ADVERTISEMENT

ಕಲಬುರ್ಗಿ ಪಾದಚಾರಿ ಸೇತುವೆ ಸಿದ್ಧ

ರೈಲು ನಿಲ್ದಾಣದ ಇನ್ನೊಂದು ಬದಿಯಲ್ಲಿ ನಿರ್ಮಾಣ

ಸಂತೋಷ ಈ.ಚಿನಗುಡಿ
Published 15 ಜೂನ್ 2019, 19:45 IST
Last Updated 15 ಜೂನ್ 2019, 19:45 IST
ಕಲಬುರ್ಗಿ ರೈಲು ನಿಲ್ದಾಣದಲ್ಲಿ ನಿರ್ಮಿಸಿದ ಹೊಸ ಪಾದಚಾರಿ ಸೇತುವೆ
ಕಲಬುರ್ಗಿ ರೈಲು ನಿಲ್ದಾಣದಲ್ಲಿ ನಿರ್ಮಿಸಿದ ಹೊಸ ಪಾದಚಾರಿ ಸೇತುವೆ   

ಕಲಬುರ್ಗಿ: ಸುಮಾರು ಏಳು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಕಲಬುರ್ಗಿ ರೈಲು ನಿಲ್ದಾಣದ ಇನ್ನೊಂದುಪಾದಚಾರಿ ಸೇತುವೆ ಕಾಮಗಾರಿ ಈಗ ಮುಗಿದಿದೆ. ಬುಧವಾರದಿಂದಲೇ ಇದನ್ನು ಸಂಚಾರಕ್ಕೆ ಮುಕ್ತಗೊಳಿಸಿದ್ದು, ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಪ್ರಯಾಣಿಕರ ಬಹು ದಿನಗಳ ಹೋರಾಟದ ಫಲವಾಗಿ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದರಾಗಿದ್ದಾಗ ಈ ಪಾದಚಾರಿ ಸೇತುವೆ ಕಾಮಗಾರಿ ಮಂಜೂರು ಮಾಡಿಸಿದ್ದರು. 2012 ಮಾರ್ಚ್‌ನಲ್ಲಿ ಕೆಲಸಕ್ಕೆ ಭರ್ಜರಿ ಆರಂಭವೂ ಸಿಕ್ಕಿತು. ಆದರೆ, ವರ್ಷ ಕಳೆದರೂ ಕುಂಟುತ್ತಲೇ ಸಾಗುತ್ತಿತ್ತು. ಇದನ್ನು ಕಂಡು ಖರ್ಗೆ ಅವರೇ ಆಸಕ್ತಿ ವಹಿಸಿ ಮತ್ತೆ ಚುರುಕು ಮುಟ್ಟಿಸಿದ್ದರು.

ಮತ್ತೆ ಆರು ತಿಂಗಳು ಕೆಲಸ ನಡೆಯಿತು. ಆದರೆ, ಕಾಮಗಾರಿಯ ನೀಲಿನಕ್ಷೆಗೂ ಮಾಡಿದ ಕೆಲಸಕ್ಕೂ ವ್ಯತ್ಯಾಸ ಉಂಟಾಯಿತು. ಇದು ನೀರಲ್ಲಿ ಹೋಮ ತೊಳೆದಂತಾಗಿ ಕೆಲಸ ಮತ್ತೆ ನಿಂತುಬಿಟ್ಟಿತು.

ADVERTISEMENT

‘ಹೊಸ ನೀಲಿನಕ್ಷೆ ತಯಾರಿಸಿ ಮತ್ತೆ ಕಾಮಗಾರಿ ಆರಂಭಿಸಲಾಯಿತು. ಎಷ್ಟೊತ್ತಿಗೆ ಎರಡು ವರ್ಷಗಳು ಕಳೆದುಹೋಗಿದ್ದವು. ಇನ್ನಾದರೂ ಕೆಲಸ ಭರದಿಂದ ನಡೆಯುತ್ತದೆ ಎಂದು ಕನಸು ಕಂಡಿದ್ದವರಿಗೆ ಮತ್ತೆ ನಿರಾಸೆ ಮೂಡಿತು. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಬಂದ ಮೇಲೆ ಈ ಕಾಮಗಾರಿಗೆ
ಒಂದೇ ಒಂದು ರೂಪಾಯಿ ಅನುದಾನ ಕೂಡ ಬರಲಿಲ್ಲ. ಹೀಗಾಗಿ, ಕೆಲಸ ಮತ್ತೆ ಐದು ವರ್ಷ ಪೆಂಡಿಂಗ್‌ ಬಿದ್ದಿತು. ಎರಡು ತಿಂಗಳಲ್ಲಿ ಆಗಬೇಕಾದ ಕೆಲಸ ಬರೋಬ್ಬರಿ 7 ವರ್ಷ ಹಿಡಿಯಿತು’ ಎನ್ನುತ್ತಾರೆಇದಕ್ಕಾಗಿ ನಿರಂತರ ಹೋರಾಟ ನಡೆಸಿದ ಸುನೀಲ ಕುಲಕರ್ಣಿ.

