ADVERTISEMENT

ಚಿತ್ತಾಪುರ | ಹದಗೆಟ್ಟ ರಸ್ತೆ: ಸಾರ್ವಜನಿಕರಲ್ಲಿ ಅಪಘಾತ ಭಯ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2023, 5:36 IST
Last Updated 17 ಡಿಸೆಂಬರ್ 2023, 5:36 IST
<div class="paragraphs"><p><strong>ಚಿತ್ತಾಪುರ ತಾಲ್ಲೂಕಿನ ಮರಗೋಳ ಕ್ರಾಸದಿಂದ ದಂಡೋತಿ ಮಾರ್ಗವಾಗಿ ತೆಂಗಳಿ ಕ್ರಾಸಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ-೧೨೬ ಹದಗೆಟ್ಟು ರಸ್ತೆಯಲ್ಲಿ ಗುಂಡಿಗಳು ಉಂಟಾಗಿ ಸಂಚಾರಕ್ಕೆ ಸಮಸ್ಯೆಯಾಗಿದೆ.</strong></p></div>

ಚಿತ್ತಾಪುರ ತಾಲ್ಲೂಕಿನ ಮರಗೋಳ ಕ್ರಾಸದಿಂದ ದಂಡೋತಿ ಮಾರ್ಗವಾಗಿ ತೆಂಗಳಿ ಕ್ರಾಸಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ-೧೨೬ ಹದಗೆಟ್ಟು ರಸ್ತೆಯಲ್ಲಿ ಗುಂಡಿಗಳು ಉಂಟಾಗಿ ಸಂಚಾರಕ್ಕೆ ಸಮಸ್ಯೆಯಾಗಿದೆ.

   

ಚಿತ್ತಾಪುರ: ಪಟ್ಟಣದಿಂದ 5 ಕಿ.ಮೀ ದೂರದಲ್ಲಿರುವ ಮರಗೋಳ ಕ್ರಾಸ್‌ನಿಂದ ದಂಡೋತಿ ಗ್ರಾಮದ ಮಾರ್ಗವಾಗಿ ತೆಂಗಳಿ ಕ್ರಾಸ್ ಸಂಪರ್ಕಿಸುವ ರಾಜ್ಯ ಹೆದ್ದಾರಿ-126 ರಸ್ತೆ ಹದಗೆಟ್ಟಿದ್ದು ವಾಹನ ಸವಾರರು ಅಪಘಾತದ ಭಯದಲ್ಲೇ ಸಂಚರಿಸುವಂತಾಗಿದೆ.

ಮರಗೋಳ ಕ್ರಾಸ್‌ನಿಂದ ಕಾಗಿಣಾ ನದಿ ಸೇತುವೆ, ದಂಡೋತಿ ಗ್ರಾಮದ ಮಾರ್ಗವಾಗಿ ಸೇಡಂ-ಕಲಬುರಗಿ ಹೆದ್ದಾರಿಗೆ ಸಂಪರ್ಕಿಸುವ ರಸ್ತೆ ಹಾಳಾಗಿದೆ. ರಸ್ತೆ ಸುಧಾರಣೆ ಮತ್ತು ದುರಸ್ತಿ ಮಾಡದೇ ಕಡೆಗಣಿಸಿದ್ದರಿಂದ ಗುಂಡಿಗಳು ದೊಡ್ಡವಾಗಿವೆ. ಕಾಗಿಣಾ ನದಿ ಸೇತುವೆ ಬಳಿ ತಿರುವು ರಸ್ತೆ ಸಂಪೂರ್ಣ ಹಾಳಾಗಿದೆ. ಸೇತುವೆಯಿಂದ ದಂಡೋತಿ ಮಾರ್ಗವಾಗಿ ತೆಂಗಳಿ ಕ್ರಾಸ್‌ವರೆಗೆ ರಸ್ತೆಯಲ್ಲಿನ ಗುಂಡಿಗಳನ್ನು ತಪ್ಪಿಸಿಕೊಂಡು ಬಸ್ ಓಡಿಸುವುದು ಚಾಲಕರಿಗೆ ಸಮಸ್ಯೆಯಾಗುತ್ತಿದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವಂತಿದೆ ಪರಿಸ್ಥಿತಿ.

