ADVERTISEMENT

ಅಫಜಲಪುರ ವಿಧಾನಸಭೆ ಚುನಾವಣೆ: ಟಿಕೆಟ್‌ಗೆ ಸಹೋದರರ ಸವಾಲ್

ಮಾಲೀಕಯ್ಯ ಗುತ್ತೇದಾರ ವಿರುದ್ಧ ತೊಡೆ ತಟ್ಟಿದ ನಿತಿನ್ ಗುತ್ತೇದಾರ

ಮನೋಜ ಕುಮಾರ್ ಗುದ್ದಿ
Published 13 ಮಾರ್ಚ್ 2023, 0:05 IST
Last Updated 13 ಮಾರ್ಚ್ 2023, 0:05 IST
   

ಕಲಬುರಗಿ: ಜಿಲ್ಲೆಯ ಅಫಜಲಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಪಡೆಯಲು ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಮತ್ತು ಕಿರಿಯ ಸಹೋದರ ನಿತಿನ್ ಗುತ್ತೇದಾರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ನಿತಿನ್‌ ಪರ ಮತ್ತೊಬ್ಬ ಸಹೋದರ ಸತೀಶ್ ಗುತ್ತೇದಾರ ಧ್ವನಿಯೆತ್ತಿದ್ದಾರೆ. ಇದರಿಂದ ಕುಟುಂಬದಲ್ಲಿ ಒಡಕು ಮೂಡಿದೆ.

ವರ್ಷಗಳಿಂದ ನಿತಿನ್ ಕ್ಷೇತ್ರದಲ್ಲಿ ಸುತ್ತಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿರುವುದು ಕಂಡು ತಮ್ಮ ಪರ ಕೆಲಸ ಮಾಡುತ್ತಿದ್ದಾರೆ ಎಂಬ ನಂಬಿಕೆಯಲ್ಲಿ ಮಾಲೀಕಯ್ಯ ಇದ್ದರು. ಆದರೆ, ಕೆಲ ತಿಂಗಳ ಹಿಂದೆ ನಿತಿನ್ ತಮ್ಮ ಬೆಂಬಲಿಗರ ಮೂಲಕ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಆಶಯವನ್ನು ಮಾಲೀಕಯ್ಯ ಅವರಿಗೆ ತಲುಪಿಸಿದ್ದರು.

ಇದರಿಂದ ಸಿಟ್ಟಿಗೆದ್ದ ಮಾಲೀಕಯ್ಯ, ‘ಅಣ್ಣ–ತಮ್ಮನನ್ನು ಪಕ್ಷದವರೇ ದೂರ ಮಾಡುತ್ತಿದ್ದಾರೆ. ನಮ್ಮ ಕುಟುಂಬವನ್ನು ಒಡೆಯಲು ಮುಂದಾಗಿದ್ದಾರೆ’ ಎಂದು ಹರಿಹಾಯ್ದಿದ್ದರು. ಆದರೆ, ಯಾರ ಹೆಸರನ್ನೂ ಹೇಳಿರಲಿಲ್ಲ.

ADVERTISEMENT

ಕಲಬುರಗಿಯಲ್ಲಿ ಗುರುವಾರ ತಮ್ಮ ಬೆಂಬಲಿಗರ ಸಭೆ ನಡೆಸಿದ ನಿತಿನ್, ‘ಈ ಬಾರಿ ನನಗೆ ಟಿಕೆಟ್‌ ಸಿಗುವುದು ಖಚಿತ. ಅಣ್ಣ ಬೆಂಬಲಿಸಬೇಕು’ ಎಂದು ಬಹಿರಂಗವಾಗಿ ಹೇಳಿದ್ದಾರೆ. ಇದಕ್ಕೆ ಮಾಲೀಕಯ್ಯ ಅವರ ಅತ್ಯಾಪ್ತರು ಕೂಡ ದನಿಗೂಡಿಸಿದ್ದಾರೆ.

‘ಪಕ್ಷವು ಒಂದು ವೇಳೆ ಮಾಲೀಕಯ್ಯ ಅವರಿಗೆ ಟಿಕೆಟ್‌ ನೀಡಿದರೆ, ನಾನು ಪಕ್ಷೇತರನಾಗಿ ಸ್ಪರ್ಧಿಸುವೆ’ ಎಂಬ ಸಂದೇಶವನ್ನು ನಿತಿನ್ ಅವರು ತಮ್ಮ ಬೆಂಬಲಿಗರ ಮೂಲಕ ರವಾನಿಸಿದ್ದಾರೆ.

