ADVERTISEMENT

ಕಲಬುರಗಿ: ಶಾಲಾ ವಾಹನ ಚಾಲಕನಿಗೆ ಥಳಿತ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2024, 16:01 IST
Last Updated 9 ಅಕ್ಟೋಬರ್ 2024, 16:01 IST
ಕಲಬುರಗಿಯ ಶಹಾಬಾದ್ ರಸ್ತೆಯಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಶಾಲಾ ವಾಹನದ ಮುಂಭಾಗ ಜಖಂಗೊಂಡಿರುವುದು
ಕಲಬುರಗಿಯ ಶಹಾಬಾದ್ ರಸ್ತೆಯಲ್ಲಿ ಬುಧವಾರ ಸಂಭವಿಸಿದ ಅಪಘಾತದಲ್ಲಿ ಶಾಲಾ ವಾಹನದ ಮುಂಭಾಗ ಜಖಂಗೊಂಡಿರುವುದು   

ಕಲಬುರಗಿ: ಶಹಾಬಾದ್ ರಸ್ತೆಯಲ್ಲಿ ಬುಧವಾರ ಖಾಸಗಿ ಶಾಲಾ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ವಾಹನಗಳಿಗೆ ಡಿಕ್ಕಿ ಹೊಡೆದು, ವಿದ್ಯಾರ್ಥಿಗಳಿಗೆ ಗಾಯಗೊಳಿಸಿದ ಚಾಲಕನಿಗೆ ಸಾರ್ವಜನಿಕರು ಥಳಿಸಿದ್ದಾರೆ.

ಸಂಚಾರ ಪೊಲೀಸ್ ಠಾಣೆ– 2ರ ಸಿಬ್ಬಂದಿ ಆರೋಪಿ ಚಾಲಕ ಶಿವಕುಮಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಪಘಾತದಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿ ಆರು ಮಂದಿಗೆ ಸಣ್ಣ– ಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಹಾಬಾದ್ ರಸ್ತೆಯಲ್ಲಿ ವೇಗವಾಗಿ ಶಾಲಾ ವಾಹನ ಚಲಾಯಿಸಿದ ಶಿವಕುಮಾರ, ವಾಹನದ ನಿಯಂತ್ರಣ ತಪ್ಪಿ ಕಾರು, ಆಟೊ ಮತ್ತು ಬೈಕ್‌ಗಳಿಗೆ ಡಿಕ್ಕಿ ಹೊಡೆಸಿದ್ದಾನೆ. ಇದರಿಂದ ತಲಾ ಎರಡು ಕಾರು ಮತ್ತು ಆಟೊ ಹಾಗೂ ಮೂರು ಬೈಕ್‌ಗಳಿಗೆ ಹಾನಿಯಾಗಿದೆ. ಶಾಲಾ ವಾಹನದ ಮುಂಭಾಗವೂ ಜಖಂಗೊಂಡಿದ್ದು, ಶಾಲಾ ವಾಹನದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಸರಣಿ ಅಪಘಾತದಿಂದ ಕೋಪಗೊಂಡ ಸಾರ್ವಜನಿಕರು ವಾಹನ ಚಾಲಕನನ್ನು ಹಿಡಿದು ಥಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಸರಣಿ ಅಪಘಾತದಿಂದಾಗಿ ವಾಹನ ದಟ್ಟಣೆಯ ಶಹಾಬಾದ್ ರಸ್ತೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಕಂಡುಬಂತು. ನೂರಾರು ಜನರು ಜಮಾಯಿಸಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಆರೋಪಿಯನ್ನು ವಶಕ್ಕೆ ಪಡೆದು ವಾತಾವರಣವನ್ನು ತಿಳಿಗೊಳಿಸಿದರು.

ಕಲಬುರಗಿಯ ಶಹಾಬಾದ್ ರಸ್ತೆಯಲ್ಲಿ ಬುಧವಾರ ಅಡ್ಡಾದಿಡ್ಡಿ ಶಾಲಾ ವಾಹನ ಚಲಾಯಿಸಿದ ಚಾಲಕ ಶಿವಕುಮಾರನನ್ನು ವಶಕ್ಕೆ ಪಡೆದ ಕಾನ್‌ಸ್ಟೆಬಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.