ADVERTISEMENT

ಆಳಂದ | ಸಿದ್ದರಾಮ ಶ್ರೀಗಳ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2026, 5:27 IST
Last Updated 8 ಫೆಬ್ರುವರಿ 2026, 5:27 IST
ಆಳಂದ ತಾಲ್ಲೂಕಿನ ಜಿಡಗಾದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಪುಣ್ಯಸ್ಮರಣೋತ್ಸವ ನಿಮಿತ್ತ ರಥೋತ್ಸವವು ಸಂಭ್ರಮದಿಂದ ಜರುಗಿತು
ಆಳಂದ ತಾಲ್ಲೂಕಿನ ಜಿಡಗಾದಲ್ಲಿ ಶಿವಯೋಗಿ ಸಿದ್ಧರಾಮೇಶ್ವರರ ಪುಣ್ಯಸ್ಮರಣೋತ್ಸವ ನಿಮಿತ್ತ ರಥೋತ್ಸವವು ಸಂಭ್ರಮದಿಂದ ಜರುಗಿತು   

ಆಳಂದ: ‘ಎಲ್ಲ ಜಾತಿ, ಧರ್ಮ, ಭಾಷೆ ಹಾಗೂ ವರ್ಗದ ಜನರ ಭಕ್ತಿ, ಶ್ರದ್ಧಾಕೇಂದ್ರವಾಗಿರುವ ಜಿಡಗಾ ಮಠವು ಕಲ್ಯಾಣ ಕರ್ನಾಟಕದ ಸೌಹಾರ್ದತೆಯ ಪ್ರತೀಕವಾಗಿದೆ’ ಎಂದು ಜಿಡಗಾ, ಮುಗಳಖೋಡದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಜಿಡಗಾ ನವಕಲ್ಯಾಣ ಮಠದಲ್ಲಿ ಶನಿವಾರ ಸಿದ್ದರಾಮ ಶಿವಯೋಗಿಗಳ 22ನೇ ಪುಣ್ಯಸ್ಮರಣೆ ಹಾಗೂ ಮಹಾರಥೋತ್ಸವದ ಅಂಗವಾಗಿ ಏರ್ಪಡಿಸಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಿದ್ದರಾಮ ಶಿವಯೋಗಿಗಳ ಸದಾಶಯದಂತೆ ಮಠದಲ್ಲಿ ಉಚಿತ ವಸತಿನಿಲಯದ ಶಾಲೆಯಲ್ಲಿ 600 ವಿದ್ಯಾರ್ಥಿಗಳು ಶಿಕ್ಷಣಾಭ್ಯಾಸ ಮಾಡುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಸಾವಿರಾರು ಮಕ್ಕಳಿಗೆ ವಸತಿಸಹಿತ ಪ್ರಾಥಮಿಕದಿಂದ ಪದವಿ ಹಂತದವರೆಗೆ ಗುಣಮಟ್ಟದ ಶಿಕ್ಷಣ ಸೌಲಭ್ಯ ದೊರೆಯಲಿದೆ. ಮುಂದಿನ ಐದು ವರ್ಷದಲ್ಲಿ ಈ ಭಾಗದ ರೈತರಿಗಾಗಿ ಕೆರೆ ನಿರ್ಮಾಣ ಪೂರ್ಣಗೊಳ್ಳಲಿದೆ’ ಎಂದರು.

ADVERTISEMENT

ಚಿನ್ಮಯಗಿರಿಯ ವೀರಮಹಾಂತ ಸ್ವಾಮೀಜಿ, ಕೆಎಂಎಫ್‌ ಅಧ್ಯಕ್ಷ ಆರ್‌.ಕೆ.ಪಾಟೀಲ ಮಾತನಾಡಿ, ‘ಪೀಠಾಧಿಪತಿ ಮುರುಘರಾಜೇಂದ್ರ ಶ್ರೀಗಳ ದೂರದೃಷ್ಟಿಯ ಫಲವಾಗಿ ಜಿಡಗಾ ಮಠವು ಹೊಸ ಸ್ವರೂಪದಲ್ಲಿ ಪ್ರಗತಿ ಕಂಡಿದೆ. ಇದು ಈಗ ನಮ್ಮ ಭಾಗದ ದೈವಶಕ್ತಿಕೇಂದ್ರವಾಗಿದೆ’ ಎಂದರು.

ಯಳಸಂಗಿಯ ಗುರುಪಾದಲಿಂಗ ಸ್ವಾಮೀಜಿ, ನಿಂಬರ್ಗಾ ಸ್ವಾಮೀಜಿ, ಬಸವಣ್ಣಪ್ಪ ದೇವರು, ಖಾನಾಪುರದ ಯೋಗಿರಾಜ ಸ್ವಾಮೀಜಿ ಹಾಗೂ ಪ್ರಮುಖರಾದ ಸಿದ್ದರಾಮ ಪ್ಯಾಟಿ, ಸಂಗ್ರಾಮ ಬಿರಾದಾರ, ಮುರುಳಿಧರ ಏಕಲಾರಕರ್‌, ಗೀತಾ ಚಿದ್ರಿ, ರೇವಣಪ್ಪ ನಾಗೂರೆ, ರಾಜು ಪಾಟೀಲ, ದೇವರಾಯ ಜವಳಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಭಕ್ತರಿಂದ ಮುರುಘರಾಜೇಂದ್ರ ಶ್ರೀಗಳ ತುಲಾಭಾರ ಸೇವೆ, ಸುವರ್ಣ ಕಿರೀಟಧಾರಣೆ ನಡೆಯಿತು.