ಅಧಿಕಾರಿಗಳು ಏನು ಹೇಳುತ್ತಾರೆ?: ಆದರೆ, ಇದರ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳು ಹೇಳುವುದೇ ಬೇರೆ.

‘2012ರಲ್ಲಿ ಒಬ್ಬ ಗುತ್ತಿಗೆದಾರರಿಗೆ ಕೆಲಸ ಒಪ್ಪಿಸಲಾಗಿತ್ತು. ವಿಳಂಬ ಮಾಡಿದ್ದರಿಂದ ಅವರಿಂದ ಗುತ್ತಿಗೆ ಹಿಂಪಡೆಯಲಾಯಿತು. ಇದೇ ವಿಷಯವನ್ನು ಗುತ್ತಿಗೆದಾರ ಕೋರ್ಟ್‌ನಲ್ಲಿ ಪ್ರಶ್ನಿಸಿದರು. ನ್ಯಾಯಾಲಯದ ಕೆಲಸಗಳು ಮುಗಿದ ಮೇಲೆ ಹೊಸ ಟೆಂಡರ್‌ ಕರೆದು, ಬೇರೆ ಗುತ್ತಿಗೆದಾರರಿಗೆ ನೀಡಲಾಯಿತು. ಇದರಿಂದ ಸಾಕಷ್ಟು ಸಮಯ ಕೋರ್ಟ್‌ನಲ್ಲಿ ಕಳೆಯಿತು’ ಎಂದು ದಕ್ಷಿಣ ಮಧ್ಯ ರೈಲ್ವೆ ಘಟಕದ ಸಹಾಯಕ ಪ್ರಧಾನ ವ್ಯವಸ್ಥಾಪಕ ವಿಜಯ ಕುಲಕರ್ಣಿ.

ಸ್ವರೂಪ ಹೇಗಿದೆ?: ರೈಲು ನಿಲ್ದಾಣ ಪ್ರವೇಶ ಮಾಡಿದ ತಕ್ಷಣ ಎಡಕ್ಕೆ ತಿರುಗಿದರೆ ಈ ಸೇತುವೆ ಸಿಗುತ್ತದೆ. 73 ಮೀಟರ್‌ ಉದ್ದ, 6 ಮೀಟರ್‌ ಅಗಲವಿದೆ. ನೆಲಮಟ್ಟದಿಂದ 42 ಮೆಟ್ಟಿಲುಗಳಿವೆ. ಏಕಕಾಲಕ್ಕೆ ಮೆಟ್ಟಿಲು ಏರಲಾಗದವರಿಗಾಗಿ ಮಧ್ಯದಲ್ಲಿ ಒಂದು ‘ರಿಲಾಕ್ಸ್‌ ಸ್ಪಾಟ್‌’ ಮಾಡಲಾಗಿದೆ. ಅಲ್ಲಲ್ಲಿ ಎಲೆಕ್ಟ್ರಾನಿಕ್‌ ಬೋರ್ಡ್‌ ಅಳವಡಿಕೆ, ಜಾಹೀರಾತು ಫಲಕಕ್ಕೂ ಜಾಗ ಮಾಡಲಾಗಿದೆ.

ನಿಲ್ದಾಣದಲ್ಲಿ ನಾಲ್ಕು ಫ್ಲ್ಯಾಟ್‌ಫಾರ್ಮ್‌ ಇವೆ. ನಾಲ್ಕಕ್ಕೂ ಇದು ಸಂಪರ್ಕ ಕಲ್ಪಿಸಿದೆ.

ಮೊದಲನೇ ಫ್ಲ್ಯಾಟ್‌ಪಾರ್ಮ್‌ ಪಕ್ಕದಲ್ಲೇ ಮತ್ತೊಂದು ಮೆಟ್ಟಿಲು ಮಾಡಲಾಗಿದ್ದು, ಇದು ನೇರವಾಗಿ ನಿಲ್ದಾಣದ ಹೊರಗೆ ಹೋಗುವ ದಾರಿ.

