ಕಲಬುರಗಿ: 77ನೇ ಗಣರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ಇದಕ್ಕೂ ಮುನ್ನ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.
ನಂತರ ಪೊಲೀಸ್, ಅರಣ್ಯ ದಳ, ಅಗ್ನಿಶಾಮಕ ದಳ, ಗೃಹರಕ್ಷಕ ದಳ, ಸ್ಕೌಟ್ ಅಂಡ್ ಗೈಡ್ಸ್ ಸೇರಿದಂತೆ ಒಟ್ಟು 16 ಪಡೆಗಳಿಂದ ಸಚಿವರು ಗೌರವ ವಂದನೆ ಸ್ವೀಕರಿಸಿದರು.
ನಂತರ ಮಾತನಾಡಿದ ಅವರು, ಸ್ವಾತಂತ್ರ್ಯ ಸಿಕ್ಕ ಬಳಿಕ ಎಲ್ಲರಿಗೂ ಮತಾಧಿಕಾರವೇನೋ ಸಿಕ್ಕಿತು. ಅದರೆ, ಉದ್ಯೋಗ, ಶಿಕ್ಷಣದಲ್ಲಿ ಸಮಾನ ಅವಕಾಶಗಳು ಸಿಗಲಿಲ್ಲ. ಸಾಮಾಜಿಕ, ಆರ್ಥಿಕ ಅವಕಾಶಗಳನ್ನು ಕೊಡುವ ಮೂಲಕ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳಲು ಅವಕಾಶ ಸಿಗಬೇಕಿದ್ದು, ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಮಹಿಳೆಯರು, ಯುವಕರು, ಬಡವರಿಗೆ ಬದುಕು ಕಟ್ಟಿಕೊಳ್ಳಲು ಯೋಜನೆಗಳನ್ನು ರೂಪಿಸಿದೆ. ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಮನರೇಗಾ, ಆಹಾರ ಭದ್ರತಾ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದ್ದೇವೆ. ಮನರೇಗಾ ಕಾಯ್ದೆಯಿಂದಾಗಿ ಗ್ರಾಮಾಂತರ ಪ್ರದೇಶದ ಕೋಟ್ಯಂತರ ಜನರು ಸ್ವಾಭಿಮಾನದಿಂದ ಬದುಕುತ್ತಿದ್ದಾರೆ. ಆದರೆ, ಈಗಿನ ಕೇಂದ್ರ ಸರ್ಕಾರವು ಈ ಕಾಯ್ದೆಯನ್ನು ವಿರೂಪಗೊಳಿಸಿ ಗ್ರಾಮೀಣ ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳಲು ಮುಂದಾಗಿದೆ ಎಂದು ಟೀಕಿಸಿದರು.
'ಮೊದಲು ಮನರೇಗಾ ಕಾಯ್ದೆಯು ಸಂಪೂರ್ಣ ಕೇಂದ್ರ ಸರ್ಕಾರದ ಹೊಣೆಗಾರಿಕೆಯಾಗಿತ್ತು. ಈಗ ರಾಜ್ಯ ಸರ್ಕಾರ ಶೇ 40ರಷ್ಟು ಭರಿಸುವ ಅನಿವಾರ್ಯತೆ ಎದುರಾಗಿದೆ. ಮೊದಲೇ ಕೇಂದ್ರ ಸರ್ಕಾರ ರಾಜ್ಯದ ವರಮಾನದ ಮೂಲಗಳನ್ನು ಕಿತ್ತುಕೊಂಡಿದೆ. ಹೀಗಾಗಿ, ವಿಬಿ ಜಿ ರಾಮ್ ಜಿ ಕಾಯ್ದೆಯಡಿ ರಾಜ್ಯದ ಪಾಲನ್ನು ಭರಿಸುವುದು ದೊಡ್ಡ ಹೊರೆಯಾಗಲಿದೆ' ಎಂದರು.
ಶಾಸಕರಾದ ಅಲ್ಲಮಪ್ರಭು ಪಾಟೀಲ, ಕನೀಜ್ ಫಾತಿಮಾ, ವಿಧಾನಪರಿಷತ್ ಸದಸ್ಯರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಕುಡಾ ಅಧ್ಯಕ್ಷ ಮಜರ್ ಆಲಂಖಾನ್, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಕೆಕೆಆರ್ ಟಿಸಿ ಅಧ್ಯಕ್ಷ ಅರುಣಕುಮಾರ್ ಎಂ. ಪಾಟೀಲ, ಮೇಯರ್ ವರ್ಷಾ ಜಾನೆ, ಉಪಮೇಯರ್ ತೃಪ್ತಿ ಲಾಖೆ, ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಕೆಕೆಆರ್ ಟಿಸಿ ಎಂ.ಡಿ. ಡಾ.ಸುಶೀಲಾ ಬಿ, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ್ ಶಿಂದೆ, ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಪಾಟೀಲ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.