ADVERTISEMENT

ರೇವಗ್ಗಿ ರೇವಣಸಿದ್ದೇಶ್ವರ ಬೆಳ್ಳಿಪಲ್ಲಕ್ಕಿ ಉತ್ಸವ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2024, 15:59 IST
Last Updated 19 ಆಗಸ್ಟ್ 2024, 15:59 IST
ಕಾಳಗಿ ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ಗುಡ್ಡದಲ್ಲಿ ಸೋಮವಾರ ಸಂಜೆ ಬೆಳ್ಳಿಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು
ಕಾಳಗಿ ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ಗುಡ್ಡದಲ್ಲಿ ಸೋಮವಾರ ಸಂಜೆ ಬೆಳ್ಳಿಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ಜರುಗಿತು   

ಕಾಳಗಿ: ಧಾರ್ಮಿಕ ದತ್ತಿ ಇಲಾಖೆಯ, ಕಲ್ಯಾಣ ಕರ್ನಾಟಕದ ಪ್ರಸಿದ್ಧ ಶ್ರದ್ಧಾ ಕೇಂದ್ರವಾಗಿರುವ ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ (ರಟಕಲ್‌) ರೇವಣಸಿದ್ದೇಶ್ವರ ಗುಡ್ಡದ ಜಾತ್ರೆ ಸೋಮವಾರ ಅದ್ಧೂರಿಯಾಗಿ ಜರುಗಿತು.

ರಾಜ್ಯ, ಹೊರರಾಜ್ಯಗಳಿಂದ ಬೆಳಿಗ್ಗೆಯಿಂದಲೇ ಗುಡ್ಡದ ಕಡೆಗೆ ಮುಖಮಾಡಿದ್ದ ಸಹಸ್ರಾರು ಭಕ್ತರು ದೇವಸ್ಥಾನದಲ್ಲಿ ಕಾಯಿ–ಕರ್ಪೂರ, ನೈವೇದ್ಯ, ಹೂಹಾರ ಸಲ್ಲಿಸಿ ವಿಶೇಷ ಪೂಜೆಯೊಂದಿಗೆ ಭಕ್ತಿ ಸಮರ್ಪಿಸಿದರು.

ಬೆಳಿಗ್ಗೆ ರೇವಗ್ಗಿ, ರಟಕಲ್, ಮುಕರಂಬಾ, ಬೆಡಸೂರ, ಕಂದಗೂಳ, ಗೊಣಗಿ, ಮಾವಿನಸೂರ ಭಕ್ತರು ಆಗಮಿಸಿ ವಾದ್ಯಮೇಳದೊಂದಿಗೆ ಚನ್ನಬಸಪ್ಪ ದೇವರಮನಿ ಅವರಲ್ಲಿಗೆ ತೆರಳಿ ಮೆರವಣಿಗೆ ಮೂಲಕ ಉತ್ಸವ ಮೂರ್ತಿ ದೇವಸ್ಥಾನಕ್ಕೆ ತಂದು ವಿಶೇಷ ಅಭಿಷೇಕ ಮಾಡಿ ಹರಕೆ ಸಲ್ಲಿಸಿದರು.

ADVERTISEMENT

ಮಧ್ಯಾಹ್ನ ರಟಕಲ್ ಗ್ರಾಮದ ನಡುವಿನ ಮಠದಿಂದ ಭಕ್ತರ ಭಜನಾ ಮಂಡಳಿ ಗುಡ್ಡಕ್ಕೆ ತಲುಪಿ ಪೂಜೆ ಮಾಡಿದರು. ಬಳಿಕ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಸೇಡಂ ಉಪವಿಭಾಗಾಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ನಾಗನಾಥ ತರಗೆ ನೇತೃತ್ವದಲ್ಲಿ ರಟಕಲ್ ಹಿರೇಮಠದ ರೇವಣಸಿದ್ಧ ಶಿವಾಚಾರ್ಯರು, ರೇವಣಸಿದ್ಧ ಶರಣರ ಸಮ್ಮುಖದಲ್ಲಿ ಮಹಾಮಂಗಳಾರತಿ ನೆರವೇರಿತು.

ಸಂಜೆಯಾಗುತ್ತಿದ್ದಂತೆ ಭಕ್ತರ ಜೈಘೋಷಗಳ ನಡುವೆ ದೇವಸ್ಥಾನದಿಂದ ಹೊರಬಂದ ಅಲಂಕೃತ ಬೆಳ್ಳಿಪಲ್ಲಕ್ಕಿಯು ಗುಡ್ಡದಲ್ಲಿ ಎರಡು ಸುತ್ತು ಪ್ರದಕ್ಷಿಣೆ ಹಾಕಿತು. ನೆರೆದಿದ್ದ ಅಪಾರ ಭಕ್ತರು ಹೂವು, ಉತ್ತತ್ತಿ, ಬಾಳೆಹಣ್ಣು ಪಲ್ಲಕ್ಕಿ ಮೇಲೆ ತೂರಿ ಕೈಮುಗಿದು ನಮಿಸಿ ಕೃತಾರ್ಥರಾದರು.

ಪಲ್ಲಕ್ಕಿ ಉತ್ಸವದ ಸಮಯವಾಗುತ್ತಿದ್ದಂತೆ ಗುಡ್ಡ ಮತ್ತು ಸುತ್ತಲಿನ ಎಲ್ಲೆಡೆ ಧಾರಾಕಾರ ಮಳೆ ಸುರಿಯಿತು. ದೇವಸ್ಥಾನ ಸಮಿತಿ ಜತೆಯಲ್ಲೇ ಅನೇಕ ಭಕ್ತರು ಗುಡ್ಡದ ಸುತ್ತ ಎಲ್ಲೆಂದರಲ್ಲಿ ಅನ್ನದಾಸೋಹ ಸೇವೆ ಸಲ್ಲಿಸಿದರು. ಗುಡ್ಡದಿಂದ ಕಂದಗೂಳ ಕ್ರಾಸ್, ಬೆಡಸೂರ, ಅರಣಕಲ್, ಮಾವಿನಸೂರ ಮಾರ್ಗದಲ್ಲಿ ವಾಹನಗಳ ದಟ್ಟಣೆ ಏರ್ಪಟ್ಟು ವಾಹನ ಸವಾರರು, ಭಕ್ತರು ಅರ್ಧತಾಸಿಗೂ ಹೆಚ್ಚು ಪರದಾಡಿದರು.

ಸುತ್ತಲಿನ ಎಲ್ಲಾ ಬಸ್ ಘಟಕಗಳಿಂದ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಶಹಾಬಾದ್‌ ಡಿವೈಎಸ್ಪಿ ಶಂಕರಗೌಡ ಪಾಟೀಲ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಕಾಳಗಿ ಪಿಎಸ್ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಪೊಲೀಸರು ಬಂದೋಬಸ್ತ್ ಮಾಡಿದ್ದರು. 

ಕಾಳಗಿ ತಾಲ್ಲೂಕಿನ ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ರೇವಣಸಿದ್ಧೇಶ್ವರ ಜಾತ್ರೆ ಪ್ರಯುಕ್ತ ಸೋಮವಾರ ವಾಹನದಟ್ಟಣೆ ಏರ್ಪಟ್ಟು ಭಕ್ತರು ಪರದಾಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.