ಕಲಬುರಗಿ: ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರವಾದ ಕಲಬುರಗಿ ಜಿಲ್ಲೆಯ ರಸ್ತೆಗಳಲ್ಲಿ ಗುಂಡಿಗಳದ್ದೇ ಕಾರುಬಾರು. ಜಿಲ್ಲೆಯಲ್ಲಿ ಸುತ್ತಿದ್ದರೇ ರಾಷ್ಟ್ರೀಯ, ರಾಜ್ಯ ಮತ್ತು ಮುಖ್ಯ ರಸ್ತೆಗಳು ಸೇರಿದಂತೆ ಬಹುತೇಕ ಉಪ ಹಾಗೂ ಗ್ರಾಮೀಣ ರಸ್ತೆಗಳಲ್ಲಿ ತಗ್ಗು–ಗುಂಡಿಗಳೇ ಕಾಣಿಸುತ್ತವೆ. ಇನ್ನು ಬಡಾವಣೆಯ ರಸ್ತೆಗಳ ಪರಿಸ್ಥಿತಿ ಅಧೋಗತಿಗೆ ತಲುಪಿದೆ.
ನಗರದ ಜನನಿಬಿಡ ಪ್ರದೇಶಗಳಾದ ಕೇಂದ್ರ ಬಸ್ ನಿಲ್ದಾಣ ಮುಂಭಾಗದ ರಸ್ತೆ, ಐವಾನ್ ಇ ಶಾಹಿ ಬಡಾವಣೆ ರಸ್ತೆಗಳು, ಕುವೆಂಪು ನಗರ, ತಾಜ್ ಸುಲ್ತಾನಪುರ ರಸ್ತೆಯ ರೈಲ್ವೆ ಅಂಡರ್ ಪಾಸ್, ಗಂಜ್ ಪ್ರದೇಶದ ರಸ್ತೆಗಳು ಸೇರಿದಂತೆ ಚಿತ್ತಾಪುರ, ಅಫಜಲಪುರ, ಜೇವರ್ಗಿ, ಕಾಳಗಿ, ಆಳಂದ, ಸೇಡಂ ತಾಲ್ಲೂಕುಗಳ ಗ್ರಾಮೀಣ ಭಾಗದ ರಸ್ತೆಗಳು ತಗ್ಗು–ಗುಂಡಿಗಳಿಂದ ಆವೃತವಾಗಿವೆ.
ಡಾಂಬರ್ ಹಾಗೂ ಜಲ್ಲಿ ಕಿತ್ತು ಹೋಗಿ ರಸ್ತೆಗಳು ದೂಳುಮಯವಾಗಿದ್ದು, ಕಡು ಬೇಸಿಗೆಯಲ್ಲಿ ವಾಹನ ಸವಾರರು ದೂಳಿನ ಮಜ್ಜನದೊಂದಿಗೆ ಪ್ರಯಾಣಿಸುವಂತಿದೆ. ಸ್ವಲ್ಪವೇ ಆಯತಪ್ಪಿದರೂ ‘ಗುಂಡಿ’ಯ ಅನಾಹುತ ತಪ್ಪಿದ್ದಲ್ಲ. ಊರು ತಲುಪುವಷ್ಟರಲ್ಲಿ ಮೈಕೈ ನೋವು ಸಹ ತಪ್ಪುವುದಿಲ್ಲ!
ರಸ್ತೆ ನಿರ್ಮಾಣವಾಗಿ ಒಂದು ವರ್ಷ ಕಳೆಯುವುದರ ಒಳಗಾಗಿ ಕೆಲವು ಕಡೆಗಳಲ್ಲಿ ಗುಂಡಿಗಳು ಬಾಯಿತೆರೆದು ಅಪಾಯಕ್ಕೆ ಆಹ್ವಾನಿಸುತ್ತಿವೆ. ಕಳಪೆ ಕಾಮಗಾರಿಯಿಂದಾಗಿ ಬಿದ್ದ ಮೊದಲ ಮಳೆಗೆ ರಸ್ತೆಗಳು ಹಾಳಾಗುತ್ತಿವೆ. ಪರಿಣಿತ ಎಂಜಿನಿಯರ್‌ಗಳಿಂದ ಕಾಮಗಾರಿಯ ವಿಸ್ತೃತ ವರದಿ, ಗುತ್ತಿಗೆದಾರರು, ನಿರ್ವಹಣೆ ಇದ್ದರೂ ಗುಣಮಟ್ಟ ಕಾಪಾಡಿಕೊಳ್ಳಲು ಆಗುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮದ ಪ್ರಕರಣಗಳು ಸಹ ವಿರಳವಾಗಿವೆ. ಇದು ರಸ್ತೆಯ ಗುಣಮಟ್ಟದ ಹಾದಿಯನ್ನೇ ತಪ್ಪಿಸಿದೆ.
