ADVERTISEMENT

ಕಲಬುರಗಿ | ಜ್ಞಾನಪ್ರದಾನಕ್ಕಾಗಿ ಅವತರಿಸಿದ ರಾಯರು– ಉಡುಪಿಕೃಷ್ಣ ಜೋಶಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 7:37 IST
Last Updated 25 ಫೆಬ್ರುವರಿ 2026, 7:37 IST
ಕಲಬುರಗಿಯ ಕರುಣೇಶ್ವರ ನಗರದ ಜೈವೀರ್‌ ಹನುಮಾನ್‌ ಮಂದಿರದಲ್ಲಿ ಮಂಗಳವಾರ ಉಪನ್ಯಾಸ ನೀಡಿದ ಡಾ.ಉಡುಪಿಕೃಷ್ಣ ಜೋಶಿ ಅವರನ್ನು ಸನ್ಮಾನಿಸಲಾಯಿತು
ಕಲಬುರಗಿಯ ಕರುಣೇಶ್ವರ ನಗರದ ಜೈವೀರ್‌ ಹನುಮಾನ್‌ ಮಂದಿರದಲ್ಲಿ ಮಂಗಳವಾರ ಉಪನ್ಯಾಸ ನೀಡಿದ ಡಾ.ಉಡುಪಿಕೃಷ್ಣ ಜೋಶಿ ಅವರನ್ನು ಸನ್ಮಾನಿಸಲಾಯಿತು   

ಕಲಬುರಗಿ: ‘ರಾಘವೇಂದ್ರ ಸ್ವಾಮಿಗಳು ಜ್ಞಾನ, ಶ್ರುತಿ, ಸಂಗೀತ ಹಾಗೂ ವೀಣಾವಾದನ ಸೇರಿದಂತೆ ಅನೇಕ ವಿದ್ಯೆಗಳಲ್ಲಿ ಪಾರಂಗತರಾಗಿದ್ದರು. ರಾಯರು ಭೂಮಿಗೆ ಅವತರಿಸಿದ್ದು ಜ್ಞಾನಪ್ರದಾನಕ್ಕಾಗಿ ಎಂಬುದು ಅವರ ಜೀವನ ಸಂದೇಶವಾಗಿದೆ’ ಎಂದು ಡಾ. ಉಡುಪಿಕೃಷ್ಣ ಜೋಶಿ ಹೇಳಿದರು.

ಇಲ್ಲಿನ ಕರುಣೇಶ್ವರ ನಗರದ ಜೈವೀರ್‌ ಹನುಮಾನ್‌ ಮಂದಿರದಲ್ಲಿ ಮಂಗಳವಾರ ನಡೆದ ರಾಘವೇಂದ್ರ ಸ್ವಾಮಿಗಳ ವರ್ಧಂತಿ ಮಹೋತ್ಸವದ ಅಂಗವಾಗಿ ಅಷ್ಟೋತ್ತರ ಪಾರಾಯಣ ನಂತರ ಅವರು ಉಪನ್ಯಾಸ ನೀಡಿದರು.

‘ಮಠ ಎಂದರೆ ಜ್ಞಾನಾರ್ಜನೆಗೇ ಮೀಸಲು ಎಂಬುದನ್ನು ತಮ್ಮ ಜೀವನದ ಮೂಲಕವೇ ಸಾರಿದ ಮಹಾನ್ ಚೇತನ ರಾಯರು. ರಾಯರ ಕುರಿತಾಗಿ ಪ್ರತಿದಿನ ಕನಿಷ್ಠ ಒಂದು ಶ್ಲೋಕ ಪಠಣ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು’ ಎಂದರು.

ADVERTISEMENT

‘ರಾಯರು ದಶೋಪನಿಷತ್ತುಗಳಿಗೆ ಖಂಡಾರ್ಥ, ವಿವಿಧ ಗ್ರಂಥಗಳಿಗೆ ಭಾಷ್ಯ, ‘ಪರಿಮಳ’ ಗ್ರಂಥ, ಗೀತಾಭಾಷ್ಯ ಸೇರಿದಂತೆ ಅನೇಕ ಮಹತ್ವದ ಕೃತಿಗಳನ್ನು ರಚಿಸಿರುವುದು ಅವರ ಮಹಾನ್ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಹೇಳಿದರು.

ಬೆಳಿಗ್ಗೆ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ, 108 ಬಾರಿ ಓಂ ಶ್ರೀ ರಾಘವೇಂದ್ರಾಯ ನಮಃ ಜಪ, ಭಜನಾ ಮಂಡಳಿಯಿಂದ ರಾಯರ ಕುರಿತು ಭಜನೆ, ಸಂಗೀತ ಕಾರ್ಯಕ್ರಮಗಳು ಜರುಗಿದವು.

ದೇವಸ್ಥಾನ ಸಮಿತಿ ಅಧ್ಯಕ್ಷ ಅವಿನಾಶ ಕುಲಕರ್ಣಿ, ಶ್ರೀನಿವಾಸ ಜಹಾಗೀರದಾರ, ಆರ್‌.ಕೆ. ಕುಲಕರ್ಣಿ, ಕಿಶನರಾವ್ ಕುಲಕರ್ಣಿ, ಶಾಮಾಚಾರ್ಯ ವನದುರ್ಗ, ವಿನೂತ ಜೋಶಿ, ಲಕ್ಷ್ಮಿಕಾಂತ್ ಕುಲಕರ್ಣಿ, ಪದ್ಮನಾಭಾಚಾರ್ಯ ಜೋಶಿ, ವಿನಾಯಕ ಕುಲಕರ್ಣಿ, ಶಶಿಧರ್ ಜೋಶಿ, ಸವಿತಾ ಕುಲಕರ್ಣಿ, ವೀಣಾ ಸಾತಖೇಡ, ರೇಖಾ ಕುಲಕರ್ಣಿ, ವೀಣಾ ಮಾಲಗತ್ತಿ, ಅನುರಾಧಾ ಜೋಶಿ, ಅರ್ಚಕ ವೆಂಕಟೇಶಾಚಾರ್ಯ ನೆಲೋಗಿ, ವ್ಯವಸ್ಥಾಪಕ ಚಂದ್ರಕಾಂತ ಕಡಗಂಚಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.