ADVERTISEMENT

ಆಳಂದ: ರೇವಣಸಿದ್ದರ ಶಿಲಾಮೂರ್ತಿಯ ಅಂಬಾರಿ ಉತ್ಸವ

ಶರಣಮಂಟಪದಲ್ಲಿ ಅಮೃತ ಮಹೋತ್ಸವದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 7:23 IST
Last Updated 15 ಡಿಸೆಂಬರ್ 2025, 7:23 IST
ಆಳಂದದ ಶರಣಮಂಟಪದಲ್ಲಿ ಸದ್ಗುರು ರೇವಣಸಿದ್ದ ಶಿವಶರಣರ ಅಮೃತ ಮಹೋತ್ಸವದ ಅಂಗವಾಗಿ ಆನೆ ಮೇಲೆ ರೇವಣಸಿದ್ಧರ ಶಿಲಾ ಮೂರ್ತಿ ಮೆರವಣಿಗೆ ಜರುಗಿತು
ಆಳಂದದ ಶರಣಮಂಟಪದಲ್ಲಿ ಸದ್ಗುರು ರೇವಣಸಿದ್ದ ಶಿವಶರಣರ ಅಮೃತ ಮಹೋತ್ಸವದ ಅಂಗವಾಗಿ ಆನೆ ಮೇಲೆ ರೇವಣಸಿದ್ಧರ ಶಿಲಾ ಮೂರ್ತಿ ಮೆರವಣಿಗೆ ಜರುಗಿತು   

ಆಳಂದ: ಪಟ್ಟಣದ ಶರಣನಗರದ ಶರಣಮಂಟಪದ ಭಕ್ತರ ಹರ್ಷೋದ್ಘಾರ, ಶ್ರದ್ಧಾಭಕ್ತಿಯ ನಡುವೆ ಭಾನುವಾರ ಪಟ್ಟಣದ ಮುಖ್ಯಬೀದಿಗಳಲ್ಲಿ ಸದ್ಗುರು ರೇವಣಸಿದ್ಧರ ಶಿವಶರಣರ ಶಿಲಾ ಮೂರ್ತಿಯ ಅಂಬಾರಿ ಮೆರವಣಿಗೆಯು ಸಂಭ್ರಮದಿಂದ ಜರುಗಿತು.

ಪೀಠಾಧಿಪತಿ ಚೆನ್ನಬಸವ ಪಟ್ಟದೇವರ ನೇತೃತ್ವದಲ್ಲಿ ಶರಣಮಂಟಪದಲ್ಲಿ ವಿವಿಧ ಧಾರ್ಮಿಕ ಪೂಜೆ, ಅಭಿಷೇಕ ಕೈಂಕರ್ಯ ಕೈಗೊಳ್ಳಲಾಯಿತು. ಸದ್ಗುರು ರೇವಣಸಿದ್ದರ ಶಿಲಾಮೂರ್ತಿಯನ್ನು ಕಡಗಂಚಿಯ ಪಟ್ಟದ ಆನೆ ಮೇಲೆ ಕುಳ್ಳರಿಸಿದಾಗ ಭಕ್ತರು ಪುಷ್ಪವೃಷ್ಟಿ ಸುರಿಸಿ, ಜೈ ಘೋಷ ಮೊಳಗಿಸಿದರು.

ರಾಜಗಾಂಭೀರ್ಯದಲ್ಲಿ ನಡೆದ ಆನೆ ನಡಿಗೆಯ ಮುಂದೆ ಕೋಲಾಟ, ಲಂಬಾಣಿ ನೃತ್ಯ, ವಿವಿಧ ಕಲಾತಂಡಗಳ ಕುಣಿತ ಹಾಗೂ ಛದ್ಮವೇಷಧಾರಿಗಳ ಕುಣಿತ ಮತ್ತು ಅಕ್ಕಮಹಾದೇವಿ, ಸಿದ್ಧಾರೂಢರ ಭಜನೆ ತಂಡಗಳಿಂದ ಓಂನಾಮ ಸ್ಮರಣೆ, ಗಾಯನವು ಉತ್ಸವಕ್ಕೆ ಕಳೆ ಕಟ್ಟಿತು.

ADVERTISEMENT

ನೂರಾರೂ ಸಂಖ್ಯೆಯಲ್ಲಿ ಮಹಿಳೆಯರು ಹಳದಿ ಸೀರೆ ತೊಟ್ಟು ಕುಂಬಕಲಶ ಹೊತ್ತು ಮೆರವಣಿಗೆಗೆ ಸಾಥ್‌ ನೀಡಿದರು. ಮುಖ್ಯಬೀದಿಗಳಲ್ಲಿ ಹೊರಟ ಗುರು ಸಿದ್ಧಾರೂಢರ ಪಲ್ಲಕ್ಕಿ, ಸದ್ಗುರು ಗುರುನಾಥರೂಡರ ಪಲ್ಲಕ್ಕಿ ಹಾಗೂ ರೇವಣಸಿದ್ದರ ಶಿಲಾಮೂರ್ತಿಗೆ ವಿಶೇಷ ಆರತಿ ಬೆಳಗಿದರು. ಪುಷ್ಪವೃಷ್ಟಿಗೈದು ತಮ್ಮ ಭಕ್ತಿ, ಹರಕೆ ತೀರಿಸಲಾಯಿತು.

