ADVERTISEMENT

ಕಾಲು ಜಾರಿ ಬಿದ್ದು 8 ತಾಸು ಹೊಳೆಯಲ್ಲೇ ಕಾಲ ಕಳೆದ ಮಹಿಳೆ!

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 16:51 IST
Last Updated 10 ಸೆಪ್ಟೆಂಬರ್ 2019, 16:51 IST
ನದಿ ನೀರಿನಲ್ಲಿ ಸಿಲುಕಿದ್ದ ಮಹಿಳೆ
ನದಿ ನೀರಿನಲ್ಲಿ ಸಿಲುಕಿದ್ದ ಮಹಿಳೆ   

ಕಲಬುರ್ಗಿ: ಪೂಜೆಗೆ ನೀರು ತರಲೆಂದು ಭೀಮಾ ನದಿ ತೀರಕ್ಕೆ ಬಂದ ಮಹಿಳೆ ಕಾಲು ಜಾರಿ ನದಿಯಲ್ಲಿ ಬಿದ್ದು ಸುಮಾರು ಎರಡು ಕಿ.ಮೀ. ನದಿಗುಂಟ ಹರಿದಿದ್ದಾರೆ. ಎಂಟು ತಾಸು ನದಿಯಲ್ಲೇ ಮರದ ಬೊಡ್ಡೆ ಹಿಡಿದು ಕಾದಿದ್ದ ಮಹಿಳೆಯನ್ನು ಮೀನುಗಾರರು ರಕ್ಷಿಸಿದ್ದಾರೆ.

ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದ ವಿಜಯಲಕ್ಷ್ಮಿ ಶ್ರೀಶೈಲ ಮಂಗಾ (22) ಎಂಬುವವರೇ ಪ್ರಾಣಾಪಾಯದಿಂದ ಪಾರಾಗಿ ಬಂದವರು.

‘ಬೆಳಿಗ್ಗೆ ಎಂದಿನಂತೆ ನದಿ ತೀರದಲ್ಲಿ ಬಿಂದಿಗೆಯಲ್ಲಿ ನೀರು ಹಿಡಿಯಲು ಬಂದಿದ್ದರು. ಆಗ ಆಯತಪ್ಪಿ ನದಿಯಲ್ಲಿ ಬಿದ್ದಿದ್ದಾರೆ. ಭೀಮಾನದಿಗೆ ಸೊನ್ನ ಬ್ಯಾರೇಜಿನಿಂದ 44 ಸಾವಿರ ಕ್ಯುಸೆಕ್‌ ನೀರು ಹೊರ ಬಿಡುತ್ತಿರುವುದರಿಂದ ನೀರು ರಭಸದಿಂದ ಹರಿಯುತಿತ್ತು. ನದಿಯ ಮಧ್ಯೆ ಭಾಗಕ್ಕೆ ಬಂದಾಗ ತೇಲುತ್ತಾ 2 ಕಿ.ಮೀ. ಸಾಗಿ ಮೈನಾಳ ಗ್ರಾಮದ ಬಳಿ ಬಂದಿದ್ದಾರೆ. ನದಿ ಮಧ್ಯೆದಲ್ಲೇ ಇದ್ದ ಬೊಡ್ಡೆ ಹಿಡಿದು ಬಹಳ ಹೊತ್ತು ಕೂಗಿಕೊಂಡಿದ್ದಾರೆ. ಅವರ ಚೀರಾಟ ಕೇಳಿದ ಬೆಸ್ತರು ಈಜಿಕೊಂಡು ಮಹಿಳೆಯನ್ನು ರಕ್ಷಿಸಿದರು. ವಿಜಯಲಕ್ಷ್ಮಿ ಅವರಿಗೆ ನೆಲೋಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿದೆ. ಗಾಬರಿಯಾಗಿದ್ದ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಫರಹತಾಬಾದ್‌ ಠಾಣೆ ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.