
ಕಲಬುರಗಿಯಲ್ಲಿ ಮಂಗಳವಾರ ನಡೆದ ಶಾಂತಿ ಸಭೆಯ ಬಳಿಕ ಚಿತ್ತಾಪುರನಲ್ಲಿ ‘ಪಥಸಂಚಲನ’ಕ್ಕೆ ಅನುಮತಿ ಕೋರಿರುವ ವಿವಿಧ ಸಂಘಟನೆಗಳ ಮುಖಂಡರು ಒಗ್ಗಟ್ಟು ಪ್ರದರ್ಶಿಸಿದರು
ಪ್ರಜಾವಾಣಿ ಚಿತ್ರ
ಕಲಬುರಗಿ: ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 2ರಂದು ‘ಪಥಸಂಚಲನ’– ಪ್ರತಿಭಟನೆಗೆ ಅನುಮತಿ ಕೋರಿರುವ ಸಂಘಟನೆಗಳೊಂದಿಗೆ ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾಡಳಿತ ಮಂಗಳವಾರ ನಡೆಸಿದ ‘ಶಾಂತಿ ಸಭೆ’ಯಲ್ಲಿ ಒಮ್ಮತದ ತೀರ್ಮಾನ ಮೂಡಲಿಲ್ಲ.
ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 11.45ಕ್ಕೆ ಆರಂಭವಾದ ಸಭೆ ಒಂದೂವರೆ ಗಂಟೆ ನಡೆಯಿತು. ಆರ್‌ಎಸ್‌ಎಸ್ ಹಾಗೂ ಭೀಮ್ ಆರ್ಮಿ, ಭಾರತೀಯ ದಲಿತ ಪ್ಯಾಂಥರ್ ಸೇರಿ ಉಳಿದ ಸಂಘಟನೆಗಳ ಮುಖಂಡರು ತಮ್ಮ ನಿಲುವುಗಳಿಗೆ ಅಂಟಿಕೊಂಡರು ಎಂದು ಮೂಲಗಳು ಹೇಳಿವೆ.
ಒಮ್ಮತದ ನಿರ್ಧಾರವಿಲ್ಲದೇ ಗೊಂದಲದಲ್ಲೇ ಸಭೆ ಮುಗಿಯಿತು. ಒಂದು ಹಂತದಲ್ಲಿ, ‘ಪರ್ಯಾಯ ದಿನ, ಇಲ್ಲವೇ ಅದೇ ದಿನ ವಿಭಿನ್ನ ಸಮಯಕ್ಕೆ ಪಥಸಂಚಲನ ನಡೆಸಲು ಸಾಧ್ಯವೇ’ ಎಂದು ಜಿಲ್ಲಾಧಿಕಾರಿ ಅವರು ಸಂಘಟನೆಗಳ ಪ್ರತಿನಿಧಿಗಳನ್ನು ಪ್ರಶ್ನಿಸಿದರು.
‘ಆರ್‌ಎಸ್‌ಎಸ್‌ನವರು ಲಾಠಿ ಬಿಟ್ಟು, ರಾಷ್ಟ್ರಧ್ವಜ, ಸಂವಿಧಾನ ಹಿಡಿದು ಸಾಗಿದರೆ, ಪರ್ಯಾಯ ದಿನ, ಬದಲಿ ಸಮಯದ ಬಗ್ಗೆ ಆಲೋಚಿಸುತ್ತೇವೆ’ ಎಂದು ಕೆಲ ಸಂಘಟನೆಗಳ ಪ್ರತಿನಿಧಿಗಳು ಹೇಳಿದರು. ‘ಆರ್‌ಎಸ್‌ಎಸ್ ಪಥಸಂಚಲನದ ದಿನವೇ ತಮಗೂ ಸಮಯ ಕೊಡಬೇಕು’ ಇತರೆ ಸಂಘಟನೆಗಳು ಆಗ್ರಹಿಸಿದವು.
‘ಲಾಠಿ ಬಿಟ್ಟು, ರಾಷ್ಟ್ರಧ್ವಜವಾಗಲಿ, ಸಂವಿಧಾನವಾಗಲಿ ಹಿಡಿದು ಪಥಸಂಚಲನ ನಡೆಸುವ ಬಗ್ಗೆ ಆರ್‌ಎಸ್‌ಎಸ್ ತನ್ನ ನಿಲುವು ಸ್ಪಷ್ಟಪಡಿಸಲಿಲ್ಲ’ ಎಂದು ಮೂಲಗಳು ತಿಳಿಸಿವೆ.
‘ಪ್ರತಿ ಸಂಘಟನೆಯ ಪ್ರತಿನಿಧಿಗಳಿಗೆ ಮಾತನಾಡಲು 5 ನಿಮಿಷ ಸಮಯ ನೀಡಲಾಗಿತ್ತು.ಕೆಲವರು ಲಿಖಿತವಾಗಿ ಅಭಿಪ್ರಾಯ ತಿಳಿಸಿದ್ದಾರೆ. ಜಿಲ್ಲಾಡಳಿತ ಇದೆಲ್ಲವನ್ನೂ ದಾಖಲಿಸಿಕೊಂಡಿದೆ’ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.
