ADVERTISEMENT

‘ದಕ್ಷಿಣ ಮತಕ್ಷೇತ್ರದ ಜನರ ಸಂಕಷ್ಟಕ್ಕೆ ಸ್ಪಂದಿಸಿ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 10:53 IST
Last Updated 19 ಅಕ್ಟೋಬರ್ 2020, 10:53 IST

ಕಲಬುರ್ಗಿ: ‘ಕಲಬುರ್ಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿವೃಷ್ಟಿಯಿಂದಾಗಿ ಜನಜೀವನ ನರಕವಾಗಿದೆ. ಈ ಕ್ಷೇತ್ರವನ್ನು ಪ್ರತಿನಿಧಿಸುವ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರು ಇನ್ನೂ ಕಣ್ಣು ಮುಚ್ಚಿಕೊಂಡು ಕುಳಿತಿದ್ದು ಸರಿಯಲ್ಲ’ ಎಂದು ಕಾಂಗ್ರೆಸ್‌ ಮುಖಂಡ ಅಲ್ಲಮಪ್ರಭು ಪಾಟೀಲ ದೂರಿದರು.

‘ನಗರದ ಬಹುಪಾಲು ಕಡೆ ಮಳೆಯಿಂದ ಜನಜೀವನ ತತ್ತರಿಸಿದೆ. ರಸ್ತೆ ಮೇಲಿನ ನೀರು, ಚರಂಡಿ ನೀರು ಮನೆಗಳಿಗೆ ನುಗ್ಗಿದೆ. ಅದ್ರರಲ್ಲೂ, ದಕ್ಷಿಣ ಮತಕ್ಷೇತ್ರದ ದತ್ತನಗರದಲ್ಲಿ ಚರಂಡಿ ಸಂಪೂರ್ಣ ಹಾಳಾಗಿದೆ. ಮನೆಗಳಿಗೆ ಪೂರೈಸುವ ಕುಡಿಯುವ ನೀರಿನಲ್ಲಿ ಚರಂಡಿ ನೀರೇ ಬರುತ್ತಿದೆ. ಈಗಾಗಲೇ ಕೊರೊನಾ ಸಂಕಷ್ಟ ಎದುರಿಸುತ್ತಿರುವ ಜನಕ್ಕೆ ಈಗ ಮತ್ತಷ್ಟು ರೋಗಗಳ ಭೀತಿ ಎದುರಾಗಿದೆ’ ಎಂದು ಅವರು, ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಮಳೆಯಿಂದಾಗಿ ದತ್ತನಗರದಲ್ಲಿ ನಾಲ್ಕು ಹಾಗೂ ಪೂಜಾ ಕಾಲೊನಿಯಲ್ಲಿ 20 ಮನೆಗಳಿಗೆ ಹಾನಿಯಾಗಿದೆ. ಭೀಮಳ್ಳಿ ಹಾಗೂ ಸಯ್ಯದ್‌ ಚಿಂಚೋಳಿ ಗ್ರಾಮದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಶಾಸಕರು ತಕ್ಷಣಕ್ಕೆ ಪರಿಹಾರ ಕಾರ್ಯ ಕೈಗೊಳ್ಳಬೇಕು. ಅಗತ್ಯವಿರುವಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಹಾನಿಗೊಳಗಾದ ಜನರಿಗೆ ಪರಿಹಾರ ಒದಗಿಸಬೇಕು’ ಎಂದೂ ಅವರು ಆಗ್ರಹಿಸಿದರು.

ADVERTISEMENT

ಕಾಟಾಚಾರದ ಭೇಟಿ ನಿಲ್ಲಿಸಿ: ‘ಪ್ರವಾಹ ಹಾಗೂ ಅತಿವೃಷ್ಟಿಯ ಕಾರಣ ಜಿಲ್ಲೆಯ ಎಲ್ಲ ತಾಲ್ಲೂಕುಗಳೂ ತತ್ತರಿಸಿವೆ. ಆದರೂ ಮಂತ್ರಿಗಳು ಕಣ್ಣೆತ್ತಿ ನೋಡುತ್ತಿಲ್ಲ. ಈಚೆಗೆ ಬಂದ ಕಂದಾಯ ಸಚಿವ ಆರ್‌.ಅಶೋಕ ಅವರೂ ಕಾಟಾಚಾರಕ್ಕೆ ಮೂರು ಕಡೆ ಭೇಟಿ ನೀಡಿ ಹೋಗಿದ್ದಾರೆ. ಮಳೆಯಿಂದ ಜಲಾವೃತವಾದ ಊರು, ಕೊಚ್ಚಿಕೊಂಡು ಹೋದ ಮನೆ, ಹಾಳಾದ ಬೆಳೆಯನ್ನು ಯಾರು ನೋಡುವುದು?’ ಎಂದೂ ಅವರು ಪ್ರಶ್ನಿಸಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನೀಲಕಂಠರಾವ್‌ ಮೂಲಗೆ, ಜಿಲ್ಲಾ ಪಂಚಾಯಿತಿ ಸದಸ್ಯು ಶಿವು ಹೊನಗುಂಟ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.