ಕಾಯ್ದೆಯಡಿಯಲ್ಲಿ 3 ವರ್ಷ ಶಿಕ್ಷೆ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದರು.

ADVERTISEMENT

ಲೋಕಾಯುಕ್ತದ ಪರವಾಗಿ ಸರ್ಕಾರಿ ಅಭಿಯೋಜಕ ಎ.ಎಸ್.ಚಾಂದಕವಟೆ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.