ಶಹಾಬಾದ್: ತಾಲ್ಲೂಕಿನ ಭಂಕೂರ, ಸಣ್ಣೂರ ರಸ್ತೆಯ ಮುಗುಳನಾಗಾವಿ ಕ್ರಾಸ್ ಬಳಿ ಪಾದಚಾರಿಗಳಿಂದ ಹಣ, ಬಂಗಾರ, ಬೆಲೆಬಾಳುವ ವಸ್ತುಗಳನ್ನು ದರೋಡೆ ಮಾಡಲು ಹೊಂಚು ಹಾಕುತ್ತಿದ್ದ 9 ಜನರನ್ನು ಪೊಲೀಸರು ಬಂಧಿಸಿದ್ದು, ಪ್ರಮುಖ ಆರೋಪಿ ಪರಾರಾಯಾಗಿದ್ದಾನೆ.
ಸೋಮವಾರ ಬೆಳಿಗ್ಗೆ 6.30ರ ಸುಮಾರಿಗೆ ಮುಗುಳನಾಗಾವಿ ಕ್ರಾಸ್ ಬಳಿ ದಾರಿಹೋಕರನ್ನು ಅಡ್ಡಗಟ್ಟಿ ಅವರಿಂದ ಹಣ, ಬಂಗಾರ, ಬೆಲೆ ಬಾಳುವ ವಸ್ತುಗಳನ್ನು ದೋಚುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದ ದೇವಲ ಗಾಣಗಾಪುರದ ಹಣಮಂತ ಬಸಣ್ಣ ಕೋಳೆಕರ, ಅರುಣಕುಮಾರ ಶಿವಾಜಿ ಹೊನ್ನೂರ, ಭಂಕೂರ ಶಾಂತನಗರದ ಜಗನ್ನಾಥ ಈಶ್ವರಪ್ಪ ಕಣಮೇಶ್ವರ, ಶ್ರೀಧರ ಮಹೇಶ ಧನ್ನಾ, ಕಲಬುರಗಿಯ ಶಹಾಬಜಾರದ ವಿಶಾಲ ಸುಭಾಷ ನಿಲೂರಕರ್, ಭೂತಪೂರದ ಸುನೀಲ ಚಂದ್ರಕಾಂತ ಮಂತಟ್ಟಿ, ಶಹಾಬಾದ ನಿಜಾಮ ಬಜಾರದ ಚಂದ್ರಕಾಂತ ತುಕಾರಾಮ ಬುರಲೆ, ಬಿರಾಳದ ವಜೀರ ದ್ಯಾವಪ್ಪ ಗೋಗಿ, ನಾವದಗಿಯ ಪರ್ವತರೆಡ್ಡಿ ಬಸವರೆಡ್ಡಿ ಎಂಬುವರನ್ನು ಪಿಐ ನಟರಾಜ ಲಾಡೆ, ಕಾಳಗಿ ಸಿಪಿಐ ಅಮೋಜ ಕಾಂಬಳೆ, ಪಿಎಸ್‌ಐ ಸುದರ್ಶನ ರೆಡ್ಡಿ, ಸಿಬ್ಬಂದಿ ದಾಳಿ ನಡೆಸಿ, 9 ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 25 ಅಡಿ ಉದ್ದದ ನೂಲಿನ ಹಗ್ಗ, ಕಪ್ಪು ಬಣ್ಣದ ಮುಖವಾಡ, ಸಂಖ್ಯೆ ಇಲ್ಲದ ಸಿಲ್ವರ್ ಬಣ್ಣದ ಡಸ್ಟರ್ ಕಾರ್, ಕೆಂಪು ಬಣ್ಣದ ಸ್ಕೂಟಿ, ಬಡಿಗೆ, ಕಬ್ಬಿಣದ ರಾಡು, ಚಾಕುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ವಿಜಯಕುಮಾರ ಹಳ್ಳಿ ತಲೆ ಮರೆಸಿಕೊಂಡಿದ್ದಾನೆ. ಆರೋಪಿ ವಿಜಯಕುಮಾರ ಬಂಧಿಸಲು ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಪ್ರಮುಖ ಆರೋಪಿ ವಿಜಯಕುಮಾರ ಶಹಾಬಾದ್ ನಗರದ ಸುತ್ತಲಿನ ಪ್ರದೇಶದಲ್ಲಿ ಅಮಾಯಕ ಜನರಿಗೆ ಹೆದರಿಸಿ, ಬೆದರಿಸಿ, ಹಣ ಕೀಳುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ. ಬಂಧಿಸಿದ 9 ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.