ADVERTISEMENT

ಕಲಬುರಗಿ: ಸನ್ನತಿ, ಕಾಳಗಿ, ಮಳಖೇಡ ಸ್ಮಾರಕಗಳಿಗೆ ಕಾಯಕಲ್ಪ

ಕೆಕೆಆರ್‌ಡಿಬಿಯ ಮ್ಯಾಕ್ರೊ ಯೋಜನೆಯಡಿ ₹ 19.25 ಕೋಟಿ ಅನುದಾನಕ್ಕೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2025, 5:16 IST
Last Updated 11 ಜೂನ್ 2025, 5:16 IST
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕನಗನಹಳ್ಳಿ ಪರಿಸರದಲ್ಲಿ ಪತ್ತೆಯಾಗಿರುವ ಅಧೋಲೋಕ ಮಹಾಚೈತ್ಯದ (ಬೌದ್ಧ ಸ್ತೂಪ) ಅವಶೇಷಗಳು
–ಪ್ರಜಾವಾಣಿ ಸಂಗ್ರಹ ಚಿತ್ರ
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕನಗನಹಳ್ಳಿ ಪರಿಸರದಲ್ಲಿ ಪತ್ತೆಯಾಗಿರುವ ಅಧೋಲೋಕ ಮಹಾಚೈತ್ಯದ (ಬೌದ್ಧ ಸ್ತೂಪ) ಅವಶೇಷಗಳು –ಪ್ರಜಾವಾಣಿ ಸಂಗ್ರಹ ಚಿತ್ರ   

ಕಲಬುರಗಿ: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಜಿಲ್ಲೆಯ ಪ್ರಮುಖ ಸ್ಮಾರಕಗಳ ಅಭಿವೃದ್ಧಿಗೆ ಅಂತೂ ಕಾಲ ಕೂಡಿ ಬಂದಿದೆ. ಸನ್ನತಿ–ಕನಗನಹಳ್ಳಿ ಪರಿಸರದ ಬೌದ್ಧ ಸ್ತೂಪ, ಕಾಳಗಿಯ ಸೂರ್ಯನಾರಾಯಣ ದೇವಾಲಯ ಹಾಗೂ ಸುತ್ತಮುತ್ತಲಿನ ಸ್ಮಾರಕಗಳು, ಮಳಖೇಡ ಕೋಟೆಯಲ್ಲಿ ಪ್ರವಾಸಿ ಮೂಲಸೌಕರ್ಯಗಳನ್ನು ಕಲ್ಪಿಸಲು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ಮ್ಯಾಕ್ರೊ ಯೋಜನೆಯಡಿ ಅನುದಾನ ನೀಡಿದೆ.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹಿಂದೆ ಪ್ರವಾಸೋದ್ಯಮ ಸಚಿವರಾಗಿದ್ದಾಗ ಐತಿಹಾಸಿಕ ತಾಣಗಳಿಗೆ ಅನುದಾನ ಒದಗಿಸಿದ್ದರು. ಅಲ್ಲದೇ, ಕಲಬುರಗಿಯಿಂದ ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ಬಸ್ ವ್ಯವಸ್ಥೆಯನ್ನೂ ಮಾಡಿದ್ದರು. ಇಲಾಖೆಗೆ ಸೀಮಿತ ಅನುದಾನ ಇದ್ದುದರಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ, ಕೆಕೆಆರ್‌ಡಿಬಿಯು ಮ್ಯಾಕ್ರೊ ಯೋಜನೆಯಡಿ ಅನುದಾನ ನೀಡಲು ಒಪ್ಪಿಗೆ ನೀಡಿದ್ದರಿಂದ ಜಿಲ್ಲೆಗೆ ರಾಷ್ಟ್ರಮಟ್ಟದಲ್ಲಿ ಹೆಸರು ತಂದಿರುವ ಸನ್ನತಿ ಬಳಿಯಲ್ಲಿ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಾಣವಾಗಿರುವ ಅಧೋಲೋಕ ಮಹಾಚೈತ್ಯ ಬೌದ್ಧ ಮಹಾಸ್ತೂಪ ಹಾಗೂ ಸುತ್ತಲಿನ ಸ್ಮಾರಕಗಳ ರಕ್ಷಣೆಗೆ ಎರಡು ಯೋಜನೆಗಳಲ್ಲಿ ಒಟ್ಟಾರೆ ₹8.25 ಕೋಟಿ ವೆಚ್ಚ ಮಾಡಲು ನಿರ್ಧರಿಸಲಾಗಿದೆ. 