ADVERTISEMENT

ಹದಗೆಟ್ಟಿರುವ ಇದೇ ಹೆದ್ದಾರಿ ಮೂಲಕ ಚಿತ್ತಾಪುರದಿಂದ ಜಿಲ್ಲಾ ಕೆಂದ್ರ ಕಲಬುರಗಿ, ತಾಲ್ಲೂಕು ಕೇಂದ್ರಗಳಾದ ಕಾಳಗಿ, ಸೇಡಂ ಪಟ್ಟಣಕ್ಕೆ ದಿನಾಲೂ ಬಸ್ ಸಂಚರಿಸುತ್ತವೆ. ತಲುಪಬೇಕಾದ ನಗರ, ಪಟ್ಟಣ, ಗ್ರಾಮಗಳಿಗೆ ನಿಗದಿತ ಸಮಯಕ್ಕೆ ಬಸ್ ತಲುಪಲು ವಿಳಂಬವಾಗಿ ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕರು ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ರಸ್ತೆ ಹಾಳಾಗಿದ್ದರಿಂದ ಈ ಮಾರ್ಗದಿಂದ ಕಲಬುರಗಿಗೆ ಸಂಚರಿಸುತ್ತಿದ್ದ ಬಸ್ ಸಂಚಾರ ಕಡಿಮೆಗೊಳಿಸಿ ಶಹಾಬಾದ್ ಮಾರ್ಗವಾಗಿ ಬಸ್ ಸಂಚಾರ ಹೆಚ್ಚಿಸಲಾಗಿದೆ. ಬಸ್ ಕೊರತೆಯಿಂದ ಚಿತ್ತಾಪುರದ ಶಾಲಾ ಕಾಲೇಜಿಗೆ ಬರಲು, ಕಲಬುರಗಿ ನಗರಕ್ಕೆ ಹೋಗಿ ಬರಲು ಗ್ರಾಮೀಣ ವಿದ್ಯಾರ್ಥಿಗಳು ಸಮಸ್ಯೆ ಅನುಭವಿಸುತ್ತಿದ್ದಾರೆ. ಸಾರಿಗೆ ಅಧಿಕಾರಿಗಳು ಬಸ್ ಸಂಚಾರ ಹೆಚ್ಚಿಸ ಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಶಾಲಾ ಕಾಲೇಜಿನ ಸಮಯಕ್ಕೆ ಕೆಲವೊಮ್ಮೆ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿರುವುದರಿಂದ ಬಸ್ ನಿರ್ವಾಹಕ ಮತ್ತೊಂದು ಬಸ್ ಬರುತ್ತಿದೆ ಎಂದು ಹೇಳಿ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದಿಲ್ಲ ಎಂದು ದಂಡೋತಿ ಗ್ರಾಮದ ವಿದ್ಯಾರ್ಥಿಗಳು ಹೇಳುತ್ತಾರೆ. ಸಂಬಂಧಿತ ಇಲಾಖೆಯ ಅಧಿಕಾರಿಗಳು ಹದಗೆಟ್ಟ ರಸ್ತೆಯ ಕುರಿತು ಗಮನ ಹರಿಸಬೇಕು. ಸುಗಮ ಸಂಚಾರ ಮತ್ತು ಸಕಾಲಕ್ಕೆ ಪ್ರಯಾಣಿಕರು, ಸಾರ್ವಜನಿಕರು ನಿಗಧಿತ ಸ್ಥಳಕ್ಕೆ ತಲುಪಲು ಹದಗೆಟ್ಟ ರಸ್ತೆ ಸುಧಾರಣೆ ಮಾಡಿಸಿ ಅನುಕೂಲ ಮಾಡಿಕೊಡಬೇಕು ಎಂದು ಜನರು ಮನವಿ ಮಾಡಿದ್ದಾರೆ.

