ADVERTISEMENT

ರಾಜೇಂದ್ರ ಸಿಂಗ್‌ ಹೇಳಿದ ನದಿಗಳ ಮರುಹುಟ್ಟಿನ ಕಥೆ...

ಶರಣಬಸವ ವಿಶ್ವವಿದ್ಯಾಲಯ ಸಹಯೋಗದಲ್ಲಿ ಜಲಜಾಗೃತಿ ಸಮಾವೇಶ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 21:00 IST
Last Updated 8 ಡಿಸೆಂಬರ್ 2019, 21:00 IST
ಕಲಬುರ್ಗಿಯ ಶರಣಬಸವ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಜಲ ಜಾಗೃತಿ ಸಮಾವೇಶವನ್ನು ಜಲತಜ್ಞ ರಾಜೇಂದ್ರ ಸಿಂಗ್ ಹರವಿಗೆ ನೀರು ಸುರಿಯುವ ಮೂಲಕ ಉದ್ಘಾಟಿಸಿದರು. ಕೆ.ನೀಲಾ, ಅನೀಲಕುಮಾರ ಬಿಡವೆ, ಡಾ.ರಾಜೇಂದ್ರ ಪೋದ್ದಾರ, ಬಿ.ಆರ್.ಪಾಟೀಲ, ಬಸವರಾಜ ದೇಶಮುಖ ಇದ್ದರು
ಕಲಬುರ್ಗಿಯ ಶರಣಬಸವ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಜಲ ಜಾಗೃತಿ ಸಮಾವೇಶವನ್ನು ಜಲತಜ್ಞ ರಾಜೇಂದ್ರ ಸಿಂಗ್ ಹರವಿಗೆ ನೀರು ಸುರಿಯುವ ಮೂಲಕ ಉದ್ಘಾಟಿಸಿದರು. ಕೆ.ನೀಲಾ, ಅನೀಲಕುಮಾರ ಬಿಡವೆ, ಡಾ.ರಾಜೇಂದ್ರ ಪೋದ್ದಾರ, ಬಿ.ಆರ್.ಪಾಟೀಲ, ಬಸವರಾಜ ದೇಶಮುಖ ಇದ್ದರು   

ಕಲಬುರ್ಗಿ: ಜಲಜಾಗೃತಿ ಸಮಾವೇಶದಲ್ಲಿ ಭಾಗವಹಿಸಿದ್ದ ಹಲವು ಗಣ್ಯರು ಮಾತನಾಡುವಾಗಲೂ ಸಭಾಂಗಣದಲ್ಲಿ ಗಿಜಿಬಿಜಿ ಸದ್ದು. ವಿದ್ಯಾರ್ಥಿಗಳನ್ನು ಸುಮ್ಮನಿರಿಸಲು ಮಾಡಿದ ಪ್ರಯತ್ನಗಳೆಷ್ಟೋ. ಆದರೆ, ಕೊನೆಯ ಭಾಷಣಕಾರರಾಗಿ ಮೈಕ್‌ ಹಿಡಿದು ಸಭಿಕರ ಮಧ್ಯೆಯೇ ಓಡಾಡುತ್ತಾ ಒಂದು ಗಂಟೆ ಆ ವ್ಯಕ್ತಿ ಮಾತನಾಡುತ್ತಿದ್ದರೂ ಸೂಜಿ ಬಿದ್ದರೂ ಸಪ್ಪಳ ಕೇಳುವಷ್ಟು ಸಪ್ಪಳ. ಅವರೇವಾಟರ್‌ಮ್ಯಾನ್‌ ಆಫ್‌ ಇಂಡಿಯಾ ಎಂದೇ ಕರೆಸಿಕೊಳ್ಳುವ ಜಲತಜ್ಞ ರಾಜೇಂದ್ರ ಸಿಂಗ್‌.

ಬರದ ನಾಡು ಎಂದೇ ಹಣೆಪಟ್ಟಿ ಹೊತ್ತಿರುವ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ನೀರನ್ನು ಉಳಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಗರದ ಶರಣವಸವ ವಿಶ್ವವಿದ್ಯಾಲಯದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಅವರು ತಮ್ಮ ತವರು ರಾಜ್ಯ ರಾಜಸ್ಥಾನದಲ್ಲಿ 12 ನದಿಗಳು ಮರುಹುಟ್ಟು ಪಡೆದುದನ್ನು ಹೇಳುತ್ತಿದ್ದರೆ ವಿದ್ಯಾರ್ಥಿಗಳು ತದೇಕ ಚಿತ್ತದಿಂದ ಅವರ ಮಾತುಗಳನ್ನೇ ಆಲಿಸುತ್ತಿದ್ದರು.