₹6.25 ಕೋಟಿ ವೆಚ್ಚದಲ್ಲಿ ಬೌದ್ಧ ನೆಲೆಯ ಸುತ್ತಮುತ್ತ ಪ್ರವಾಸಿಗರಿಗೆ ಉತ್ತಮ ರಸ್ತೆ, ಕುಡಿಯುವ ನೀರು, ಶೌಚಾಲಯ, ಸ್ತೂಪದ ಎದುರಿಗೆ ನಿರ್ಮಾಣವಾಗಿರುವ ಮ್ಯೂಸಿಯಂನ್ನು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿ ಅಲ್ಲಿ ಐತಿಹಾಸಿಕ ಕುರುಹುಗಳನ್ನು ಸಾಗಿಸುವ ಯೋಜನೆ ರೂಪಿಸಲಾಗಿದೆ. ಜೊತೆಗೆ, ನಾಗಾವಿ ಸಮೀಪದಲ್ಲಿರುವ 11ನೇ ಶತಮಾನದಲ್ಲಿ ವಿಶ್ವವಿದ್ಯಾಲಯವಾಗಿದ್ದ 60 ಕಂಬದ ಗುಡಿ, ಕರಿ ಮಸೀದಿ, ನಂದೇಶ್ವರ ದೇವಾಲಯ ಸಂಕೀರ್ಣ, ಸಂಜೀವಿನಿ ಆಂಜನೇಯ ದೇವಾಲಯಗಳ ಮುಂಭಾಗದಲ್ಲಿ ಮಾಹಿತಿ ಫಲಕ, ಮಾರ್ಗದರ್ಶಿ ಫಲಕಗಳನ್ನು ಅಳವಡಿಸಲು ಯೋಜನೆ ರೂಪಿಸಲಾಗಿದೆ.

ADVERTISEMENT

ಕನಗನಹಳ್ಳಿಯ ಬೌದ್ಧ ಸ್ತೂಪದ ಪಾರಂಪರಿಕ ವಸ್ತುಗಳ ಸಂರಕ್ಷಣೆಗೆ ₹2 ಕೋಟಿಯನ್ನು ಪ್ರತ್ಯೇಕವಾಗಿ ನೀಡಲಾಗುತ್ತಿದೆ. ಕಾಳಗಿಯ ಐತಿಹಾಸಿಕ ಸೂರ್ಯನಾರಾಯಣ ದೇವಾಲಯ, ತ್ರಿಕೂಟಾಚಲ ದೇವಾಲಯ ಹಾಗೂ ಕಾಳೇಶ್ವರ ದೇವಾಲಯದ ಪಕ್ಕದ ನೀರಿನ ಬುಗ್ಗೆ ಏಳುವ ಕಲ್ಯಾಣಿಯ ಸಂರಕ್ಷಣೆಗೆ ₹5 ಕೋಟಿ ನೀಡಲಾಗುತ್ತಿದೆ.

ರಾಷ್ಟ್ರಕೂಟ ಸಾಮ್ರಾಜ್ಯದ ರಾಜಧಾನಿಯಾಗಿ ಮೆರೆದಿದ್ದ, ಕವಿರಾಜಮಾರ್ಗದ ಕರ್ತೃ ಶ್ರೀವಿಜಯನ ನೆಲೆವೀಡು, ಸಚಿವ ಡಾ.ಶರಣಪ್ರಕಾಶ್ ಪಾಟೀಲ ಅವರು ಪ್ರತಿನಿಧಿಸುವ ಸೇಡಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳಖೇಡ ಕೋಟೆಯ ಬಳಿ ಪ್ರವಾಸಿ ಸೌಕರ್ಯಗಳನ್ನು ಕಲ್ಪಿಸಲು ₹6 ಕೋಟಿ ಅನುದಾನವನ್ನು ಒದಗಿಸಲಾಗುತ್ತಿದೆ.

ಕಳೆದ ಮಳೆಗಾಲದಲ್ಲಿ ಕೋಟೆಯ ಒಂದು ಭಾಗಕ್ಕೆ ಹಾನಿಯಾಗಿತ್ತು. ನಂತರ ದುರಸ್ತಿ ಕಾರ್ಯವನ್ನೂ ನಡೆಸಲಾಗಿತ್ತು. ಇದೀಗ 2024–25 ಹಾಗೂ 2025–26ನೇ ಸಾಲಿನ ಕೆಕೆಆರ್‌ಡಿಯ ಮ್ಯಾಕ್ರೊ ಯೋಜನೆಯಡಿ ನಾಲ್ಕೂ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒಟ್ಟಾರೆ ₹ 19.25 ಕೋಟಿ ಅನುದಾನ ವೆಚ್ಚ ಮಾಡಲಾಗುತ್ತಿದೆ.

ಪ್ರಿಯಾಂಕ್ ಖರ್ಗೆ
ಫೌಜಿಯಾ ತರನ್ನುಮ್

ಅಂಕಿ ಅಂಶ

₹ 6.25 ಕೋಟಿ - ಸನ್ನತಿ, ನಾಗಾವಿ ಸ್ಮಾರಕಗಳ ಸಂರಕ್ಷಣೆ, ಮಾಹಿತಿ ಫಲಕ

₹ 6 ಕೋಟಿ - ಮಳಖೇಡ ಕೋಟೆಯಲ್ಲಿ ಪ್ರವಾಸಿ ಸೌಕರ್ಯಗಳು

₹ 5 ಕೋಟಿ - ಕಾಳಗಿ ಪಟ್ಟಣದ ಸ್ಮಾರಕಗಳ ಸಂರಕ್ಷಣೆ

₹ 2 ಕೋಟಿ - ಕನಗನಗಳ್ಳಿ ಬೌದ್ಧ ಸ್ತೂಪದ ಬಳಿ ಪಾರಂಪರಿಕ ವಸ್ತುಗಳ ಸಂರಕ್ಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.