ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಹುಚ್ಚು ನಾಯಿ ಕಡಿತಕ್ಕೆ ಒಳಗಾಗಿದ್ದ ಯುವಕರು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು
ಚಿಂಚೋಳಿ: ತಾಲ್ಲೂಕಿನ ಸುಲೇಪೇಟ ಗ್ರಾಮದ ಬಸವೇಶ್ವರ ವೃತ್ತದಲ್ಲಿ ಮಂಗಳವಾರ ರಾತ್ರಿ 8.30ರ ಸುಮಾರಿಗೆ ಹುಚ್ಚುನಾಯಿಗಳು ದಾಳಿ ಮಾಡಿ 10 ಜನರಿಗೆ ಗಾಯಗೊಳಿಸಿವೆ.
ಎರಡು ಹುಚ್ಚುನಾಯಿಗಳು ಜನರ ಮೇಲೆರಗಿವೆ ಎನ್ನಲಾಗಿದ್ದು, ಜನನಿಬಿಡ ಪ್ರದೇಶವಾದ ಬಸವೇಶ್ವರ ವೃತ್ತ, ಬಜಾರ ಮತ್ತು ಗ್ರಾಮದಲ್ಲಿ ಆತಂಕಕ್ಕೆ ಕಾರಣವಾಗಿದೆ. ಗಾಯಾಳುಗಳು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. 10 ಜನರ ಪೈಕಿ ರಾಜು ಶಿವಪ್ಪ ಭಂಡಾರಿ ಶಾದಿಪೂರ (35), ಫಯಾಜ್ ಸುಲೇಪೇಟ (21), ಯಾಸೀನ್ ಸುಲೇಪೇಟ (32) ಅವರನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಲೇಪೇಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದೌವಲಪ್ಪ ಚಿಮ್ಮಾಈದಲಾಯಿ, ವಾಸು ಬಸವರಾಜ ರಟಕಲ್, ರಾಜಶೇಖರ ಘಂಟಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನುಳಿದ ನಾಲ್ಕು ಜನ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ಡಾ. ಸೋಮಸಿಂಗ್ ಚಿನ್ನರಾಠೋಡ ತಿಳಿಸಿದರು.
ನಾಯಿ ಉಪಟಳ ಆತಂಕ:
ಸುಲೇಪೇಟ ಗ್ರಾಮವು ವ್ಯಾವಹಾರಿಕ ಪಟ್ಟಣವಾಗಿದ್ದು, ಹುಚ್ಚುನಾಯಿ ದಾಳಿ ಪ್ರಕರಣ ಜನರಲ್ಲಿ ಭೀತಿಗೆ ಕಾರಣವಾಗಿದೆ. ಗ್ರಾಮದಲ್ಲಿ ನಾಯಿಗಳ ಹಾವಳಿ ವ್ಯಾಪಕವಾಗಿದ್ದು, ಅವುಗಳನ್ನುಹಿಡಿದು ಸೂಕ್ತ ಕ್ರಮಕೈಗೊಳ್ಳಲು ತಾ.ಪಂ. ಇಒ ಸಂತೋಷ ಚವ್ಹಾಣ ಹಾಗೂ ಗ್ರಾ.ಪಂ. ಪಿಡಿಒ ಅವರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಇನ್ನಾದರೂ ತಾಲ್ಲೂಕು ಆಡಳಿತ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಯುವ ಮುಖಂಡ ಚೇತನ ಅಣವಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.