ADVERTISEMENT

ಯಡ್ರಾಮಿ| ಉನ್ನತಿಗೆ ಧರ್ಮ ಪಾಲನೆ ಮುಖ್ಯ: ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 6:46 IST
Last Updated 25 ಜನವರಿ 2026, 6:46 IST
ಯಡ್ರಾಮಿ ತಾಲ್ಲೂಕಿನ ಮಾಗಣಗೇರಾ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು
ಯಡ್ರಾಮಿ ತಾಲ್ಲೂಕಿನ ಮಾಗಣಗೇರಾ ಗ್ರಾಮದಲ್ಲಿ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು   

ಯಡ್ರಾಮಿ: ‘ಸುಖ, ಶಾಂತಿಗೆ ಧರ್ಮವೇ ಮೂಲ. ಮಾತು, ಮನ, ಕೃತಿಯಿಂದ ಒಂದಾಗಿ ಬಾಳಿದರೆ ಜೀವನದ ಉನ್ನತಿ ಸಾಧ್ಯ. ಶ್ರೇಯಸ್ಸಿಗೆ ಧರ್ಮ ಪರಿಪಾಲನೆ ಮುಖ್ಯ’ ಎಂದು ಬಾಳೆಹೊನ್ನೂರು ರಂಭಾಪುರಿ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಮಾಗಣಗೇರಾ ಗ್ರಾಮದಲ್ಲಿ ಶನಿವಾರ ರುದ್ರಮುನೀಶ್ವರ ಹಿರೇಮಠದ ಗುರು ಪಟ್ಟಾಧಿಕಾರ ಅಂಗವಾಗಿ ಜರುಗಿದ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಆಧುನಿಕತೆ ಮತ್ತು ವೈಚಾರಿಕತೆಯ ಹೆಸರಿನಲ್ಲಿ ಧರ್ಮ ಮತ್ತು ಸಂಸ್ಕೃತಿ ನಾಶಗೊಳ್ಳಬಾರದು. ಹೊತ್ತ ಭೂಮಿ, ಹೆತ್ತ ತಾಯಿ ಎಷ್ಟು ಮುಖ್ಯವೋ ಧರ್ಮವೂ ಅಷ್ಟೇ ಮುಖ್ಯ. ಜೀವನದ ಉಜ್ವಲ ಭವಿಷ್ಯಕ್ಕೆ ಧರ್ಮ ದಿಕ್ಸೂಚಿಯಾಗಿದೆ’ ಎಂದರು.

ADVERTISEMENT

ಉಜ್ಜಯಿನಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಅರಿವು ಮೂಡಿಸುವ ಕೆಲಸ ಗುರುವಿನಿಂದ ಮಾತ್ರ ಸಾಧ್ಯ. ಸಕಲ ಜೀವಾತ್ಮರಿಗೆ ಒಳಿತನ್ನೇ ಬಯಸಿದ ವೀರಶೈವ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು’ ಎಂದರು.

ಸಿಂದಗಿ ಸಾರಂಗಮಠದ ಪ್ರಭು ಸಾರಂಗದೇವ ಶಿವಾಚಾರ್ಯ ಮಾತನಾಡಿ, ‘ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಅಜ್ಞಾನ ಕಳೆಯಲು ಗುರು ಬೇಕು. ಅರಿವು ಆದರ್ಶಗಳನ್ನು ಅರಿಯುವಾತನೆ ನಿಜವಾದ ಗುರು ಎಂದರು.

ಮಾಗಣಗೇರಿ ಬೃಹನ್ಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಆಲೂರು ಹಿರೇಮಠದ ಕೆಂಚವೃಷಭೇಂದ್ರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ 15ಕ್ಕೂ ಹೆಚ್ಚು ಮಠಾಧೀಶರು ಪಾಲ್ಗೊಂಡಿದ್ದರು.

ಸಮಾರಂಭಕ್ಕೂ ಮುನ್ನ ಮಾಗಣಗೇರಾ ಗ್ರಾಮದಲ್ಲಿ ಉಭಯ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ ಸಂಭ್ರಮದಿಂದ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಆಶೀರ್ವಾದ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.