ಈ ಹಿಂದೆ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ ಅವರ ಪಾಳೆಯದಲ್ಲಿ ಗುರುತಿಸಿಕೊಂಡಿದ್ದ ಮಾಲೀಕಯ್ಯ ಅವರು 2018ರಲ್ಲಿ ಬದಲಾದ ರಾಜಕೀಯ ವಾತಾವರಣದಲ್ಲಿ ಬಿಜೆಪಿ ಸೇರ್ಪಡೆಯಾದರು. ಅಫಜಲಪುರ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡರು. ಬಳಿಕ ವಿಧಾನ ಪರಿಷತ್ ಸದಸ್ಯರನ್ನಾಗಿ ವರಿಷ್ಠರು ಆಯ್ಕೆ ಮಾಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಸ್ಥಾನ ಹೊರತುಪಡಿಸಿದರೆ ಬೇರೆ ಯಾವುದೇ ಸ್ಥಾನ ಅವರಿಗೆ ದಕ್ಕಲಿಲ್ಲ.

ಮಾಲೀಕಯ್ಯ ಅವರು ನಾಲ್ಕು ಬಾರಿ ಕಾಂಗ್ರೆಸ್‌ನಿಂದ, ಒಮ್ಮೆ ಜನತಾದಳದಿಂದ, ಇನ್ನೊಮ್ಮೆ ಎಸ್. ಬಂಗಾರಪ್ಪ ಸ್ಥಾಪಿಸಿದ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ (ಕೆಸಿ‍ಪಿ) ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿದ್ದಾರೆ.

‘ಅಣ್ಣ ಮಾಲೀಕಯ್ಯ ಅವರಿಗೆ 68 ವರ್ಷ ವಯಸ್ಸಾಗಿದೆ. ಗುಜರಾತ್ ಮಾದರಿಯಂತೆ ಹಿರಿಯರಿಗೆ ಪಕ್ಷ ಸಂಘಟನೆ ಕೆಲಸ ನೀಡಿ, ಯುವಕರಿಗೆ ಟಿಕೆಟ್ ಕೊಡಬೇಕು. ಅವರು ಪಕ್ಷದ ರಾಜ್ಯ ಉಪಾಧ್ಯಕ್ಷರಾಗಿ ಕಲ್ಯಾಣ ಕರ್ನಾಟಕದ ಕ್ಷೇತ್ರಗಳಲ್ಲಿ ಸಂಚರಿಸಲಿ’ ಎಂದು ನಿತಿನ್ ಗುತ್ತೇದಾರ ತಿಳಿಸಿದರು.

‘ಕೆಲ ಹಿಂಬಾಲಕರ ಮಾತು ಕೇಳಿ ನಿತಿನ್ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ಕೆಲಸ ಮಾಡಲು ನಾನು ಸಿದ್ಧ. ನಿತಿನ್ ಸಹ ಪಕ್ಷದ ನಿರ್ಧಾರಕ್ಕೆ ಬದ್ಧರಾಗಬೇಕು’ ಎಂದು ಮಾಲೀಕಯ್ಯ ಗುತ್ತೇದಾರ ‘ಪ್ರಜಾವಾಣಿ’ಗೆ ತಿಳಿಸಿದರು.

*

ಇದು ನನ್ನ ಕೊನೇ ಚುನಾವಣೆ. ಮುಂದಿನ ಸಲ ನಿತಿನ್‌ಗೆ ಅವಕಾಶ ಇದೆ. ಇಷ್ಟಾಗಿಯೂ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರ ಪರ ನಾನು ಕೆಲಸ ಮಾಡುವೆ.
–ಮಾಲೀಕಯ್ಯ ಗುತ್ತೇದಾರ, ಉಪಾಧ್ಯಕ್ಷ, ಬಿಜೆಪಿ ರಾಜ್ಯ ಘಟಕ

*

ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅಣ್ಣ ಮಾಲೀಕಯ್ಯ ನನಗೆ ಹೇಳಿದ್ದರು. ಸಮೀಕ್ಷೆಯಲ್ಲೂ ನನ್ನ ಹೆಸರು ಮುಂಚೂಣಿಯಲ್ಲಿದೆ. ಈಗಲಾದರೂ ಅವರು ನನಗೆ ಟಿಕೆಟ್ ಕೊಡಿಸಬೇಕು.
–ನಿತಿನ್ ಗುತ್ತೇದಾರ, ಬಿಜೆಪಿ ಟಿಕೆಟ್ ಆಕಾಂಕ್ಷಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.