‘ಆರ್‌ಎಸ್‌ಎಸ್‌ನವರು ಲಾಠಿ ಬಿಟ್ಟು, ತ್ರಿವರ್ಣ ಧ್ವಜ, ಸಂವಿಧಾನ ಪ್ರತಿ ಹಿಡಿದು ಪಥಸಂಚಲನ ನಡೆಸಿದರೆ ಸಭೆಯ ದಿನಾಂಕ, ಸಮಯ ಬದಲಿಸಿಕೊಳ್ಳುವ ಬಗ್ಗೆ ಚಿಂತಿಸಲಾಗುವುದು’ ಎಂದು ಕೆಲವು ಸಂಘಟನೆಗಳ ಮುಖಂಡರು ಹೇಳಿದರು.
ಆರ್‌ಎಸ್‌ಎಸ್ ಪ್ರತಿನಿಧಿಸಿದ್ದ ಬಿಜೆಪಿ ಮುಖಂಡ ಅಂಬಾರಾಯ ಅಷ್ಟಗಿ, ‘ಪ್ರತಿಭಟನೆ–ಪಥಸಂಚಲನ ನಡೆಸಲು ಬಾಬಾಸಾಹೇಬರು ಬರೆದ ಸಂವಿಧಾನದಲ್ಲೇ ಅವಕಾಶವಿದೆ. ಲಾಠಿ ಬಿಟ್ಟುಬನ್ನಿ ಎನ್ನಲು ನೀವ್ಯಾರು’ ಎಂದು ಪ್ರಶ್ನಿಸಿದರು.
ಇದಕ್ಕೆ ವಿವಿಧ ಮುಖಂಡರಿಂದ ವಿರೋಧ ವ್ಯಕ್ತವಾಯಿತು. ಈ ಹಂತದಲ್ಲಿ ವಾಗ್ವಾದ ನಡೆದು ಸಭೆಯೇ ಬರಖಾಸ್ತುಗೊಂಡಿತು ಎಂದು ಮುಖಂಡರು ತಿಳಿಸಿದ್ದಾರೆ.
ಸಭೆಯ ಬಳಿಕ ಹೊರ ಬಂದ ದಲಿತ ಸಂಘಟನೆಗಳ ಮುಖಂಡರು ಅಂಬಾರಾಯ ಅಷ್ಟಗಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಶಾಂತಿ ಸಭೆಯಲ್ಲಿ ಒಮ್ಮತ ಮೂಡದ ಬೆನ್ನಲ್ಲೇ ಈಗ ಎಲ್ಲರ ಚಿತ್ತ ಹೈಕೋರ್ಟ್ ನತ್ತ ನೆಟ್ಟಿದೆ. ಕೋರ್ಟ್ ಏನು ನಿರ್ಧಾರ ಪ್ರಕಟಿಸಲಿದೆ ಎಂಬ ಕುತೂಹಲ ಗರಿಗೆದರಿದೆ.
‘ಈ ಕುರಿತ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅ.30ರ ಮಧ್ಯಾಹ್ನ 2.30ಕ್ಕೆ ನಿಗದಿಪಡಿಸಿದ್ದು, ಶಾಂತಿ ಸಭೆ ಕುರಿತ ವರದಿಯನ್ನು ಜಿಲ್ಲಾಡಳಿತ ಸಲ್ಲಿಸಲಿದೆ.
ನಾವು ಶಾಂತಿಯುತವಾಗಿ ನಿಲುವು ವ್ಯಕ್ತಪಡಿಸಿದೆವು. ಬೇರೆಯವರು ಕ್ರಾಂತಿಯ ಮಾತನಾಡಿದ್ದಾರೆ. ಇವರೆಲ್ಲರೂ ಸಚಿವ ಪ್ರಿಯಾಂಕ್ ಕಡೆಯ ಜನರು.-ಅಂಬಾರಾಯ ಅಷ್ಟಗಿ, ಆರ್‌ಎಸ್‌ಎಸ್ ಪ್ರತಿನಿಧಿಸಿದ್ದ ಬಿಜೆಪಿ ಮುಖಂಡ
ಆರ್‌ಎಸ್‌ಎಸ್ ಕಾರ್ಯಕರ್ತರು ಚಿತ್ತಾಪುರದಲ್ಲಿ ಏನು ಹಿಡಿದು, ಯಾವ ದಿನ ಪಥಸಂಚಲನ ನಡೆಸುತ್ತಾರೆಯೋ ಅದಕ್ಕೆ ತಕ್ಕ ಉತ್ತರ ನೀಡಲು ನಾವೂ ಅದೇ ದಿನ ಸನ್ನದ್ಧರಾಗಿರುತ್ತೇವೆ-ರಾಜೇಂದ್ರ ಕಪನೂರು, ಗೌರವಾಧ್ಯಕ್ಷ, ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘ
ಚಿತ್ತಾಪುರದಲ್ಲಿ ಪಥಸಂಚಲನ ನಡೆಸುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ನ ಕಲಬುರಗಿ ಪೀಠದ ತೀರ್ಪಿಗೆ ಅನುಗುಣವಾಗಿ ನಡೆಯುತ್ತೇವೆ-ಅಶೋಕ ಪಾಟೀಲ, ಆರ್‌ಎಸ್‌ಎಸ್ ಜಿಲ್ಲಾ ಸಂಘಚಾಲಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.