**

ಕೋರ್ಟ್‌ನ ಕೇಸ್‌ಗಳಿಂದಾಗಿ ಪಾದಚಾರಿ ಸೇತುವೆ ಕಾಮಗಾರಿ ನಿಧಾನವಾಗಿತ್ತು. ₹ 20 ಕೋಟಿ ವೆಚ್ಚದಲ್ಲಿ ಸೇತುವೆ ಹಾಗೂ ಲಿಫ್ಟ್‌ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

–ರೈಲ್ವೆ ಅಧಿಕಾರಿ

**

ಹಳ ದಿನಗಳ ಬೇಡಿಕೆ ಈಡೇರಿದೆ. ಹೊಸ ಸೇತುವೆಗೆ ಇನ್ನೊಂದು ಕಡೆ ಮೆಟ್ಟಿಲು ಅಳವಡಿಸಿ ತಾರಪೈಲ್‌ ಪಡಾವಣೆಗೂ ನೇರವಾಗಿ ಹೊರಹೋಗಿವಂತೆ ವ್ಯವಸ್ಥೆ ಮಾಡಬೇಕು.

ಸುನೀಲ ಕುಲಕರ್ಣಿ, ಅಧ್ಯಕ್ಷ, ಜಿಲ್ಲಾ ಗ್ರಾಹಕರ ವೇದಿಕೆ

**

3 ತಿಂಗಳಲ್ಲಿ ಲಿಫ್ಟ್‌ ಅಳವಡಿಕೆ

ಹೊಸ ಸೇತುವೆಗೆ ಎರಡು ಕಡೆ ಲಿಫ್ಟ್‌ ಅಳವಡಿಸುವ ಕಾಮಗಾರಿ ಇನ್ನೂ ಬಾಕಿ ಇದೆ. ಸದ್ಯಕ್ಕೆ ಸೇತುವೆ ಅಂತಿಮ ಸ್ಪರ್ಷ ನೀಡಲಾಗುತ್ತಿದ್ದು, ಶೀಘ್ರವೇ ಲಿಫ್ಟ್‌ ಅಳವಡಿಕೆ ನಡೆಯಲಿದೆ. ಅಂದಾಜು ಮೂರು ತಿಂಗಳಲ್ಲಿ ಎಲ್ಲವೂ ಪೂರ್ಣಗೊಳ್ಳಲಿದೆ ಎಂಬುದು ರೈಲ್ವೆ ಇಲಾಖೆ ಅಧಿಕಾರಿಗಳ ಮಾಹಿತಿ.

ಅಲ್ಲದೇ, ಈ ಸೇತುವೆ ಎಡಭಾಗಕ್ಕೆ ಇರುವ ತಾರಪೈಲ್‌ ಬಡಾವಣೆಗೂ ಸಂಪರ್ಕ ಕಲ್ಪಿಸಲು ಮೆಟ್ಟಿಲು ಅಳವಡಿಸಬೇಕು ಎಂಬ ಬೇಡಿಕೆಯನ್ನೂ ಜನ ಮುಂದಿಟ್ಟಿದ್ದಾರೆ. ಸದ್ಯ ಬಲಬದಿಯಿಂದ ನೇರವಾಗಿ ನಿಲ್ದಾಣದ ಹೊರಗೆ ಹೋಗಲು ವ್ಯವಸ್ಥೆ ಮಾಡಲಾಗಿದೆ.

ಮೂರು ವರ್ಷಗಳ ಹಿಂದೆ ಸೇತುವೆ ಹತ್ತಿರದಲ್ಲೇ ‘ಅಂಡರ್‌ಪಾಸ್‌’ ನಿರ್ಮಿಸಿದ್ದು, ರೈಲ್ವೆ ಕ್ವಾಟರ್ಸ್‌ ಹಾಗೂ ತಾರಪೈಲ್‌ ಬಡವಾಣೆ ಮಧ್ಯ ಸಂಪರ್ಕ ಕಲ್ಪಿಸಲಾಗಿದೆ. ಅಲ್ಲದೇ, ಹಳೆ ಸೇತುವೆ ಕೇವಲ 4 ಅಡಿ ಅಗಲವಿದ್ದು, ಜನದಟ್ಟಣೆ ಹೆಚ್ಚಾದಾಗ ತೊಂದರೆಯಾಗುತ್ತದೆ. ಆದ್ದರಿಂದ ಇದನ್ನೂ ತುಸು ವಿಸ್ತರಿಸಬೇಕು ಎಂಬುದು ಪ್ರಯಾಣಿಕರ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.