ADVERTISEMENT

ಸಿಎ ನಿವೇಶನ ರದ್ದು ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 14:45 IST
Last Updated 29 ಆಗಸ್ಟ್ 2024, 14:45 IST
ಕೃಷ್ಣಾರೆಡ್ಡಿ
ಕೃಷ್ಣಾರೆಡ್ಡಿ   

ಕಲಬುರಗಿ: ‘ನಗರದ ದರಿಯಾಪುರ– ಕೋಟನೂರು ಯೋಜನೆಯಲ್ಲಿ ಕನ್ನಡ ಶಾಲೆಯನ್ನು ನಿರ್ಮಿಸುವ ಉದ್ದೇಶದಿಂದ ಗೊಲ್ಲಾಳೇಶ್ವರ ವಿದ್ಯಾವರ್ಧಕ ಸಂಘಕ್ಕೆ ಸಿಎ ನಿವೇಶನ ಪಡೆದ ಶಾಸಕ ಅಲ್ಲಮಪ್ರಭು ಪಾಟೀಲ ಅವರು ನಿಯಮ ಉಲ್ಲಂಘಿಸಿ ಬೇರೆ ಕಾಲೇಜಿಗೆ ಆ ಜಾಗವನ್ನು ಬಾಡಿಗೆಯಾಗಿ ನೀಡಿದ್ದಾರೆ. ಅಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಸಿಎ ನಿವೇಶನ ರದ್ದು ಮಾಡಬೇಕು’ ಎಂದು ಜೆಡಿಎಸ್‌ ಮುಖಂಡ ಕೃಷ್ಣಾರೆಡ್ಡಿ ಆಗ್ರಹಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗರಾಭಿವೃದ್ಧಿ ಪ್ರಾಧಿಕಾರವು 2005ರಲ್ಲಿ ಸಿಎ ನಿವೇಶನ ಸಂಖ್ಯೆ 28ಅನ್ನು ಗೊಲ್ಲಾಳೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹಾಗೂ ಈಗಿನ ಶಾಸಕ ಅಲ್ಲಮಪ್ರಭು ಪಾಟೀಲ ಅವರಿಗೆ ಕನ್ನಡ ಶಾಲೆ ನಡೆಸುವ ಉದ್ದೇಶದಿಂದ ಹಂಚಿಕೆ ಮಾಡಿದೆ. ಆದರೆ 2011ರಲ್ಲಿ ಗೊಲ್ಲಾಳೇಶ್ವರ ಶಿಕ್ಷಣ ಸಂಸ್ಥೆ ವತಿಯಿಂದ ಪದವಿಪೂರ್ವ ಕಾಲೇಜು ಹಾಗೂ ಇತರೆ ಶೈಕ್ಷಣಿಕ ಚಟುವಟಿಕೆ ನಡೆಸಲು ಅನುಮತಿ ನೀಡಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಶಾಸಕರು ಪತ್ರ ಬರೆಯುತ್ತಾರೆ. ಉದ್ದೇಶ ಬದಲು ಮಾಡಲು ಅವಕಾಶವಿರುವುದಿಲ್ಲ ಎಂದು ಆಯುಕ್ತರು ಹಿಂಬರಹ ನೀಡಿದ್ದಾರೆ’ ಎಂದು ಹೇಳಿದರು.

‘ಆದರೂ ಸಹ ಕಾನೂನು ಉಲ್ಲಂಘನೆ ಮಾಡಿ ನಳಂದ ವಿದ್ಯಾಸಂಸ್ಥೆಗೆ 10 ವರ್ಷಗಳಿಂದ ಬಾಡಿಗೆ ನೀಡಿದ್ದಾರೆ. ಗೊಲ್ಲಾಳೇಶ್ವರ ಶಿಕ್ಷಣ ಸಂಸ್ಥೆಗೆ ನೀಡಿದ ನಿವೇಶನವನ್ನು ನಗರಾಭಿವೃದ್ಧಿ ಇಲಾಖೆ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು. ಇಲ್ಲವಾದರೆ ನಗರಾಭಿವೃದ್ಧಿ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಸುನಿಲ್‌ ಗಾಜರೆ, ಸಂಜೀವಕುಮಾರ್, ಜಾಕೀರ್‌ ಹುಸೇನ್‌ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.