‘ವಾಹನಗಳ ಓಡಾಟಕ್ಕೆ ಯೋಗ್ಯವಲ್ಲದ ರಸ್ತೆಗಳಿಂದ ವಾಹನಗಳ ಬಾಳಿಕೆಯ ಅವಧಿ ಕ್ಷೀಣಿಸುತ್ತಿದೆ. ವಾಹನದ ಬಿಡಿ ಭಾಗಗಳು ಹಾಳಾಗಿ ಕೆಟ್ಟು ನಿಲ್ಲುತ್ತಿವೆ. ಇದರಿಂದ ವಾಹನ ಚಾಲಕರು, ಮಾಲೀಕರು ನಿತ್ಯ ಆರ್ಥಿಕ ಹೊರೆ ಅನುಭವಿಸುವಂತಾಗಿದೆ. ಯಾರೋ ಮಾಡಿದ ತಪ್ಪಿಗೆ ನಾವು ಬೆಲೆ ತೆರಬೇಕಾಗಿದೆ’ ಎನ್ನುತ್ತಾರೆ ತ್ರಿಚಕ್ರ ವಾಹನ ಚಾಲಕ ಮನೋಹರ್.
‘ಮಳೆಗಾಲದಲ್ಲಿ ಗ್ರಾಮೀಣ ಭಾಗದ ರಸ್ತೆಗಳು ಕೆಸರು ಗದ್ದೆಯಂತೆ ಆಗುತ್ತವೆ. ರಸ್ತೆ ಯಾವುದು, ತಗ್ಗು ಯಾವುದು ಎನ್ನುವುದು ತಿಳಿಯದಂತೆ ಮಳೆ ನೀರು ನಿಂತಿರುತ್ತದೆ. ರಸ್ತೆಯಂದು ತಿಳಿದು ಹಲವು ಬೈಕ್ ಸವಾರರು ಬಿದ್ದು ಆಸ್ಪತ್ರೆ ಸೇರಿದ ಸಾಕಷ್ಟು ನಿದರ್ಶನಗಳಿವೆ’ ಎಂದರು.
ಆಡಳಿತದ ಶಕ್ತಿ ಕೇಂದ್ರವಾದ ಕಲಬುರಗಿ ನಗರದ ರಸ್ತೆಗಳು ಗುಂಡಿಗಳಿಂದ ಹೊರತಾಗಿಲ್ಲ. ಸ್ವಲ್ಪವೇ ಮಳೆ ಬಿದ್ದರೆ ಪ್ರಮುಖ ರಸ್ತೆಗಳ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ಗುಂಡಿಗಳಿಂದಾಗಿ ವಾಹನಗಳು ಸರಾಗವಾಗಿ ಚಲಿಸಿದೆ ವಾಹನ ದಟ್ಟಣೆ ಕಂಡುಬರುತ್ತಿದೆ. ಎಸ್‌ವಿಪಿ– ಸೂಪರ್ ಮಾರ್ಕೆಟ್‌ನ ಜಿಲ್ಲಾ ಪಂಚಾಯಿತಿ ಸಭಾಂಗಣದ ಬದಿಯಿಂದ ಜಿ.ಪಂ ಕಚೇರಿಗೆ ಹೋಗುವ ರಸ್ತೆಯ ಎರಡೂ ಬದಿಯಲ್ಲಿ ತಗ್ಗು–ಗುಂಡಿಗಳು ಬಿದ್ದಿರುವುದು ಇಲ್ಲಿನ ಆಡಳಿತ ವೈಖರಿಗೆ ಹಿಡಿದ ಕನ್ನಡಿ ಎನ್ನುತ್ತಾರೆ ಬೈಕ್ ಸವಾರ ಪಿ. ಅಶೋಕ.
ಪೂರಕ ಮಾಹಿತಿ: ಮಲ್ಲಿಕಾರ್ಜುನ ಎಂ.ಎಚ್, ಶಿವಾನಂದ ಹಸರಗುಂಡಗಿ, ಅವಿನಾಶ ಬೋರಂಚಿ, ಗುಂಡಪ್ಪ ಕರೆಮನೋರ, ರಘುವೀರ್ ಸಿಂಗ್ ಮತ್ತು ಮಂಜುನಾಥ ದೊಡಮನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.