ಶರಣಬಸವೇಶ್ವರ ವಿವಿಯಿಂದ ಗೌರವ ಡಾಕ್ಟರೇಟ್‌ ಪದವಿ ಪುರಸ್ಕೃತರಾದ ಗುರುಪಾದಲಿಂಗ ಸ್ವಾಮೀಜಿ ಅವರಿಗೆ ಜಿಡಗಾ ಮಠದಿಂದ ವಿಶೇಷ ಸನ್ಮಾನ ನಡೆಯಿತು.

ಶಾಸಕ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕ ಸುಭಾಷ ಗುತ್ತೇದಾರ, ಸಂಗ್ರಾಮ ಬಿರಾದಾರ ಭಾಗವಹಿಸಿದ್ದರು.

ಆಳಂದದ ಜಿಡಗಾ ಮಠದ ಜಾತ್ರೆಯಲ್ಲಿ ಕಲಾಮೇಳಗಳ ಪ್ರದರ್ಶನವು ಗಮನ ಸೆಳೆಯಿತು.
ಆಳಂದ ತಾಲ್ಲೂಕಿನ ಜಿಡಗಾ ನವಕಲ್ಯಾಣ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ರಥೋತ್ಸವಕ್ಕೆ ಮೆರವಣಿಗೆ ಮೂಲಕ ಆಗಮಿಸಿದರು.
ಆಳಂದ ತಾಲ್ಲೂಕಿನ ಜಿಡಗಾ ಮಠದ ಲಿಂ.ಸಿದ್ದರಾಮ ಶಿವಯೋಗಿಗಳ ಮಂದಿರಕ್ಕೆ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ಪುಷ್ಪವೃಷ್ಟಿಗೈದರು.
ಆಳಂದ ತಾಲ್ಲೂಕಿನ ಜಿಡಗಾ ಮಠದ ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿಗಳು ಸುವರ್ಣ ಕಿರೀಟಧಾರಣೆ ಮತ್ತು ಭಕ್ತರಿಂದ ವಿಶೇಷ ಪೂಜೆ ಜರುಗಿತು.
ಶಾಸಕ ಬಿ.ಆರ್‌.ಪಾಟೀಲ ಅವರ ವಿಶೇಷ ಪ್ರಯತ್ನದಿಂದ ₹25 ಕೋಟಿ ಅನುದಾನದಲ್ಲಿ ಜಿಡಗಾ ಕೆರೆ ನಿರ್ಮಾಣ ಮಂಜೂರಾಗಿದೆ. ಮುಂಬರುವ ವರ್ಷದಲ್ಲಿ ಸುತ್ತಲಿನ ರೈತರ ಹೊಲಗದ್ದೆಗಳು ಸಮೃದ್ಧವಾಗಿ ಜಿಡಗಾ ಮಠವು ಹಚ್ಚಹಸಿರಿನ ತಾಣವಾಗಲಿದೆ
ಮುರುಘರಾಜೇಂದ್ರ ಸ್ವಾಮೀಜಿ ಪೀಠಾಧಿಪತಿ ಜಿಡಗಾ

ರಥ ಎಳೆದು ಸಂಭ್ರಮಿಸಿದ ಭಕ್ತರು ಸಿದ್ದರಾಮ ಶಿವಯೋಗಿಗಳ ಪುಣ್ಯಸ್ಮರಣೆ ನಿಮಿತ್ತ ಮಠದ ವಿಶಾಲ ಪ್ರಾಂಗಣದಲ್ಲಿ ಗೋದೂಳಿ ಸಮಯದಲ್ಲಿ ಮಹಾರಥೋತ್ಸವವು ಭಕ್ತರ ಹರ್ಷೋದ್ಘಾರದ ನಡುವೆ ಸಂಭ್ರಮದಿಂದ ಜರುಗಿತು. ಪೀಠಾಧಿಪತಿ ಮುರುಘರಾಜೇಂದ್ರ ಸ್ವಾಮೀಜಿ ಅವರು ಮಹಾರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಕಿಕ್ಕಿರಿದ ತುಂಬಿದ ಭಕ್ತರು ಸಿದ್ದರಾಮ ಶಿವಯೋಗಿ ಮಹಾರಾಜ ಕೀ ಜೈ ಮುರುಘರಾಜೇಂದ್ರ ಮಹಾಸ್ವಾಮೀಜಿ ಕೀ ಜೈ ಎಂಬ ಘೋಷಣೆಗಳೊಂದಿಗೆ ರಥವನ್ನು ಎಳೆದು ಸಂಭ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.