ADVERTISEMENT

ಕಲಬುರ್ಗಿ: ಲಂಚ ಪಡೆದ ಅಧಿಕಾರಿಗೆ 7 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 1:33 IST
Last Updated 25 ಸೆಪ್ಟೆಂಬರ್ 2020, 1:33 IST

ಕಲಬುರ್ಗಿ: ಕೆಲಸ ಕೊಡಿಸುವುದಾಗಿ ನಂಬಿಸಿ ₹ 15 ಸಾವಿರ ಲಂಚ ಪಡೆದ ಇಲ್ಲಿನ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾಗಿದ್ದ ರಮೇಶಕುಮಾರ ಮುನಿನಾಗಪ್ಪ ಅವರಿಗೆ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರು ಏಳು ವರ್ಷ ಜೈಲು ಹಾಗೂ ₹ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಈ ಪ್ರಕರಣ 2014ರಲ್ಲಿ ನಡೆದಿತ್ತು. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಹೇಮನೂರು ಗ್ರಾಮದ ಚಂದ್ರಶೇಖರ ರಂಗಣ್ಣ ನಾಯಕ ಅವರು, ಸಹಾಯಧನದೊಂದಿಗೆ ಪ್ರವಾಸಿ ಟ್ಯಾಕ್ಸಿ ಖರೀದಿಸಲು ಕಲಬುರ್ಗಿ ಪ್ರವಾಸೋದ್ಯಮ ಇಲಾಖೆಯಲ್ಲಿ ಅರ್ಜಿ ಹಾಕಿದ್ದರು. ಆಗ ಇಲಾಖೆಯ ಉಪನಿರ್ದೇಶಕರಾಗಿದ್ದ ರಮೇಶಕುಮಾರ ಅವರು ₹ 20 ಸಾವಿರ ಲಂಚ ಕೇಳಿದ್ದರು. ಈ ಬಗ್ಗೆ ಚಂದ್ರಶೇಖರ ಅವರು ಲೋಕಾಯುಕ್ತ ಪೊಲೀಸ್‌ ಇನ್‌ಸ್ಪೆಕ್ಟರ್‌ ತಮ್ಮಾರಾಯ ಪಾಟೀಲ ಅವರ ಬಳಿ ದೂರು ಸಲ್ಲಿಸಿದ್ದರು.

ಮಾತಿನಂತೆ ಕಲಬುರ್ಗಿಯ ಹೋಟೆಲ್‌ ಒಂದರಲ್ಲಿ ₹ 15 ಸಾವಿರ ಲಂಚ ಪಡೆಯುತ್ತಿದ್ದ ವೇಳೆಯೇ ಅಧಿಕಾರಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದರು. ಪ್ರಕರಣದ ತನಿಖೆ ಪೂರ್ಣಗೊಳಿಸಿದ ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ ಎಚ್.ದೊಡ್ಡಣ್ಣ ಅವರು 5.10.2015ರಂದು ಆರೋಪಿತರ ವಿರುದ್ದ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ADVERTISEMENT

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಹಾಗೂ ವಿಶೇಷ ಸೆಷನ್ಸ್ ನ್ಯಾಯಾಧೀಶರಾದ ಆರ್.ಜೆ. ಸತೀಶ ಸಿಂಗ್ ಅವರು ಅಪರಾಧಿಗೆ ಶಿಕ್ಷೆ, ದಂಡ ವಿಧಿಸಿ ತೀರ್ಪು ನೀಡಿದರು.

ಲೋಕಾಯುಕ್ತದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಎ.ಎಸ್.ಚಾಂದಕವಟೆ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.