ವಂಚನೆ–ಪ್ರಾತಿನಿಧಿಕ ಚಿತ್ರ
ಕಲಬುರಗಿ: ವರ್ಷಕ್ಕೆ ಶೇ 12ರ ದರದಲ್ಲಿ ಬಡ್ಡಿ ಪಾವತಿಸುವುದಾಗಿ ಹೇಳಿ ಫೈನಾನ್ಸ್ ಸಂಸ್ಥೆಯೊಂದರಲ್ಲಿ ನಿವೃತ್ತ ನೌಕರರೊಬ್ಬರು ಹಂತ–ಹಂತವಾಗಿ ₹1.30 ಕೋಟಿ ಹೂಡಿಕೆ ಮಾಡಿ ಮೋಸ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂ.ಬಿ.ನಗರದ ಲಕ್ಷ್ಮಿ ದೇವಸ್ಥಾನ ಪ್ರದೇಶದ ನಿವಾಸಿ, ನಿವೃತ್ತ ನೌಕರ ಚಂದ್ರಕಾಂತ ಖೂಬಾ ವಂಚನೆಗೆ ಒಳಗಾದವರು.
‘ಸುವರ್ಣ ಫೈನಾನ್ಸ್ ಸಂಸ್ಥೆಯವರು ಚಂದ್ರಕಾಂತ ಅವರಿಂದ ಮೊದಲ ಹಂತದಲ್ಲಿ 2022ರ ಏಪ್ರಿಲ್ 1ರಂದು ₹30 ಲಕ್ಷ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಬಳಿಕ ಚಂದ್ರಕಾಂತ ಅವರು ಪತ್ನಿ ಹಾಗೂ ಮಗನ ಹೆಸರಿನಲ್ಲಿ ತಲಾ ₹30 ಲಕ್ಷ ಹೂಡಿಕೆ ಮಾಡಿದ್ದಾರೆ. ಅದಾದ ನಂತರ ತಮ್ಮ ಇಬ್ಬರು ಹೆಣ್ಣು ಮಕ್ಕಳ ಹೆಸರಿನಲ್ಲಿ ತಲಾ ₹20 ಲಕ್ಷ ಹೂಡಿಕೆ ಮಾಡಿದ್ದಾರೆ. ಮೊದಲಿಗೆ ನಿಯಮಿತವಾಗಿ ಬಡ್ಡಿ ನೀಡಿದ ಫೈನಾನ್ಸ್ ಸಂಸ್ಥೆಯು 2024ರ ಮಾರ್ಚ್‌ನಿಂದ ಬಡ್ಡಿ ಪಾವತಿ ನಿಲ್ಲಿಸಿದೆ. ಫೈನಾನ್ಸ್ ತುಸು ನಷ್ಟದಲ್ಲಿದ್ದು, ನಂತರ ಬಡ್ಡಿ ಪಾವತಿಸುವುದಾಗಿ ಹೇಳಿದೆ. ಕೆಲವು ದಿನಗಳ ಬಳಿಕ ಚಂದ್ರಕಾಂತ ಹೂಡಿಕೆ ಹಣ ಮರಳಿಸುವಂತೆ ಕೇಳಿದ್ದಾರೆ. ಆಗ ಒಂದಿಷ್ಟು ಹಣವನ್ನು ಸಂಸ್ಥೆ ಮರಳಿಸಿದೆ. ಇನ್ನೂ ₹65 ಲಕ್ಷ ಹಣ ಮರಳಿಸದೇ ಮೋಸ ಮಾಡಲಾಗಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುವರ್ಣ ಫೈನಾನ್ಸ್ ಸಂಸ್ಥೆ ಸೇರಿದಂತೆ ಒಟ್ಟು 16 ಮಂದಿ ವಿರುದ್ಧ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೊಸೈಟಿ ಹಣ, ಚಿನ್ನಾಭರಣ ಕಳವು
ನಗರದ ಹೊರವಲಯದ ಕೋಟನೂರು (ಡಿ) ಸಮೀಪದ ಬಿಎಸ್‌ಎನ್‌ಎಲ್ ಲೇಔಟ್‌ನ ಮನೆಯೊಂದರ ಕೀಲಿ ಮುರಿದ ಕಳ್ಳರು, ಸಹಕಾರ ಸೊಸೈಟಿಯ ರಸಗೊಬ್ಬರ ಖರೀದಿಗೆ ತಂದಿರಿಸಿದ್ದ ₹3 ಲಕ್ಷ ನಗದು ಹಾಗೂ ₹1.74 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ.
ಹಾಗರಗುಂಡಗಿ ಕೋಆಪರೇಟಿವ್ ಸೊಸೈಟಿ ಕಾರ್ಯದರ್ಶಿ ಸಿದ್ರಾಮರೆಡ್ಡಿ ನಗದು, ಚಿನ್ನಾಭರಣ ಕಳೆದುಕೊಂಡವರು.
