ADVERTISEMENT

ನೈಟ್‌ ಲ್ಯಾಂಡಿಂಗ್‌, ಕಾರ್ಗೊ ಸೇವೆ ಆರಂಭಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2022, 4:32 IST
Last Updated 29 ಡಿಸೆಂಬರ್ 2022, 4:32 IST
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕೈಗಾರಿಕೆ ಮತ್ತು ವಾಣಿಜ್ಯ ಸಮಿತಿ ಪದಾಧಿಕಾರಿಗಳು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಡಾ.ಚಿಲಕಾ ಮಹೇಶ ಅವರಿಗೆ ಮನವಿ ಸಲ್ಲಿಸಿದರು
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕೈಗಾರಿಕೆ ಮತ್ತು ವಾಣಿಜ್ಯ ಸಮಿತಿ ಪದಾಧಿಕಾರಿಗಳು ಕಲಬುರಗಿ ವಿಮಾನ ನಿಲ್ದಾಣದ ನಿರ್ದೇಶಕ ಡಾ.ಚಿಲಕಾ ಮಹೇಶ ಅವರಿಗೆ ಮನವಿ ಸಲ್ಲಿಸಿದರು   

ಕಲಬುರಗಿ: ಬೆಳವಣಿಗೆ ಹೊಂದುತ್ತಿರುವ ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವಿಮಾನ ಸೇವೆ ಹಾಗೂ ಕಾರ್ಗೊ ವಿಮಾನ ಹಾರಾಟಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕೈಗಾರಿಕೆ ಮತ್ತು ವಾಣಿಜ್ಯ ಸಮಿತಿ ಪದಾಧಿಕಾರಿಗಳು ವಿಮಾನ ನಿಲ್ದಾಣದ ನಿರ್ದೇಶಕರಿಗೆ ಮನವಿ ಮಾಡಿದರು.

ವಿಮಾಣ ನಿಲ್ದಾಣದ ಅಭಿವೃದ್ಧಿ ಕುರಿತು ಅಧಿಕಾರಿಗಳ ಜತೆ ಬುಧವಾರ ಸಭೆ ನಡೆಸಿ ಚರ್ಚಿಸಲಾಯಿತು.

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಮರನಾಥ ಪಾಟೀಲ ಮಾತನಾಡಿ, ‘ನಿಲ್ದಾಣದಲ್ಲಿ ರಾತ್ರಿ ವಿಮಾನ ಸೇವೆಯ ಆರಂಭಕ್ಕೆ ಅಧಿಕಾರಿಗಳು ತಾಂತ್ರಿಕ ಕೆಲಸಗಳನ್ನು ಪೂರ್ಣಗೊಳಿಸಬೇಕು. ಈಗಾಗಲೇ ರನ್‌ವೇ ಲೈಟಿಂಗ್ ಅಳವಡಿಕೆ ಕಾರ್ಯ ಮುಕ್ತಾಯವಾಗಿದೆ. ಮುಂದಿನ ಪ್ರಕ್ರಿಯೆಗಳನ್ನು ಮುಗಿಸಿ, ನೈಟ್‌ ಲ್ಯಾಂಡಿಂಗ್‌ ಅನುಮತಿಗಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ(ಡಿಜಿಸಿಎ) ಮನವಿ ಸಲ್ಲಿಸುವಂತೆ’ ನಿಲ್ದಾಣದ ನಿರ್ದೇಶಕರಿಗೆ ಮನವಿ ಮಾಡಿದರು.

ADVERTISEMENT

‘ದೆಹಲಿ ಮಟ್ಟದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿ ತ್ವರಿತವಾಗಿ ನೈಟ್ ಲ್ಯಾಂಡಿಂಗ್‌ ಸೇವೆಗೆ ಅನುಮತಿ ಕೊಡುವಂತೆ ಕೋರುತ್ತೇವೆ. ಅಗತ್ಯಬಿದ್ದರೆ ಜನಪ್ರತಿನಿಧಿಗಳ ಗಮನಕ್ಕೆ ತಂದು, ರಾಜಕೀಯ ಒತ್ತಡ ಸಹ ತರಲು ಪ್ರಯತ್ನಿಸುತ್ತೇವೆ. ರಾಜ್ಯದಲ್ಲಿ ಎರಡನೇ ಅತಿ ಉದ್ದದ ರನ್‌ವೇ ಎಂಬ ಹೆಗ್ಗಳಿಕೆ ಹೊಂದಿರುವ ಕಲಬುರಗಿ ನಿಲ್ದಾಣವು ಸಮರ್ಪಕವಾಗಿ ಬಳಕೆ ಆಗಬೇಕು. ಕಲಬುರಗಿ ಹಾಗೂ ಸುತ್ತಲಿನ ಜಿಲ್ಲೆಗಳ ಪ್ರಯಾಣಿಕರು ಇದರ ಗರಿಷ್ಠ ಲಾಭ ಪಡೆಯಬೇಕು’ ಎಂದರು.

