ADVERTISEMENT

14 ದಿನಗಳ ಬಳಿಕವೂ ಮುಂದುವರಿದ ಕ್ವಾರಂಟೈನ್!

ಸಾವಿರಾರು ಕಾರ್ಮಿಕರಿಗೆ ಕೊರೊನಾ ತಪಾಸಣೆ ಮಾಡುವ ಸವಾಲು; ಬೆಂಗಳೂರಿಗೂ ಮಾದರಿಗಳ ರವಾನೆ

ಮನೋಜ ಕುಮಾರ್ ಗುದ್ದಿ
Published 26 ಮೇ 2020, 19:51 IST
Last Updated 26 ಮೇ 2020, 19:51 IST
ಶರತ್ ಬಿ.
ಶರತ್ ಬಿ.   

ಕಲಬುರ್ಗಿ: ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದವರನ್ನು 14 ದಿನಗಳ ಬಳಿಕ ಮನೆಗೆ ಕಳಿಸಬೇಕು ಎಂಬ ನಿಯಮವಿದ್ದರೂ, ಅವರ ಕೊರೊನಾ ವರದಿ ನೆಗೆಟಿವ್ ಬಂದ ಬಳಿಕವಷ್ಟೇ ಕಳಿಸಬೇಕಾಗಿದೆ. ಆದರೆ, ಜಿಲ್ಲೆಯಲ್ಲಿ ತಪಾಸಣೆ ವಿಳಂಬವಾಗುತ್ತಿರುವುದರಿಂದ 14 ದಿನ ಮೀರಿದವರು ಇನ್ನೂ ಕ್ವಾರಂಟೈನ್‌ನಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ.

ಇದರಿಂದಾಗಿ ನಿತ್ಯವೂ ಕ್ವಾರಂಟೈನ್‌ ಕೇಂದ್ರದವರೊಂದಿಗೆ ವಾಗ್ವಾದ ನಡೆಸುವುದು ಸಾಮಾನ್ಯವಾಗಿದ್ದು, ಕೆಲವು ಬಾರಿ ಹಲ್ಲೆ ಮಾಡುವಂತಹ ಅತಿರೇಕಕ್ಕೂ ಹೋಗುತ್ತಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ಪ್ರಯೋಗಾಲಯದಲ್ಲಿ ತಪಾಸಣಾ ಸಾಮರ್ಥ್ಯವನ್ನು 800ರಿಂದ 2500ಕ್ಕೆ ಹೆಚ್ಚಿಸಿಕೊಂಡಿದೆ. ಜೊತೆಗೆ, 2500ಕ್ಕೂ ಅಧಿಕ ಮಾದರಿಗಳನ್ನು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಿಕೊಟ್ಟಿದೆ. ಇಷ್ಟಾಗಿಯೂ ಸಕಾಲಕ್ಕೆ ಫಲಿತಾಂಶ ಬರುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಮಹಾರಾಷ್ಟ್ರ ಹಾಗೂ ತೆಲಂಗಾಣದೊಂದಿಗೆ ಗಡಿ ಹಂಚಿಕೊಂಡಿರುವ ಕಲಬುರ್ಗಿ ಜಿಲ್ಲೆಯ ಜನರು ಕೂಲಿ ಅರಸಿಕೊಂಡು ಮುಂಬೈ, ಪುಣೆ ಹಾಗೂ ಹೈದರಾಬಾದ್‌ಗೆ ತೆರಳುವುದು ಸಾಮಾನ್ಯ. ಲಾಕ್‌ಡೌನ್‌ ಘೋಷಣೆಯಾದ ಬಳಿಕ ಕಂಗಾಲಾದ ಅವರು ಅಲ್ಲಿ ಕೆಲಸವೂ ಇಲ್ಲದೇ, ತಿನ್ನಲೂ ಆಹಾರವೂ ಇಲ್ಲದೇ ಸಿಕ್ಕ ವಾಹನಗಳನ್ನು ಹತ್ತಿಕೊಂಡು ಜಿಲ್ಲೆಗೆ ವಾಪಸಾಗಿದ್ದಾರೆ. ಜೊತೆಗೆ, ಎರಡು ಶ್ರಮಿಕ ರೈಲುಗಳು, 700ಕ್ಕೂ ಅಧಿಕ ಬಸ್‌ಗಳಲ್ಲಿ ಹಾಗೂ ಕಾಲ್ನಡಿಗೆಯ ಮೂಲಕ ಜಿಲ್ಲೆಗೆ ಬಂದವರನ್ನು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಕಡ್ಡಾಯವಾಗಿ 600ಕ್ಕೂ ಅಧಿಕ ಶಾಲೆ, ಕಾಲೇಜು, ವಸತಿ ನಿಲಯ, ವಸತಿ ಗೃಹಗಳಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಿದೆ.