ಮಧ್ಯಾಹ್ನ ಶರಣಮಂಟಪದಿಂದ ಆರಂಭಗೊಂಡ ಮೆರವಣಿಗೆಯು ಮಹಾದೇವಮಂದಿರ, ಶ್ರೀರಾಮ ಮಾರುಕಟ್ಟೆ, ಬಸ್‌ ನಿಲ್ದಾಣ, ರಜ್ವಿ ರಸ್ತೆ, ಹಳೆಯ ತಹಶೀಲ್ದಾರ್‌ ಮಾರ್ಗ, ಚಕ್ರಿಕಟ್ಟಾ, ಹನುಮಾನ ಮಂದಿರ ಮಾರ್ಗವಾಗಿ ಗೋಧೂಳಿ ಸಮಯದಲ್ಲಿ ಶರಣನಗರ ತಲುಪಿತು.

ಪೀಠಾಧಿಪತಿ ಚೆನ್ನಬಸವ ಪಟ್ಟದೇವರು, ಗೌರವಾಧ್ಯಕ್ಷ ಸೂರ್ಯಕಾಂತ ತಟ್ಟಿ, ಸಿದ್ದಾರೂಢ ಕಂಠೇ, ಶ್ರೀಶೈಲ ಉಳ್ಳೆ, ಸತೀಶ ಸನ್ಮುಖ, ನಾಗರಾಜ ಜುಳಜುಳೆ, ಸುಭಾಷ ಬಳೂರ್ಗಿ, ಚಂದ್ರಕಾಂತ ಜವಳಿ, ಉಮೇಶ ಹಿಪ್ಪರಗಿ, ರಾಜಕುಮಾರ ಜನವೇರಿ, ಶರಣಪ್ಪ ಘಸನೆ, ಗುರುನಾಥ ಬಾವಿ, ಕಲ್ಯಾಣಿ ಬಿಜ್ಜರಗಿ, ಮಲ್ಲಿನಾಥ ವಚ್ಚೆ ಉಪಸ್ಥಿತರಿದ್ದರು.

ಈ ಮೊದಲು ಶರಣಮಂಟಪದಲ್ಲಿನ 63 ಶಿವಶರಣರ ಶಿಲಾಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ಭಕ್ತರಿಂದ 110 ತುಲಾಭಾರ ಸೇವೆಯು ಕೈಗೊಳ್ಳಲಾಯಿತು. ಭಕ್ತರ ಜೈಘೋಷ, ಉತ್ಸಾಹದ ನಡುವೆ ಪಲ್ಲಕ್ಕಿ ಮೆರವಣಿಗೆ, ಅಂಬಾರಿ ಉತ್ಸವದಲ್ಲಿ ಅಧಿಕ ಸಂಖ್ಯೆಯಲ್ಲಿ ಆಳಂದ ಸೇರಿದಂತೆ ಮಾದನ ಹಿಪ್ಪರಗಿ, ಹಿರೋಳ್ಳಿ, ಮೈಂದರ್ಗಿ, ಅಂಬಲಗಾ, ಯಳಸಂಗಿ ಗ್ರಾಮ ಮತ್ತು ಸೋಲಾಪುರ, ಅಕ್ಕಲಕೋಟ, ಮೈಂದರ್ಗಿ, ಕಲಬುರಗಿ ಪಟ್ಟಣದ ಭಕ್ತರು ಪಾಲ್ಗೊಂಡಿದ್ದರು.

ಆಳಂದದಲ್ಲಿ ಸದ್ಗುರು ರೇವಣಸಿದ್ಧ ಶಿವಶರಣರ ಶಿಲಾ ಮೂರ್ತಿಯ ಮೆರವಣಿಗೆಯು ಅದ್ದೂರಿಯಾಗಿ ಜರುಗಿತು
ಆಳಂದದ ಶರಣಮಂಟಪದಲ್ಲಿ ಸದ್ಗುರು ರೇವಣಸಿದ್ಧ ಶಿವಶರಣರ ಅಮೃತ ಮಹೋತ್ಸವದಲ್ಲಿ ಗುಳೆದಗುಡ್ಡದ ಬಸವರಾಜ ಪಟ್ಟದೇವರು ಮಾತನಾಡಿದರು. ಚೆನ್ನಬಸವ ಪಟ್ಟದೇವರು ಅಭಿನವ ರೇವಣಸಿದ್ದ ಸ್ವಾಮೀಜಿ ಉಪಸ್ಥಿತರಿದ್ದರು
ಆಳಂದದಲ್ಲಿ ಸದ್ಗುರು ರೇವಣಸಿದ್ಧ ಶಿವಶರಣರ ಶಿಲಾ ಮೂರ್ತಿಯ ಮೆರವಣಿಗೆಯು ಅದ್ದೂರಿಯಾಗಿ ಜರುಗಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.