‘ಸ್ಥಳೀಯವಾಗಿ ಉತ್ಪಾದನೆಯಾಗುವ ಕೃಷಿ, ಕರಕುಶಲ, ವಾಣಿಜ್ಯ ಸರಕುಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾರಕಟ್ಟೆ ಸಿಗುವಂತೆ ಆಗಲು ಕಾರ್ಗೊ ಸೇವೆ ಆರಂಭಿಸಬೇಕು. ಜತೆಗೆ ಇನ್‌ಲ್ಯಾಂಡ್‌ ಕಂಟೇನರ್‌ ಡಿಪೊದ(ಐಸಿಡಿ) ಪ್ರಾದೇಶಿಕ ಕಚೇರಿ ನಿರ್ಮಾಣವಾದರೆ ಭಾರತದ ವಿದೇಶಿ ವ್ಯಾಪಾರದಲ್ಲಿ ಜಿಲ್ಲೆಯ ಸರಕು ಮತ್ತು ಉತ್ಪನ್ನಗಳಿಗೆ ನೇರ ಮಾರುಕಟ್ಟೆ ಸಿಗಲಿದೆ. ಚೆನ್ನೈ, ಮುಂಬೈ, ವಿಶಾಖಪಟ್ಟಣಂನಂತಹ ಐಸಿಡಿ ಕೇಂದ್ರಗಳ ಮೇಲಿನ ಅವಲಂಬನೆ ತಪ್ಪಲಿದೆ’ ಎಂದರು.

‘ಕೋವಿಡ್‌ ಕಾರಣದಿಂದ ಕಾರ್ಗೊ ಸೇವೆ ರದ್ದಾದ ನಂತರ ಮತ್ತೆ ಪ್ರಾರಂಭವಾಗಿಲ್ಲ. ಭೌಗೋಳಿಕ ಸೂಚಿಕೆ(ಜಿಐ) ಹೊಂದಿರುವ ತೊಗರಿ ಬೇಳೆ, ರಾಯಚೂರಿನ ಎಣ್ಣೆಕಾಳುಗಳು, ಭತ್ತ, ಬ್ಯಾಡಗಿಯ ಮೆಣಸಿನಕಾಯಿ, ವಿಜಯಪುರದ ದ್ರಾಕ್ಷಿ ಉತ್ಪನ್ನ ವಿದೇಶಗಳಿಗೆ ತ್ವರಿತವಾಗಿ ರಪ್ತು ಮಾಡಬಹುದು’ ಎಂದು ಹೇಳಿದರು.

ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ಮಹೇಶ ಚಿಲ್ಕಾ ಮಾತನಾಡಿ, ‘ಕಳೆದ ಮೂರು ವರ್ಷಗಳಲ್ಲಿ ವಿಮಾನ ನಿಲ್ದಾಣವು ಸಾಕಷ್ಟು ಅಭಿವೃದ್ಧಿ ಹೊಂದಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣಲಿದೆ. ಸಭೆಯಲ್ಲಿ ನೀಡಿದ ಮನವಿ ಮತ್ತು ಸಲಹೆಗಳನ್ನು ಜಾರಿಗೆ ತರಲು ಮೇಲಾಧಿಕಾರಿಗಳ ಜತೆಗೆ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.

ಸಭೆಯಲ್ಲಿಸಂಚಾಲಕ ಆನಂದ ದಂಡೋತಿ, ಮುಖಂಡರಾದ ಎಂ.ಎಸ್.ಪಾಟೀಲ ನರಿಬೋಳ, ರಮೇಶ ಪಾಟೀಲ, ರಮೇಶ ಬಂಧು, ಚಂದ್ರಶೇಖರ ಬಿಜಾಪುರೆ, ಲಿಂಗರಾಜ ಬಾವಿಕಟ್ಟಿ, ಚನ್ನಬಸಯ್ಯ ನಂದಿಕೋಲ್, ಅಭಿಜಿತ್ ಪಡಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.