‘ಸಿದ್ರಾಮರೆಡ್ಡಿ ಅವರು ಮನೆ ಕೀಲಿ ಹಾಕಿಕೊಂಡು ಪತ್ನಿ ಸಮೇತ ಜುಲೈ27ರಂದು ಸಂಜೆ 4.30ಕ್ಕೆ ನಾಗರ ಪಂಚಮಿ ಆಚರಿಸಲು ಸ್ವಗ್ರಾಮವಾದ ಕವಲಗಾ(ಕೆ) ಗ್ರಾಮಕ್ಕೆ ಹೋಗಿದ್ದರು. ಜುಲೈ 28ರಂದು ನೇರವಾಗಿ ಸೊಸೈಟಿ ಕೆಲಸಕ್ಕೆ ಹೋಗಿದ್ದರು. ಸಂಜೆ ಕಲಬುರಗಿಯಲ್ಲಿರುವ ಮನೆಗೆ ಹೋದಾಗ ಕಳವು ನಡೆದಿರುವುದು ತಿಳಿದು ಬಂದಿದೆ. ಸೊಸೈಟಿಗೆ ರಸಗೊಬ್ಬರ ಖರೀದಿಸಲು ನಗದು ತಂದು ಮನೆಯಲ್ಲಿ ಇರಿಸಲಾಗಿತ್ತು’ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕಕರಣ ದಾಖಲಾಗಿದೆ.
ಇಸ್ಪೀಟ್ ಜೂಜಾಟ: 28 ಮಂದಿ ವಿರುದ್ಧ ಪ್ರಕರಣ
ಕಲಬುರಗಿಯ ಆರ್.ಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿಧೆಡೆ ದಾಳಿ ನಡೆಸಿದ ಪೊಲೀಸರು ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಟ್ಟು 28 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ದಾಳಿಯಲ್ಲಿ ಮೂರು ಪ್ರಕರಣಗಳು ಸೇರಿದಂತೆ ಒಟ್ಟು ₹28,690 ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
40 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿ
ಬೈಕ್ ಹಿಂಬದಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ 40 ಗ್ರಾಂ ತೂಕದ ಬಂಗಾರ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಲಾಲಗೇರಿ ಕ್ರಾಸ್ ಸಮೀಪದ ಜನತಾ ಲೇಔಟ್ ನಿವಾಸಿ ರೂಪಾ ಕಿರಾಣಿ ಚಿನ್ನದ ಸರ ಕಳೆದುಕೊಂಡವರು. ‘ನಗರದ ಗ್ರ್ಯಾಂಡ್ ಹೊಟೇಲ್ ಮುಂಭಾಗದಿಂದ ಸಾರ್ವಜನಿಕ ಉದ್ಯಾನ ಮಾರ್ಗವಾಗಿ ಲೋಕೋಪಯೋಗಿ ಇಲಾಖೆಯ ಕಚೇರಿ ಮೇನ್ ಗೇಟ್ ಮುಂಭಾಗ ರಸ್ತೆ ಮೂಲಕ ಎನ್.ವಿ ಕಾಲೇಜು ಕಡೆಗೆ ಬೈಕ್‌ನ ಹಿಂಬದಿ ಕುಳಿತು ಹೋಗುತ್ತಿದ್ದಾಗ ಹಿಂದಿನಿಂದ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ₹3.50 ಲಕ್ಷ ಮೌಲ್ಯದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಕಳವು
ಹಣ್ಣು ಹಾಗೂ ತರಕಾರಿ ಖರೀದಿಸಿ ಬರುವಷ್ಟರಲ್ಲಿ ನಗರ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳರು ಕದ್ದಿದ್ದಾರೆ.
ಕಾಳಗಿ ತಾಲ್ಲೂಕಿನ ಪೇಠಶಿರೂರ ಗ್ರಾಮದ ರಮೇಶ ರಾಯಕೋಡ ಬೈಕ್ ಕಳೆದುಕೊಂಡವರು.
‘ಜುಲೈ 25ರಂದು ಮಧ್ಯಾಹ್ನ 2.10ಕ್ಕೆ ಸೂಪರ್ ಮಾರ್ಕೆಟ್‌ನಲ್ಲಿ ಬೈಕ್ ನಿಲ್ಲಿಸಿ ಹಣ್ಣು, ತರಕಾರಿ ಖರೀದಿಸಲು ಹೋಗಿದ್ದಾರೆ. ಮರಳಿ ಮಧ್ಯಾಹ್ನ 3.30ಕ್ಕೆ ಬಂದಾಗ ಬೈಕ್ ಕಳುವಾಗಿತ್ತು’ ಎಂದು ದೂರಿನಲ್ಲಿ ರಮೇಶ ತಿಳಿಸಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.