ಗುಂಡಿಗಳಿಂದ ತುಂಬಿದ ರಸ್ತೆ

ವಾಡಿ: ರಾವೂರು ಸಮೀಪದ ರಾವೂರು ಕ್ರಾಸ್‌ನಿಂದ ಚಿತ್ತಾಪುರ ಪಟ್ಟಣ ಸಂಪರ್ಕಿಸುವ ರಸ್ತೆ ಮೇಲೆ ಗುಂಡಿಗಳು ಬಿದ್ದಿದ್ದು ವಾಹನ ಸವಾರರ ಪಾಲಿಗೆ ಮೃತ್ಯುಕೂಪಗಳಾಗಿವೆ. ಒಂದು ಗುಂಡಿ ತಪ್ಪಿಸುವಷ್ಟರಲ್ಲಿ ಮತ್ತೊಂದು ಗುಂಡಿ ಎದುರಾಗುವ ಭೀತಿ ಬಂದೊದಗಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಸುಮಾರು 5 ಕಿ.ಮೀ. ಡಾಂಬರ್‌ ರಸ್ತೆ ಮೇಲೆ ಅಲ್ಲಲ್ಲಿ ಬಿದ್ದಿರುವ ಗುಂಡಿಗಳಿಂದ ಈಗಾಗಲೇ ಹಲವು ಸಣ್ಣಪುಟ್ಟ ಅಪಘಾತಗಳು ಜರುಗಿವೆ. ಸಿಮೆಂಟ್ ಕಾರ್ಖಾನೆಗಳಿಗೆ ಕಚ್ಚಾ ಪದಾರ್ಥ ಪೂರೈಸುವ ಹಾಗೂ ಸಿಮೆಂಟ್ ಹೊತ್ತೊಯುವ ಬೃಹತ್ ಲಾರಿಗಳು, ಟ್ರಕ್ ಸೇರಿದಂತೆ ದೊಡ್ಡ ವಾಹನಗಳು, ಪ್ರಯಾಣಿಕರನ್ನು ಕೂಡಿಸಿಕೊಂಡು ಆಟೋಗಳು ಹಗಲು ರಾತ್ರಿಯೆನ್ನದೇ ಚಲಿಸುತ್ತವೆ. ರಾಷ್ಟ್ರೀಯ ಹೆದ್ದಾರಿ 150ಕ್ಕೆ ಈ ರಸ್ತೆ ನೇರ ಸಂಪರ್ಕ ಹೊಂದಿದ್ದು ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿದ್ದು ಅಪಾಯದ ಸಾಧ್ಯತೆ ಬಹಳ ಹೆಚ್ಚಾಗಿದೆ. ರಸ್ತೆಯಲ್ಲಿ ಕಂದಕಗಳು ಮತ್ತಷ್ಟು ಹೆಚ್ಚಾಗುತ್ತಿದ್ದು, ಗುಂಡಿಗಳಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ರಸ್ತೆ ಮೇಲೆ ಹಲವು ಗುಂಡಿಗಳು ಬಿದ್ದಿದ್ದರೂ ದುರಸ್ತಿ ಮಾಡದೇ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾತ್ರಿ ವೇಳೆಯಲ್ಲಿ ಬೈಕ್ ತೆಗೆದುಕೊಂಡು ಬರಬೇಕಾದರೆ ಗುಂಡಿಗಳ ಕಾರಣದಿಂದ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಬರಬೇಕಾಗಿದೆ. ದೊಡ್ಡ ವಾಹನಗಳು ಎದುರು ಬಂದರೆ ಕೆಳಗಿಳಿಸಬೇಕೆಂದರೆ ಮುರುಮ್‌ನಿಂದ ರಸ್ತೆ ಸಮತಟ್ಟುಗೊಳಿಸದ ಕಾರಣ ಕಂದಕಕ್ಕೆ ಬೀಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ರಾವೂರು ನಿವಾಸಿಗಳಾದ ಮಹೇಬೂಬ್ ಹಾಗೂ ಶಿವಕುಮಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.