ADVERTISEMENT

ಅವರಲ್ಲಿ ಸಾವಿರಾರು ಜನರ ಕ್ವಾರಂಟೈನ್ ಅವಧಿ ಮುಗಿದಿದೆ. ಆದರೆ, ಕೊರೊನಾ ವರದಿ ಬರದೇ ಅವರನ್ನು ಕಳಿಸುವಂತಿಲ್ಲ. ಇದರಿಂದ ಇಕ್ಕಟ್ಟಿಗೆ ಸಿಲುಕಿರುವ ಜಿಲ್ಲಾಡಳಿತ ಕಲಬುರ್ಗಿಯ ಜಿಮ್ಸ್‌ ಆಸ್ಪತ್ರೆಯಲ್ಲಿರುವ ಪ್ರಯೋಗಾಲಯದಲ್ಲಿ ಮೂರು ಪಾಳಿಯಲ್ಲಿ ಕೆಲಸ ಮಾಡುವಂತೆ ವೈದ್ಯರಿಗೆ ಸೂಚಿಸಿದೆ. ಆದರೂ, ನಿರೀಕ್ಷಿತ ಪ್ರಮಾಣದಲ್ಲಿ ತಪಾಸಣೆ ನಡೆಯುತ್ತಿಲ್ಲ. 14 ದಿನಗಳ ಅವಧಿ ಮುಗಿದರೂ ಮನೆಗೆ ಕಳಿಸಲು ಅನುಮತಿ ಸಿಗದೇ ಇರುವುದಕ್ಕೆ ಹಲವರು ಕ್ವಾರಂಟೈನ್ ಕೇಂದ್ರದಿಂದಲೇ ಓಡಿ ಹೋಗಿದ್ದಾರೆ ಎಂದು ಕೇಂದ್ರದ ಮೇಲ್ವಿಚಾರಣೆ ನಡೆಸುತ್ತಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯ ಚಿತ್ತಾಪುರ, ಕಾಳಗಿ ಹಾಗೂ ಕಮಲಾಪುರ ತಾಲ್ಲೂಕಿನಲ್ಲಿ ಅತಿ ಹೆಚ್ಚು ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, 44 ಡಿಗ್ರಿ ಬಿಸಿಲಿನ ಝಳದಲ್ಲಿ ಒಂದೇ ಸ್ಥಳದಲ್ಲಿ ಇರಬೇಕಾಗಿದ್ದುದರಿಂದ ಕಾರ್ಮಿಕರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕಾಳಗಿ ತಾಲ್ಲೂಕಿನ ಕೋರವಾರದ ಕ್ವಾರಂಟೈನ್ ಕೇಂದ್ರದಲ್ಲಿ ಚಿಕನ್ ಮತ್ತು ಮೀನು ಬೇಡಿಕೆ ಇಟ್ಟಿದ್ದ ವ್ಯಕ್ತಿಯೊಬ್ಬರು ಇವುಗಳನ್ನು ಪೂರೈಸದೇ ಇರುವುದಕ್ಕೆ ಆಶಾ ಕಾರ್ಯಕರ್ತೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಇನ್ನು ಕೆಲವರು ಮದ್ಯವನ್ನು ತಂದು ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ!

ಬೇರೆ ಜಿಲ್ಲೆಗಳಿಗೂ ಮಾದರಿ ರವಾನೆ: ಡಿಸಿ ಶರತ್

ಕ್ವಾರಂಟೈನ್‌ನಲ್ಲಿದ್ದವರನ್ನು 14 ದಿನಗಳ ಅವಧಿ ಮುಗಿದ ಬಳಿಕ ಕೊರೊನಾ ತಪಾಸಣೆ ಮಾಡಿ ಮನೆಗೆ ಕಳಿಸಬೇಕಿದೆ. ಕಾರ್ಮಿಕರ ಸಂಖ್ಯೆ ಜಾಸ್ತಿ ಇರುವುದರಿಂದ ಕಲಬುರ್ಗಿ ಪ್ರಯೋಗಾಲಯವಲ್ಲದೇ ಮಾದರಿಗಳನ್ನು ಬೆಂಗಳೂರಿಗೆ ಕಳಿಸಿದ್ದೇವೆ. ಅಲ್ಲಿಂದ 2500 ಮಾದರಿಗಳ ವರದಿ ಬರಬೇಕಿದೆ. ಹುಬ್ಬಳ್ಳಿ ಹಾಗೂ ಬಳ್ಳಾರಿಗೂ ಮಾದರಿಗಳನ್ನು ಕಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಕಲಬುರ್ಗಿ ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಅವರು, ‘ಪ್ರಸ್ತುತ ಕಲಬುರ್ಗಿ ಪ್ರಯೋಗಾಲಯದಲ್ಲಿ ಏಕಕಾಲಕ್ಕೆ ಒಂದು ಮಾದರಿ ತಪಾಸಣೆ ಬದಲು 5 ತಪಾಸಣೆಗಳನ್ನು (ಪೂಲಿಂಗ್) ಮಾಡುತ್ತಿದ್ದೇವೆ. ಅಷ್ಟೂ ವರದಿ ನೆಗೆಟಿವ್ ಬಂದರೆ ಅವುಗಳನ್ನು ನೆಗೆಟಿವ್ ಎಂದು ಪರಿಗಣಿಸುತ್ತೇವೆ. ಅದರಲ್ಲಿ ಒಂದು ಪಾಸಿಟಿವ್ ಬಂದರೂ ಮತ್ತೆ ಐದು ಜನರ ಮಾದರಿಯನ್ನು ಮರು ಪರೀಕ್ಷೆಗೆ ಒಳಪಡಿಸುತ್ತೇವೆ. ಕ್ವಾರಂಟೈನ್ ಅವಧಿಯನ್ನು 14 ದಿನಗಳಿಂದ ಒಂದು ವಾರಕ್ಕೆ ಇಳಿಸುವ ಬಗ್ಗೆ ಚರ್ಚೆ ನಡೆದಿದೆ. ಈ ಬಗ್ಗೆ ಸರ್ಕಾರದ ನಿರ್ದೇಶನವನ್ನು ಎದುರು ನೋಡುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.