ಕಲಬುರಗಿ: ‘ರಾಮಾಯಣವು ಒಂದು ಸಾರ್ವತ್ರಿಕ ಗ್ರಂಥವಾಗಿದ್ದು, ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ಮನುಕುಲಕ್ಕೆ ಮೌಲ್ಯಗಳು ಮತ್ತು ನೀತಿಗಳನ್ನು ಕಲಿಸಿದರು’ ಎಂದು ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ಇಲ್ಲಿಗೆ ಸಮೀಪದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಾಲ್ಮೀಕಿ ರಾಮಾಯಣದ ಮೂಲಕ ಮಾನವ ಸಂಬಂಧ, ತಂದೆ–ಮಗನ ಸಂಬಂಧಗಳ ಮೌಲ್ಯ, ಪ್ರಕೃತಿಯ ಮೇಲಿನ ಪ್ರೀತಿ ಇತ್ಯಾದಿಗಳನ್ನು ಮನುಕುಲಕ್ಕೆ ಕಲಿಸಿದರು. ಮಾನವೀಯ ಮೌಲ್ಯಗಳನ್ನು ಕಲಿಯಲು ರಾಮಾಯಣ ಮತ್ತು ಮಹಾಭಾರತ ನಮ್ಮ ಪಠ್ಯಕ್ರಮದ ಭಾಗವಾಗಬೇಕು. ಭಾರತವನ್ನು ಅರ್ಥೈಸಿಕೊಳ್ಳಲು ಪ್ರತಿಯೊಬ್ಬರು ಎರಡೂ ಭಾರತೀಯ ಮಹಾಕಾವ್ಯಗಳನ್ನು ಓದಬೇಕು’ ಎಂದು ಅಭಿಪ್ರಾಯಪಟ್ಟರು.
ಸಂಪನ್ಮೂಲ ವ್ಯಕ್ತಿ ಶ್ಯಾಮಲಾ ಆರ್. ಮಾತನಾಡಿ, ‘ರಾಮಾಯಣವು ರಾಮ, ಸೀತೆ ಮತ್ತು ರಾವಣರ ಕಥೆ ಮಾತ್ರವಲ್ಲ. ಇದು ಮಾನವರ ನಡುವೆ, ಮನುಷ್ಯರು ಮತ್ತು ಪ್ರಕೃತಿಯ ನಡುವೆ ಮತ್ತು ಮಾನವೀಯತೆ ಮತ್ತು ದೈವತ್ವದ ನಡುವಣ ಸಂಬಂಧಗಳ ಕಥೆಯೂ ಆಗಿದೆ. ಜೀವನವನ್ನು ಆಳುವ ಸದಾಚಾರದ ತತ್ವ. ವಾಲ್ಮೀಕಿಯ ರಾಮಾಯಣವು ಭಾರತದ ಗಡಿಗಳನ್ನು ಮೀರಿ ಹರಡಿದ್ದು, ಅದರ ಮೂಲ ಸಂದೇಶವನ್ನು ಉಳಿಸಿಕೊಂಡು ಸ್ಥಳೀಯ ಸಂಸ್ಕೃತಿಗಳು ಮತ್ತು ಭಾಷೆಗಳಿಗೆ ಹೊಂದಿಕೊಳ್ಳುತ್ತದೆ’ ಎಂದರು.
ಕುಲಸಚಿವ ಪ್ರೊ.ಆರ್.ಆರ್.ಬಿರಾದರ ಮಾತನಾಡಿ, ‘ರಾಮಾಯಣವು ಸಾಮರಸ್ಯ, ಸದಾಚಾರ ಮತ್ತು ಮಾನವೀಯ ಮೌಲ್ಯಗಳ ಅಸ್ತಿತ್ವಕ್ಕೆ ಉದಾಹರಣೆಯಂತಿದೆ. ಭಾರತೀಯ ಆಧ್ಯಾತ್ಮಿಕತೆಯು ಮಹಾಕಾವ್ಯವಾದ ರಾಮಾಯಣದಲ್ಲಿ ಅಡಗಿದೆ’ ಎಂದರು.
ಕಾರ್ಯಕ್ರಮದ ಸಂಯೋಜಕ ಸಂಗಮೇಶ ಸ್ವಾಗತಿಸಿದರು. ಜಯದೇವಿ ಜಂಗಮಶೆಟ್ಟಿ ಮತ್ತು ಸ್ವಪ್ನಿಲ್ ಚಾಪೇಕರ್ ವಂದೇ ಮಾತರಂ ಮತ್ತು ರಾಷ್ಟ್ರಗೀತೆ ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.