ADVERTISEMENT

ಸಂಘರ್ಷದಲ್ಲೇ ಜೀವನ ಕಳೆದ ರಮಾಬಾಯಿ

125ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮೊಮ್ಮಗಳು ರಮಾ ಅಂಬೇಡ್ಕರ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 13:49 IST
Last Updated 7 ಫೆಬ್ರುವರಿ 2023, 13:49 IST
ಕಲಬುರಗಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಮಾ ಅಂಬೇಡ್ಕರ್ ಅವರು ರಮಾಬಾಯಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು. ಸುರೇಶ್ ಶರ್ಮಾ, ಪ್ರಿಯಾ ಗೋಖಲೆ, ಅರ್ಜುನ್ ಭದ್ರೆ, ಪ್ರೊ. ಆರ್‌.ಕೆ. ಹುಡಗಿ, ಭವಾನಿಪ್ರಸಾದ್, ಅಶ್ವಿನಿ ಮದನಕರ ಇದ್ದರು
ಕಲಬುರಗಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಮಾ ಅಂಬೇಡ್ಕರ್ ಅವರು ರಮಾಬಾಯಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಗೌರವ ಸಲ್ಲಿಸಿದರು. ಸುರೇಶ್ ಶರ್ಮಾ, ಪ್ರಿಯಾ ಗೋಖಲೆ, ಅರ್ಜುನ್ ಭದ್ರೆ, ಪ್ರೊ. ಆರ್‌.ಕೆ. ಹುಡಗಿ, ಭವಾನಿಪ್ರಸಾದ್, ಅಶ್ವಿನಿ ಮದನಕರ ಇದ್ದರು   

ಕಲಬುರಗಿ: ’ನನ್ನ ಅಜ್ಜಿ ರಮಾಬಾಯಿ ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಸಂಘರ್ಷದಲ್ಲೇ ಜೀವನ ಸಾಗಿಸಿದ್ದರು. ಕಷ್ಟಕಾಲಕ್ಕೆಂದು ಅಂಬೇಡ್ಕರ್ ಅವರು ನೀಡಿದ್ದ ಹಣವನ್ನು ಹಾಸ್ಟೆಲ್‌ನಲ್ಲಿದ್ದ ದಲಿತ ಮಕ್ಕಳ ಊಟಕ್ಕೆಂದು ಖರ್ಚು ಮಾಡಿದ್ದರು’ ಎಂದು ಅಂಬೇಡ್ಕರ್–ರಮಾಬಾಯಿ ಅವರ ಮೊಮ್ಮಗಳಾದ ರಮಾ ಅಂಬೇಡ್ಕರ್ ಸ್ಮರಿಸಿದರು.

ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಹಾಗೂ ಫುಲೆ ಸ್ಟಡಿ ಸರ್ಕಲ್ ಸಹಯೋಗದಲ್ಲಿ ರಮಾದೇವಿ ಅಂಬೇಡ್ಕರ್ ಅವರ 125ನೇ ಜಯಂತ್ಯುತ್ಸವದ ಅಂಗವಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್ ಅವರಿಗೆ ಬೆನ್ನೆಲುವಾಗಿ ನಿಂತ ಇಬ್ಬರೆಂದರೆ ಅವರ ತಂದೆ ರಾಮ್‌ಜಿ ಹಾಗೂ ಪತ್ನಿ ರಮಾಬಾಯಿ. 1922ರಿಂದ 1932ರ ಅವಧಿಯಲ್ಲಿ ರಮಾಬಾಯಿ ಕಠಿಣ ದಿನಗಳನ್ನು ಎದುರಿಸಿದರು. ಬಹುಶಃ ಆ ಕಾಲದಲ್ಲಿ ಬಹುಜನರೆಲ್ಲ ಇಂತಹ ಕಠಿಣ ದಿನಗಳನ್ನು ಕಂಡವರೇ ಆಗಿದ್ದಾರೆ. ಮೇಲ್ಜಾತಿಯ ಮಹಿಳೆಯರೊಂದಿಗೆ ಕೆಳಜಾತಿಯವರು ಸರಿಸಮನಾಗಿ ಬೆಳೆಯುವುದು ಅಷ್ಟು ಸುಲಭದ ಸಂಗತಿಯಾಗಿರಲಿಲ್ಲ. ಎಷ್ಟೋ ಬಾರಿ ಅವರ ಖರ್ಚಿಗೂ ಹಣ ಇರುತ್ತಿರಲಿಲ್ಲ. ಹಾಗಾಗಿ ಕೆಲಸ ಮಾಡುವುದು ಅನಿವಾರ್ಯವಾಗುತ್ತಿತ್ತು. ಅಷ್ಟಾಗಿಯೂ ಮನೆಯನ್ನು ನಿಭಾಯಿಸಿದರು’ ಎಂದರು.

ADVERTISEMENT

‘ನನ್ನ ಅಜ್ಜ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಅವರ ನಿರ್ಧಾರ ಸರಿಯಾಗಿದ್ದು, ನಾವೆಲ್ಲರೂ ಬುದ್ಧನ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದರು.

