ಕಲಬುರಗಿ: ‘ಲಿಂಗಧಾರಣೆ ಒಂದು ಜಾತಿಗೆ ಸೀಮಿತವಲ್ಲ. ಅದು ನೀತಿಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ರೇಣುಕಾಚಾರ್ಯರು ಮಾದಿಗ ಸಮುದಾಯದ ಮಾತಂಗ ಮಹರ್ಷಿಗೆ ಲಿಂಗದೀಕ್ಷೆ ನೀಡಿದ್ದರು’ ಎಂದು ವಿ.ಕೆ.ಸಲಗರದ ದ್ವಿತೀಯ ಸಾಂಬಶಿವಯೋಗಿ ಶಿವಾಚಾರ್ಯರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಸಮಿತಿ ಸಹಯೋಗದಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಬುಧವಾರ ಆಯೋಜಿಸಲಾಗಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಸಮಾಜಕ್ಕೆ ಲಿಂಗಧಾರಣೆ ಹಾಗೂ ವಿಭೂತಿಧಾರಣೆ ಸಂಸ್ಕೃತಿಯನ್ನು ಪರಿಚಯಿಸಿದವರು ರೇಣುಕಾಚಾರ್ಯರು. 12ನೇ ಶತಮಾನಕ್ಕಿಂತ ಹಿಂದೆ ದೇವರ ದಾಸಿಮಯ್ಯ, ಸರ್ವಜ್ಞ ಸೇರಿ ಹಲವರು ಲಿಂಗಧಾರಣೆ ಮಾಡುತ್ತಿದ್ದರು ಎನ್ನುವುದೇ ಇದಕ್ಕೆ ದೊಡ್ಡ ಉದಾಹರಣೆ’ ಎಂದರು.
‘ಪರಮಾತ್ಮನ ಪಂಚಮುಖಗಳಲ್ಲಿ ಆವಿರ್ಭವಿಸಿದ ರೇಣುಕಾಚಾರ್ಯರು ಮನುಕುಲದ ಉದ್ಧಾರಕರು. ಮನುಷ್ಯನು ಇನ್ನೂ ನಾಗರಿಕತೆಗೆ ತೆರೆದುಕೊಳ್ಳದ ಕಾಲದಲ್ಲಿ ರೇಣುಕಾಚಾರ್ಯರು ಕೃಷಿ ಕಾಯಕ ಪರಿಚಯಿಸಿದರು. ಅವರು ಈ ನೆಲದ ಮೊದಲ ರೈತ. ನಾಗರಿಕತೆ, ಮಾನವೀಯ ಮೌಲ್ಯಗಳು ಇರದ ಕಾಲದಲ್ಲಿ ಎಲ್ಲರನ್ನೂ ಒಗ್ಗೂಡಿಸಿದ್ದರು. ವಿಶ್ವ ಶಾಂತಿಗೆ ಕೊಡುಗೆ ನೀಡಿದ್ದರು’ ಎಂದು ಹೇಳಿದರು.
‘ಶ್ರೀರಾಮನಿಗೆ ಆದಿತ್ಯ ಹೃದಯ ಸ್ತೋತ್ರ ಉಪದೇಶ ಮಾಡಿದ ಅಗಸ್ತ್ಯ ಮಹರ್ಷಿಗೆ ರೇಣುಕಾಚಾರ್ಯರು ಗುರುಗಳಾಗಿದ್ದರು. ಅಲ್ಲದೆ, ಮಹರ್ಷಿಗೆ ಸಿದ್ಧಾಂತ ಶಿಖಾಮಣಿ ಬೋಧಿಸಿದರು’ ಎಂದರು.
ಮಹಾನಗರ ಪಾಲಿಕೆ ಮೇಯರ್ ಯಲ್ಲಪ್ಪ ನಾಯಕೊಡಿ ಮಾತನಾಡಿ, ‘ರೇಣುಕಾಚಾರ್ಯರು ಕ್ರಾಂತಿ ಪುರುಷರಾಗಿದ್ದರು. ಸಮಾನತೆಗಾಗಿ ಶ್ರಮಿಸಿದ್ದರು. ಎಲ್ಲರೂ ಅವರ ತತ್ವ–ಸಿದ್ಧಾಂತ ಅಳವಡಿಸಿಕೊಳ್ಳಬೇಕು. ಅವರನ್ನು ಪ್ರತಿದಿನ ಸ್ಮರಿಸಬೇಕು. ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು. ಸಮಾಜಮುಖಿಯಾಗಿ ಚಿಂತಿಸಬೇಕು’ ಎಂದು ಹೇಳಿದರು.