ಪವರ್‌ ಪಾಯಿಂಟ್‌ ಪ್ರಜೆಂಟೇಶನ್‌ ಮೂಲಕ ನೀರಿನ ಸದ್ಬಳಕೆ, ಮಳೆ ನೀರನ್ನು ಉಳಿಸುವ ಕ್ರಮ, ಓಡುವ ನೀರನ್ನು ನಿರ್ದಿಷ್ಟ ಸ್ಥಳದಲ್ಲಿ ಹಿಡಿದಿಡುವ ತಂತ್ರಜ್ಞಾನವನ್ನು ಹೇಳುತ್ತಲೇ ಅದರಿಂದ ಮನುಕುಲಕ್ಕೆ ಆಗುವ ಲಾಭಗಳ ಬಗ್ಗೆಯೂ ವಿವರಿಸಿ ಹೇಳುತ್ತಿದ್ದರು. ಅವೈಜ್ಞಾನಿಕ ಕ್ರಮಗಳು, ಒತ್ತುವರಿ, ಮಳೆ ಬಂದಾಗ ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳುವಲ್ಲಿ ತೋರುವ ನಿರ್ಲಕ್ಷ್ಯಗಳನ್ನು ಎಳೆ ಎಳೆಯಾಗಿ ಬಿಡಿಸಿಡುತ್ತಲೇ 1985ರಲ್ಲಿ ಸಂಪೂರ್ಣ ಒಣಗಿ ಹೋಗಿದ್ದ ಅರವರಿ ನದಿಯು ಕೇವಲ 15 ವರ್ಷಗಳಲ್ಲಿ ಅಂದರೆ 2000ರಲ್ಲಿ ಹೇಗೆ ಮೈದುಂಬಿಕೊಂಡು ಹರಿಯಿತು ಎಂಬುದನ್ನು ಚಿತ್ರಗಳ ಸಮೇತ ವಿವರಿಸಿದರು.‌

ADVERTISEMENT

‘ಆಯುರ್ವೇದ ವೈದ್ಯನಾಗಿದ್ದ ನಾನು ಇದ್ದ ಉದ್ಯೋಗವನ್ನು ಬಿಟ್ಟು 1981ರಲ್ಲಿ ರಾಜಸ್ಥಾನದ ಆಳ್ವಾರ್‌ ಜಿಲ್ಲೆಯ ಗೋಪಾಲಪುರಕ್ಕೆ ತೆರಳಿದಾಗ ಅಲ್ಲಿನ ಹಿರಿಯರೊಬ್ಬರು ನೀರು ಇಲ್ಲದ್ದಕ್ಕೇ ಜನರಿಗೆ ರೋಗ ರುಜಿನಗಳು ಬರುತ್ತಿವೆ. ನೀರಿನ ವ್ಯವಸ್ಥೆ ಮಾಡುವುದು ಸಾಧ್ಯವಾದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕಂತೆ ಎಂದರು. ಇದರಿಂದಾಗಿ ನೀರಿನ ಸಮಸ್ಯೆ ಪರಿಹಾರಕ್ಕೆ ಜನರನ್ನು ಸಂಘಟಿಸಿ ಕೆರೆ ಕಟ್ಟೆಗಳನ್ನು ನಿರ್ಮಿಸುವ ಹಾಗೂ ಸಾಂಪ್ರದಾಯಿಕ ನೀರಿನ ಮೂಲಗಳನ್ನು ಮರು ಶೋಧಿಸುವ ಪ್ರಯತ್ನಕ್ಕೆ ಮುಂದಾದೆ. ಮಳೆ ನೀರನ್ನು ಸರಿಯಾದ ದಿಕ್ಕಿನಲ್ಲಿ ಹೋಗುವಂತೆ ಮಾಡಲು ಇಳಿಜಾರನ್ನು ನಿರ್ಮಿಸಲಾಯಿತು. ಇದರ ಪರಿಣಾಮ ಕೆಲವೇ ವರ್ಷಗಳಲ್ಲಿ ನದಿಗಳು ತುಂಬಿ ಹರಿಯತೊಡಗಿದವು. ದಿಲ್ಲಿಯ ಆಜಾದಪುರದ ಮಂಡಿಗಳಲ್ಲಿ (ಮಾರುಕಟ್ಟೆ) ಕೂಲಿ ಮಾಡಲು ತೆರಳಿದ್ದ ಆ ಊರುಗಳ ಯುವಕರು ವಾಪಸ್ ಬಂದು ತರಕಾರಿ ಬೆಳೆಯಲು ಆರಂಭಿಸಿದರು. ಅವುಗಳನ್ನು ಮಾರಾಟ ಮಾಡಿ ತಾವೇ ಕೂಲಿ ಕೆಲಸಕ್ಕೆ ಜನಗಳನ್ನು ಇಟ್ಟುಕೊಳ್ಳುವಷ್ಟು ಆರ್ಥಿಕ ಸಬಲರಾಗಿದ್ದಾರೆ’ ಎಂದರು.