ಸಾಹಿತಿ ಪ್ರೊ.ಆರ್‌.ಕೆ. ಹುಡಗಿ ಮಾತನಾಡಿ, ‘ಶ್ರೀಮಂತರಾದವರು ಹತ್ತಾರು ಜನ ಬಡವರ ಬೆವರನ್ನು ಬಸಿದೇ ಸಂಪತ್ತನ್ನು ಗಳಿಸಿರುತ್ತಾರೆ. ಹತ್ತು ಮನೆಗಳ ಸೂರೆ ಮಾಡಿದರೆ ಮತ್ತೊಂದು ಮನೆ ನಿರ್ಮಾಣವಾಗುತ್ತದೆ. ಅಂತಹ ಶೋಷಣೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಯೋಚಿಸಿದ್ದ ಡಾ.ಅಂಬೇಡ್ಕರ್ ಅವರು ಎಲ್ಲರಿಗೂ ಹಕ್ಕುಗಳು ಇರುವಂತಹ, ಶೋಷಿತರನ್ನು ಮೇಲೆತ್ತುವಂತಹ ಸಂವಿಧಾನವನ್ನು ರಚಿಸಿದರು. ಅದಕ್ಕಾಗಿ ಇಡೀ ದೇಶದ ಜನತೆ ಅವರಿಗೆ ಋಣಿಯಾಗಿರಬೇಕಿದೆ’ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಮಾತನಾಡಿ, ‘ಯಾವುದೇ ಸವಾಲು ಎದುರಾದರೂ ರಮಾಬಾಯಿ ಅಂಬೇಡ್ಕರ್ ಅವರು ಎದೆಗುಂದದೇ ಅಂಬೇಡ್ಕರ್ ಅವರಿಗೆ ಹೆಗಲಾಗಿ ನಿಂತು ಕೆಲಸ ಮಾಡಿದರು. ಅಂಧಶ್ರದ್ಧೆ ಮೌಢ್ಯ, ಅಂಧಶ್ರದ್ಧೆಯನ್ನು ಧಿಕ್ಕರಿಸಿದರು’ ಎಂದು ಹೇಳಿದರು.

‘ಇವತ್ತು ಪರಿಶಿಷ್ಟ ಸಮುದಾಯದವರು ಒಂದು ಉತ್ತಮ ನೌಕರಿ, ಒಳ್ಳೆಯ ಬಟ್ಟೆ ಧರಿಸುತ್ತಿದ್ದಾರೆ ಎಂದರೆ ಅದು ಭಗವಂತನ ಕೃಪೆಯಲ್ಲ. ಬದಲಾಗಿ ಅಂಬೇಡ್ಕರ್ ಅವರು ನೀಡಿದ ಕೊಡುಗೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಬುದ್ಧ ಭಾರತ ಸಂಘರ್ಷ ಸಮಿತಿಯ ಸಂಚಾಲಕಿ ಅಶ್ವಿನಿ ಮದನಕರ, ‘ರಮಾದೇವಿ ಅವರು ಅಂಬೇಡ್ಕರ್ ಅವರೊಂದಿಗೆ ಮಾಡಿದ ಕೆಲಸಗಳನ್ನು ಸ್ಮರಿಸಲು ಈ ದಿನವನ್ನು ಆಚರಿಸಲಾಗುತ್ತಿದೆ. ಇದನ್ನು ಪ್ರತಿ ವರ್ಷ ಹಬ್ಬದಂತೆ ನಡೆಸಬೇಕು’ ಎಂದು ಹೇಳಿದರು.

ನಂತರ ವಿವಿಧ ಗ್ರಾಮಗಳಲ್ಲಿ ಫುಲೆ ಸ್ಟಡಿ ಸರ್ಕಲ್ ಮೂಲಕ ಗ್ರಾಮಸ್ಥರಿಗೆ ಅಧ್ಯಯನ ತರಗತಿಗಳನ್ನು ನಡೆಸುತ್ತಿರುವವರನ್ನು ರಮಾ ಅಂಬೇಡ್ಕರ್ ಸನ್ಮಾನಿಸಿದರು.

ಪ್ರಾಧ್ಯಾಪಕಿ ಡಾ. ಪುಟ್ಟಮಣಿ ದೇವಿದಾಸ, ಸಣ್ಣ ನೀರಾವರಿ ಇಲಾಖೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಸುರೇಶ್ ಶರ್ಮಾ, ಪ್ರಿಯಾ ಗೋಖಲೆ ಮಾತನಾಡಿದರು.

ಪುರಸಭೆ ಮುಖ್ಯಾಧಿಕಾರಿ ರಮೇಶ ಪಟ್ಟೇದಾರ, ಕೊಳಚೆ ನಿರ್ಮೂಲನಾ ಮಂಡಳಿ ಎಇಇ ಶ್ರೀಧರ ಸಾರವಾಡ, ಭವಾನಿಪ್ರಸಾದ ಶಿವಕೇರಿ, ಕವಿತಾ ಚಿಂಚೋಳಿ, ಅಕ್ಷತಾ ನೆಲ್ಲೂರ, ದಿಲೀಪ ಕಾಯಂಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.