‘ಸಮಾಜದಲ್ಲಿ ಸಹೋದರತ್ವದಿಂದ ಬದುಕಿ ಇತರರಿಗೆ ಮಾದರಿಯಾಗೋಣ. ಮಹನೀಯರ ದಾರಿಯಲ್ಲಿ ನಡೆದು ಸಮೃದ್ಧ ಜೀವನ ಸಾಗಿಸೋಣ’ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಸನ್ಮಾನಿಸಲಾಯಿತು.
ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು, ಆಳಂದ ಹಿರೇಮಠದ ಸಿದ್ದಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಗದ್ಗುರು ರೇಣುಕಾಚಾರ್ಯ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರುದ್ರಮುನಿ ಮಠಪತಿ ಅಧ್ಯಕ್ಷತೆ ವಹಿಸಿದ್ದರು.
ತಹಶೀಲ್ದಾರ್ ಗಂಗಾಧರ ಪಾಟೀಲ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಯಾನಂದ ಪಾಟೀಲ, ಸಮಿತಿಯ ಮಹಿಳಾ ಅಧ್ಯಕ್ಷೆ ಶರಣಮ್ಮ ಹಿರೇಮಠ, ಉದ್ಯಮಿಗಳಾದ ಸುನೀಲ ಪಾಟೀಲ ಸರಡಗಿ, ವಿಜಯ ರಾಠೋಡ ಸೇರಿದಂತೆ ಹಲವರು ಹಾಜರಿದ್ದರು.
ರೇಣುಕಾಚಾರ್ಯ ಜಯಂತಿ ಪ್ರಯುಕ್ತ ಮೆರವಣಿಗೆ ನಡೆಯಿತು
ಬ್ಯಾನರ್ ತೆರವು: ಪ್ರತಿಭಟನೆ
ರೇಣುಕಾಚಾರ್ಯರ ಜಯಂತಿ ಪ್ರಯುಕ್ತ ಮಹಾನಗರ ಪಾಲಿಕೆಯಿಂದ ಪರವಾನಗಿ ಪಡೆದು ನಗರದ ಜಗತ್ ವೃತ್ತದಲ್ಲಿ ಅಳವಡಿಸಿದ್ದ ಬ್ಯಾನರ್ ಅನ್ನು ಪಾಲಿಕೆ ಸಿಬ್ಬಂದಿ ತೆರವು ಮಾಡಿದ್ದಾರೆ ಎಂದು ಆರೋಪಿಸಿ ವೀರಶೈವ ಲಿಂಗಾಯತ ಸಮಾಜದವರು ಜಗತ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಬ್ಯಾನರ್ ತೆರವು ಮಾಡಿದ್ದಾರೆ. ವಿದ್ಯುತ್ ದೀಪಾಲಂಕಾರ ಮಾಡಲು ಬಿಟ್ಟಿಲ್ಲ. ಪಾಲಿಕೆ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪಾಲಿಕೆ ಆಯುಕ್ತ ಅವಿನಾಶ ಶಿಂದೆ ‘ಪರವಾನಗಿ ಪಡೆದು ಅಳವಡಿಸಿದ ಬ್ಯಾನರ್ ತೆರವು ಮಾಡಿದ್ದು ತಪ್ಪು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು. ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಮೂರ್ತಿ ಮೆರವಣಿಗೆ
ಜಯಂತಿ ಅಂಗವಾಗಿ ನಗರದ ಸೂಪರ್ ಮಾರುಕಟ್ಟೆಯಲ್ಲಿರುವ ಚೌಕ್ ಪೊಲೀಸ್ ಠಾಣೆಯಿಂದ ವೀರಶೈವ ಕಲ್ಯಾಣ ಮಂಟಪದವರೆಗೂ ರೇಣುಕಾಚಾರ್ಯರ ಮೂರ್ತಿ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಮಹಿಳೆಯರು ಕುಂಭ–ಕಳಸ ಹೊತ್ತು ಪಾಲ್ಗೊಂಡಿದ್ದರು. ಸಮಾಜದವರು ಪಂಚಪೀಠಗಳ ಧ್ವಜ ಹಿಡಿದು ರೇಣುಕಾಚಾರ್ಯರ ಪರ ಘೋಷಣೆ ಕೂಗಿದರು. ಪಂಚಾಚಾರ್ಯರ ವೇಷ ಧರಿಸಿದ್ದ ಮಕ್ಕಳು ಗಮನಸೆಳೆದರು. ಹಲಗೆ ಹಾಗೂ ಬಾಜಾ–ಭಜಂತ್ರಿ ಮೆರವಣಿಗೆಯ ಕಳೆ ಹೆಚ್ಚಿಸಿದವು. ಪುರವಂತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.