ಧಾರವಾಡದ ನೀರು ಮತ್ತು ನೆಲ ನಿರ್ವಹಣಾ ಸಂಸ್ಥೆಯ (ವಾಲ್ಮಿ) ನಿರ್ದೇಶಕ ಡಾ.ರಾಜೇಂದ್ರ ಪೋದ್ದಾರ ಮಾತನಾಡಿ, ‘ಎರಡು ಜಾಗತಿಕ ಯುದ್ಧಗಳು ಸಾಮ್ರಾಜ್ಯ ವಿಸ್ತರಣೆಗಾಗಿ ನಡೆದಂಥವು. ಆದರೆ, ಮೂರನೇ ಯುದ್ಧವೇನಾದರೂ ನಡೆದರೆ ಅದು ನೀರಿಗಾಗಿಯೇ ಎಂದು ಅಮೆರಿಕದ ಮಸಾಚ್ಯುವೇಟ್ಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ)ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ಆದಷ್ಟೂ ಮಿತವ್ಯಯದಿಂದ ನೀರನ್ನು ಬಳಕೆ ಮಾಡುವತ್ತ ನಾವು ಗಮನ ಹರಿಸಬೇಕಿದೆ’ ಎಂದು ಹೇಳಿದರು.

‘ಬರಡು ಭೂಮಿ ಎಂದೇ ಕರೆಸಿಕೊಂಡಿರುವ ರಾಜಸ್ಥಾನದಲ್ಲಿ ಹಲವು ನದಿಗಳ ಪುನರುಜ್ಜೀವನಕ್ಕೆ ಶ್ರಮಿಸಿ ಯಶಸ್ಸು ಕಂಡಿರುವ ರಾಜೇಂದ್ರ ಸಿಂಗ್‌ ಅವರ ಜೀವನಗಾಥೆಯನ್ನು ರಾಜ್ಯದ ಪಠ್ಯಪುಸ್ತಕಗಳಲ್ಲಿ ಅಳವಡಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ರಮೇಶ ಲಂಡನಕರ್‌ ಮಾತನಾಡಿ, ‘ಮನುಷ್ಯ ಆಹಾರವಿಲ್ಲದೇ ಮೂರು ತಿಂಗಳು ಬದುಕಬಹುದು. ಆದರೆ, ನೀರಿಲ್ಲದೇ ಮೂರು ದಿನವೂ ಬದುಕುವುದು ಆಗುವುದಿಲ್ಲ. ಗಾಳಿ ಇಲ್ಲದೇ ಮೂರು ನಿಮಿಷವೂ ಜೀವಂತವಾಗಿರಲು ಆಗುವುದಿಲ್ಲ. ಪರಿಸ್ಥಿತಿ ಹೀಗಿರುವಾಗ ಮನುಷ್ಯ ಪರಿಸರವನ್ನು ಬಹಳ ವೇಗವಾಗಿ ಹಾಳು ಮಾಡುತ್ತಿದ್ದಾನೆ. ಜಾಗತಿಕ ತಾಪಮಾನದಿಂದಾಗಿ ನೀರು ಹೆಚ್ಚು ವೇಗವಾಗಿ ಬತ್ತುತ್ತಿದೆ. ಇದನ್ನು ತಡೆಗಟ್ಟಬೇಕು. ಮನುಷ್ಯನ ಬಳಕಗೆ ಅಗತ್ಯವಾದ ಜಲಮೂಲಗಳನ್ನು ರಕ್ಷಿಸಲು ಈಗಿನಿಂದಲೇ ಪಣತೊಡಬೇಕು. ಮಾನವ ಅತ್ಯಂತ ಬುದ್ಧಿವಂತ ಪ್ರಾಣಿ. ಆದರೆ ಆತನಿಂದಲೇ ಪರಿಸರ ಹಾಳಾಗುತ್ತಿರುವುದು ದುರದೃಷ್ಟಕರ’ ಎಂದು ಬೇಸರ ವ್ಯಕ್ತಪಡಿಸಿದರು.

ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವ ಡಾ.ಅನೀಲಕುಮಾರ ಬಿಡವೆ ಅವರು ನೀರನ್ನು ಉಳಿಸಲು ಮತ್ತು ರಕ್ಷಿಸಲು ಸಮಾವೇಶದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾನವಿಧಿ ಭೋದಿಸಿದರು.

ತೆಲಂಗಾಣದ ಜಲಸಂಪನ್ಮೂಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಪ್ರಕಾಶ ರಾವ್, ಡಾ.ಸಂಪತ್‌ರಾವ್‌ ಇದ್ದರು.

ಮೌಲ್ಯಮಾಪನ ಕುಲಸಚಿವ ಲಿಂಗರಾಜ ಶಾಸ್ತ್ರಿ ನಿರೂಪಿಸಿದರು. ಕೆ.ನೀಲಾ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.